ಉತ್ತರ ಕನ್ನಡದ ಕೆಲ ಗ್ರಾಮಗಳಲ್ಲಿ ಇಂದು ದೀಪಾವಳಿ; ಈ ಹೆಚ್ಚು ಪಾಡ್ಯದ ಹಿನ್ನೆಲೆ ಗೊತ್ತಾ?..ಇಲ್ಲಿ ಗೋವುಗಳೇ ಮುಖ್ಯ | Deepavali gopooja Special celebration In Uttara kannada


ಉತ್ತರ ಕನ್ನಡದ ಕೆಲ ಗ್ರಾಮಗಳಲ್ಲಿ ಇಂದು ದೀಪಾವಳಿ; ಈ ಹೆಚ್ಚು ಪಾಡ್ಯದ ಹಿನ್ನೆಲೆ ಗೊತ್ತಾ?..ಇಲ್ಲಿ ಗೋವುಗಳೇ ಮುಖ್ಯ

ಗೋವುಗಳು

ನಾಡಿನಲ್ಲಿ ದೀಪಾವಳಿ (Deeapavali 2021) ಹಬ್ಬದ ಸಂಭ್ರಮ ಮುಗಿದಿದೆ..ಆದರೆ ಉತ್ತರ ಕನ್ನಡದಲ್ಲಿ ಕೆಲವು ಹಳ್ಳಿಗಳಲ್ಲಿ ಇಂದು ದೀಪಾವಳಿ ಹಬ್ಬ..! ಯಾವುದೇ ಧರ್ಮದ, ಯಾವುದೇ ಹಬ್ಬವಿರಲಿ ಸಾಮಾನ್ಯವಾಗಿ ಆಯಾ ಧರ್ಮದ ಜನ ಒಂದೇ ದಿನ ಹಬ್ಬವನ್ನಾಚರಿಸುತ್ತಾರೆ. ಅಂತೆಯೇ ದೀಪಾವಳಿಯನ್ನೂ ಕೂಡ ಇಡೀ ನಾಡು  ಪ್ರತಿವರ್ಷ ಸಾಮಾನ್ಯವಾಗಿ ಮೂರು ದಿನ ಆಚರಣೆ ಮಾಡುತ್ತದೆ. ಅಂತೆಯೇ ಈ ಬಾರಿಯೂ ನವೆಂಬರ್​ 4ರಿಂದ ನವೆಂಬರ್​ 6ರವರೆಗೂ ಈ ಹಬ್ಬ ಇತ್ತು. ದೇಶದ ವಿವಿಧ ಭಾಗಗಳಲ್ಲಿ ಆಚರಣೆ ವಿಭಿನ್ನ ಆಗಿರುವುದರಿಂದ ಅವರವರ ಸಂಪ್ರದಾಯಕ್ಕೆ ಸಂಬಂಧಪಟ್ಟಂತೆ ಆಚರಿಸಿಕೊಳ್ಳುತ್ತಾರೆ. 

ಆದರೆ ಉತ್ತರ ಕನ್ನಡ ಅದರಲ್ಲೂ ಶಿರಸಿ-ಸಿದ್ದಾಪುರ-ಯಲ್ಲಾಪುರ ತಾಲೂಕುಗಳ ಕೆಲ ಗ್ರಾಮಗಳಲ್ಲಿ ಇಂದು ದೀಪಾವಳಿ ಹಬ್ಬ. ಅಂದರೆ ಪ್ರತಿವರ್ಷವೂ ಈ ಗ್ರಾಮಗಳು ಎರಡು ದಿನ ತಡವಾಗಿಯೇ ಹಬ್ಬ ಆಚರಣೆ ಮಾಡುತ್ತಾರೆ.  ಉತ್ತರ ಕನ್ನಡದ ಭಾಗಗಳಲ್ಲಿ ದೀಪಾವಳಿ ಎಂದರೆ ಅಲ್ಲಿ ತುಂಬ ಮಹತ್ವ ಪಡೆದಿರುವುದು ಬಲೀಂದ್ರ ಪೂಜೆ ಮತ್ತು ಗೋಪೂಜೆ. ಇವೆರಡೂ ಕೂಡ ಬಲಿಪಾಡ್ಯಮಿ (ಪಾಡ್ಯ ತಿಥಿ)ಯಂದು ನಡೆಯುತ್ತವೆ. ಪಾಡ್ಯದ ಹಿಂದಿನ ಅಮಾವಾಸ್ಯೆಯ ದಿನ ಮುಂಜಾನೆ ಸೂರ್ಯೋದಯಕ್ಕೆ ಸರಿಯಾಗಿ ಪ್ರತಿ ಮನೆಯಲ್ಲೂ ಬಲಿವೇಂದ್ರ (ದಾನವ ರಾಜ)ನ ಪ್ರತಿಷ್ಠಾಪನೆಯಾಗುತ್ತದೆ. ಹಾಗೇ ಪಾಡ್ಯದ ದಿನ ಬಲಿ ರಾಜ ಮತ್ತು ಗೋವುಗಳಿಗೆ ದೊಡ್ಡ ಮಟ್ಟದಲ್ಲಿ ಪೂಜೆಯಾಗಲೇಬೇಕು. ಇದೇ ಈ ಭಾಗದ ವಿಶೇಷ.  ಆದರೆ ಹೆಚ್ಚು ಪಾಡ್ಯದ ದೀಪಾವಳಿ ನಡೆಯುವ ಭಾಗಗಳಲ್ಲಿ ತದಿಗೆ ದಿನ ಅಂದರೆ ಇಡೀ ನಾಡು ದೀಪಾವಳಿ ಆಚರಿಸಿದ ಎರಡು ದಿನಗಳ ನಂತರ ದೀಪಾವಳಿ, ಬಲಿಪೂಜೆ, ಗೋಪೂಜೆಗಳು ನಡೆಯುತ್ತವೆ.

ಯಾಕೆ ಹೀಗೆ ಆಚರಣೆ?
ಹೀಗೆ ದೀಪಾವಳಿಯನ್ನು ಎರಡು ದಿನ ತಡೆದು ಅಂದರೆ ತದಿಗೆ ದಿನ ಆಚರಿಸಲು ಒಂದು ಹಿನ್ನೆಲೆ ಇದೆ ಎಂಬುದಾಗಿ ಇಲ್ಲಿನ ಹಿರಿಯರು ಹೇಳುತ್ತಾರೆ. ಆಗಲೇ ಹೇಳಿದಂತೆ ಉತ್ತರ ಕನ್ನಡ ಭಾಗಗಳಲ್ಲಿ ದೀಪಾವಳಿಯೆಂದರೆ ಅಲ್ಲಿ ಗೋಪೂಜೆಯೇ ಆದ್ಯತೆ. ಆದರೆ ತುಂಬ ಹಿಂದಿನ ಕಾಲದಲ್ಲಿ ಒಂದು ಸಣ್ಣ ಸಮಸ್ಯೆ ಎದುರಾಗಿದ್ದೇ ತಡವಾಗಿ ಹಬ್ಬ ಆಚರಣೆ ಮಾಡಲು ಕಾರಣವಂತೆ. ಇಲ್ಲಿ ಮನೆಮನೆಗಳ ಹಸು, ಎತ್ತುಗಳನ್ನು ಹುಲ್ಲು ಮೇಯಲೆಂದು ಬೇಣ, ಗುಡ್ಡಗಳಿಗೆ ಬಿಡುತ್ತಾರೆ. ಎಲ್ಲ ಸಲವೂ ಅವುಗಳನ್ನು ಕಾಯಲು ಜನ ಇರುವುದಿಲ್ಲ. ಹೀಗೆ ಹಿಂದೊಮ್ಮೆ ಮೇಯಲು ಬಿಟ್ಟ ಹಸುಗಳು ದೀಪಾವಳಿ ದಿನ ತಮ್ಮ ಮನೆಗೆ ಬರಲಿಲ್ಲವಂತೆ. ಹುಲ್ಲು ಮೇಯಲು ಹೋಗಿ ದಾರಿ ತಪ್ಪಿಸಿಕೊಂಡು ಮನೆಗೆ ಬರಲಾಗದೆ, ಎರಡು ದಿನ ತಡವಾಗಿ ಬಂದವಂತೆ. ಗೋಪೂಜೆಯೇ ಪ್ರಧಾನ ಆಗಿದ್ದರಿಂದ ಆಯಾ ಮನೆಯವರು ನಾವೀಗ ದೀಪಾವಳಿ ಆಚರಣೆ ಮಾಡುವುದಿಲ್ಲ. ಗೋಪೂಜೆ ಮಾಡಲು ಗೋವುಗಳೇ ಇಲ್ಲ. ಹಸುಗಳು ಮನೆಗೆ ಬಂದಮೇಲೆ ಮಾಡುತ್ತೇವೆ ಎಂದು ಹೇಳಿ, ಎರಡು ದಿನಗಳ ಬಳಿಕ ತಮ್ಮ ಮನೆಯ ಗೋವುಗಳೆಲ್ಲ ಬಂದ ಬಳಿಕವೇ ದೀಪಾವಳಿ ಆಚರಿಸಿದ್ದಾರೆ. ಅದರಿಂದ ಮುಂದೆ ಆಯಾ ಕುಟುಂಬಗಳ ತಲೆಮಾರುಗಳ ಪೀಳಿಗೆ ಹೀಗೆ ಹೆಚ್ಚು ಪಾಡ್ಯದ ದೀಪಾವಳಿ ಆಚರಿಸಿಕೊಂಡು ಬಂದಿದ್ದಾರೆ ಎಂದು ಇಲ್ಲಿನ ಜನರು ನಂಬುತ್ತಾರೆ.  ಹಾಗಂತ ತದಿಗೆ ದಿನ ದೀಪಾವಳಿ ಆಚರಣೆ ಆಗುವ ಮನೆಗಳಲ್ಲಿ ಬೇರೇನೂ ವಿಭಿನ್ನ ಆಚರಣೆ ಇರುವುದಿಲ್ಲ. ಹಬ್ಬ ಎರಡು ದಿನ ತಡ ಎನ್ನುವುದನ್ನು ಬಿಟ್ಟರೆ ಉಳಿದಂತೆ ಬಲೀಂದ್ರ ಪೂಜೆ, ಲಕ್ಷ್ಮೀಪೂಜೆ, ಹೊಸ್ತಿಲುಪೂಜೆಗಳು ನಡೆಯುತ್ತವೆ.

ದೊಡ್ಡ ಹಬ್ಬ ದೀಪಾವಳಿ
ದೀಪಾವಳಿ ಮಲೆನಾಡಿನ ಜನರ ಪಾಲಿಗೆ ಅಕ್ಷರಶಃ ದೊಡ್ಡ ಹಬ್ಬ. ಈ ದಿನ ಗೋಪೂಜೆ ಅತಿ ಮಹತ್ವದ್ದಾರೂ, ಬಲೀಂದ್ರ ಪೂಜೆ ಮುಖ್ಯವಾದರೂ ಇನ್ನೂ ಹಲವು ಪೂಜೆಗಳು ನಡೆಯುತ್ತವೆ. ಬೆಟ್ಟ, ತೋಟದಲ್ಲಿ ಇರುವ ಚೌಡಿ (ಗ್ರಾಮ ದೇವತೆ), ಭೂತಪ್ಪ, ಹುಲಿದೇವರು ಸೇರಿ ಇನ್ನೂ ಹಲವು ದೇವರಿಗೆ ಪೂಜೆ ನಡೆಯಬೇಕು. ಮನೆಯಲ್ಲಿರುವ ವಾಹನಗಳು, ಗುದ್ದಲಿ, ಕತ್ತಿ, ನೆಲ ಅಗೆಯುವ ಸಾಮಗ್ರಿಗಳು, ಟಿವಿ, ಫ್ರಿಜ್​, ಹೊಲಿಯುವ ಮಶಿನ್​, ಕೋಣೆಗಳಲ್ಲಿರುವ ಬೀರುಗಳು, ಮಿಕ್ಸರ್​, ಗ್ರ್ಯಾಂಡರ್​ಗಳಿಗೆಲ್ಲ ಪೂಜೆ, ಆರತಿ ಆಗಲೇ ಬೇಕು. ಯಾವುದನ್ನೂ ತಪ್ಪಿಸುವಂತಿಲ್ಲ. ಹೀಗೆ ಉಳಿದೆಲ್ಲ ಪೂಜೆಯ ನಂತರ ಕೊನೆಯಲ್ಲಿ ಕೊಟ್ಟಿಗೆಯಲ್ಲಿರುವ ಗೋವುಗಳಿಗೆ ಪೂಜೆ. ಹಣ್ಣು ಅಡಕೆ ಮಾಲೆ, ಪಚ್ಚತೆನೆ ಮತ್ತು ಸಿಂಗಾರದಿಂದ ಮಾಲೆ ಮಾಡಿ ಅಲಂಕರಿಸಿ, ಗೋವುಗಳ ಮೈಗೆಲ್ಲ ಮುದ್ರೆ ಹಾಕಿ, ಗೋಗ್ರಾಸ ಕೊಟ್ಟು ಪೂಜಿಸಲಾಗುತ್ತದೆ. ಮಧ್ಯಾಹ್ನದ ನಂತರ ಅವುಗಳನ್ನು ಮತ್ತೆ ಬೇಣಕ್ಕೆ ಬಿಡಲಾಗುತ್ತದೆ. ಅವು ಸಂಜೆ ವಾಪಸ್​ ಬಂದ ಬಳಿಕ ದೃಷ್ಟಿ ತೆಗೆಯುವುದು ಕಡ್ಡಾಯ. ಹಾಗೇ, ಮುಸ್ಸಂಜೆ ಹೊತ್ತಿಗೆ ಬಲೀಂದ್ರ ವಿಸರ್ಜನೆಯಾಗಿ, ಅವನನ್ನು ಹಿತ್ತಲ ಬಾಗಿಲಿಗೆ ಕೊಂಡೊಯ್ದು ಮನೆಯ ಮೇಲೆ ಹಾಕುವ ಹಂಚಿನ ಮೇಲೆ ಎಸೆಯಲಾಗುತ್ತದೆ. ಆಗ ಇಂದು ಹೋಗಿ ಮುಂದೆ ಬಾ (ಇವತ್ತು ನಮ್ಮನೆಯಿಂದ ಹೋಗಿ, ಮತ್ತೆ ಮುಂದಿನ ದೀಪಾವಳಿಗೆ ಬಾ) ಎಂದು ಕೂಗುವುದು ಒಂದು ವಿಶೇಷ ಆಚರಣೆಯೇ ಸರಿ.

ಪಾಡ್ಯದಂದು ಆಚರಿಸುವ ಹಬ್ಬವಾಗಲೀ, ತದಿಗೆಯಂದು ಆಚರಿಸುವ ದೀಪಾವಳಿಯಾಗಲಿ ಪದ್ಧತಿಗಳು ಒಂದೇ. ಪ್ರತಿ ಮನೆಯಲ್ಲೂ ಹಬ್ಬದ ವಿಧಾನಗಳು ಒಂದೇ ಆಗಿವೆ. ಆದರೆ ಹೆಚ್ಚು ಪಾಡ್ಯದ ದೀಪಾವಳಿ ಒಂದು ವಿಶೇಷವಂತೂ ಹೌದು. ಹೀಗೆ ಹೆಚ್ಚು ಪಾಡ್ಯದ ದೀಪಾವಳಿಯಿಂದಾಗಿ ಕೆಲವರಿಗೆ ಎರಡರೆಡು ಬಾರಿ ದೀಪಾವಳಿ ಹಬ್ಬದಲ್ಲಿ ಪಾಲ್ಗೊಳ್ಳುವ ಸದಾವಕಾಶವೂ ಇರುತ್ತದೆ. ಅಂದರೆ ಒಂದು ಮನೆಯಲ್ಲಿ ಪಾಡ್ಯದಂದು ಹಬ್ಬವಿದ್ದರೆ, ಅವರ ನೆಂಟರ ಮನೆಯಲ್ಲಿ ಎಲ್ಲಾದರೂ ಹೆಚ್ಚು ಪಾಡ್ಯದವರು ಇದ್ದರೆ ಅವರು ಈ ಹಬ್ಬಕ್ಕೆ ಬರುತ್ತಾರೆ. ಇವರು ಎರಡು ದಿನ ಬಿಟ್ಟು ಅಲ್ಲಿಗೆ ಹೋಗುತ್ತಾರೆ. ಹಾಗಾಗಿ ಹಬ್ಬಕ್ಕೆ ನೆಂಟರಿಷ್ಟರು ಸೇರಿ ಇನ್ನಷ್ಟು ಮೆರಗೂ ಬರುತ್ತದೆ.

ಇದನ್ನೂ ಓದಿ:ಸ್ವಾತಿ ನಕ್ಷತ್ರದ ಮಳೆ ನೀರಿಗಿದೆ ಔಷಧೀಯ ಮಹತ್ವ; ಉತ್ತರ ಕನ್ನಡ ಜನರ ಪಾಲಿಗಂತೂ ಇದು ಅಮೃತಕ್ಕೆ ಸಮಾನ !

TV9 Kannada


Leave a Reply

Your email address will not be published. Required fields are marked *