ಉತ್ತರ ಕನ್ನಡ ‘ಕಿತ್ತೂರು ಕರ್ನಾಟಕಕ್ಕೆ: ಕರಾವಳಿ ಸೌಲಭ್ಯಗಳಿಂದ ವಂಚಿತ? | Uttara Kannada District is included in Kittur Karnataka list and people expressed sad


ಉತ್ತರ ಕನ್ನಡ ‘ಕಿತ್ತೂರು ಕರ್ನಾಟಕಕ್ಕೆ: ಕರಾವಳಿ ಸೌಲಭ್ಯಗಳಿಂದ ವಂಚಿತ?

ಮ್ಯಾಪ್​ನಲ್ಲಿ ಉತ್ತರ ಕನ್ನಡ

ಉತ್ತರ ಕನ್ನಡ: ‘ಮುಂಬೈ ಕರ್ನಾಟಕ’ ಎಂದು ಕರೆಯಲಾಗುತ್ತಿದ್ದ ಏಳು ಜಿಲ್ಲೆಗಳನ್ನು ‘ಕಿತ್ತೂರು ಕರ್ನಾಟಕ’ವೆಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ. ಆದರೆ ಇದಕ್ಕೆ ಮಲೆನಾಡು- ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ಇದೀಗ ಅಪಸ್ವರ ಕೇಳಿಬಂದಿದೆ. ಬೆಳಗಾವಿ ಪ್ರಾದೇಶಿಕ ವಿಭಾಗಕ್ಕೆ ಒಳಪಡುವ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳನ್ನು ಇನ್ನು ಮುಂದೆ ‘ಕಿತ್ತೂರು ಕರ್ನಾಟಕ ಪ್ರದೇಶ’ ಎಂದು ನಾಮಕರಣ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಂಸದೀಯ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಕೂಡ ತಿಳಿಸಿದ್ದಾರೆ. ಆದರೆ ದಾಖಲೆಗಳ ಪ್ರಕಾರ ಶೇ.80ರಷ್ಟು ಅರಣ್ಯ ಪ್ರದೇಶ, ಸುಮಾರು 130 ಕಿ.ಮೀ. ಕಡಲತೀರವನ್ನು ಹಾಗೂ ಬಯಲುಸೀಮೆ ಪ್ರದೇಶಗಳನ್ನು ಹೊಂದಿರುವ ವಿಸ್ತಾರ ಭೂಪ್ರದೇಶದ ಜಿಲ್ಲೆ ಉತ್ತರ ಕನ್ನಡವನ್ನು ಈ ‘ಕಿತ್ತೂರು ಕರ್ನಾಟಕ ಪ್ರದೇಶ’ಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದು ಇದೀಗ ಇಲ್ಲಿಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಮೂರನೇ ಬಾರಿ ಪ್ರಾಂತ್ಯ ಬದಲಾವಣೆ
ಈ ಹಿಂದೆ ಬ್ರಿಟಿಷರ ಆಡಳಿತದಲ್ಲಿ ಉತ್ತರ ಕನ್ನಡ ಎರಡು ಬಾರಿ ನಾಮಕರಣಗೊಂಡಿತ್ತು. ಮದ್ರಾಸ್- ಕರ್ನಾಟಕ ಪ್ರಾಂತ್ಯಕ್ಕೆ ಮೊದಲು ಸೇರಿದ್ದ ಉತ್ತರ ಕನ್ನಡಕ್ಕೆ ಹೊನ್ನಾವರ ಅಂದು ಜಿಲ್ಲಾ ಕೇಂದ್ರವಾಗಿತ್ತು. ನಂತರ ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲಾ ಕೇಂದ್ರ ದೂರವಾಗುತ್ತದೆ ಎಂಬುದನ್ನು ಅರಿತು ಮುಂಬೈ ಕರ್ನಾಟಕಕ್ಕೆ ಸೇರಿಸಿ ಕಾರವಾರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಗಿದೆ. ಪ್ರಸ್ತುತ ‘ಕಿತ್ತೂರು ಕರ್ನಾಟಕ ಪ್ರದೇಶ’ಕ್ಕೆ ಇದೀಗ ಮೂರನೇ ಬಾರಿ ಮರುನಾಮಕರಣಗೊಂಡ ಜಿಲ್ಲೆಗಳ ಪಟ್ಟಿಯಲ್ಲಿ ಉತ್ತರ ಕನ್ನಡ ಸೇರ್ಪಡೆಯಾಗಿದೆ.

ಅಭಿವೃದ್ಧಿಯಿಂದ ಹಿಂದುಳಿಯುವ ಆತಂಕ
ಉತ್ತರ ಕನ್ನಡವೆಂದರೆ ನಿರ್ಲಕ್ಷ್ಯಕ್ಕೊಳಗಾದ ಜಿಲ್ಲೆ ಎಂದೇ ಕರೆಯಲಾಗುತ್ತದೆ. ಕರಾವಳಿ ಜಿಲ್ಲೆಗಳ ಪಟ್ಟಿಯಲ್ಲಿದ್ದರೂ ಕರಾವಳಿಯ ಅಭಿವೃದ್ಧಿಗಾಗಿ ಬರುವ ವಿವಿಧ ಯೋಜನೆಗಳ ಸಾಕಷ್ಟು ಅನುದಾನ ಕೇವಲ ಉಡುಪಿ- ದಕ್ಷಿಣ ಕನ್ನಡಕ್ಕೆ ಮಾತ್ರ ಸೀಮಿತವಾಗುತ್ತಿತ್ತು. ಸರ್ಕಾರ ಕೂಡ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆಯಲ್ಲೂ ಈ ಎರಡು ಜಿಲ್ಲೆಗಳವರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ, ಉತ್ತರ ಕನ್ನಡದಲ್ಲಿ ಅಲ್ಪಸ್ವಲ್ಪ ಫಲಾನುಭವಿಗಳನ್ನು ಆಯ್ಕೆ ಮಾಡಿ ಇಷ್ಟು ವರ್ಷ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿತ್ತು. ಈಗ ಕಿತ್ತೂರು ಕರ್ನಾಟಕ ಪ್ರದೇಶಕ್ಕೆ ಸೇರ್ಪಡೆ ಮಾಡಿರುವುದರಿಂದ ಕರಾವಳಿ ಜಿಲ್ಲೆಗಳಿಗಾಗಿ ಬರುತ್ತಿದ್ದ ಅಲ್ಪಸ್ವಲ್ಪ ಸೌಲಭ್ಯ, ಅನುದಾನಗಳಿಂದಲೂ ಉತ್ತರ ಕನ್ನಡದ ಜನತೆ ವಂಚಿತವಾಗಿ, ಅಭಿವೃದ್ಧಿಯಿಂದ ಹಿಂದುಳಿಯುವ ಆತಂಕ ಎದುರಾಗಿದೆ.

ಮುಖ್ಯಮಂತ್ರಿಗಳಿಗೆ ನನ್ನ ಬೆಂಬಲವಿದೆ
ಕಿತ್ತೂರು ಕರ್ನಾಟಕ ಪ್ರದೇಶಕ್ಕೆ ಉತ್ತರ ಕನ್ನಡ ಸೇರ್ಪಡೆಯಾಗುವ ಕುರಿತು ನ.1ರಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರನ್ನು ಪತ್ರಕರ್ತರು ಪ್ರಶ್ನಿಸಿದ್ದರು. ಈ ವೇಳೆ ಸಚಿವ ಹೆಬ್ಬಾರ್, ಮುಖ್ಯಮಂತ್ರಿಗಳಿಗೆ ನನ್ನ ಬೆಂಬಲವಿದೆ ಎಂದಿದ್ದರು. ಪತ್ರಕರ್ತರು ಮೇಲಿಂದ ಮೇಲೆ ಪ್ರಶ್ನೆ ಮಾಡಿದ್ದಕ್ಕೆ, ಉತ್ತರ ಕನ್ನಡವನ್ನು ಕರಾವಳಿಗೂ ಸೇರಿಸಲಾಗುವುದಿಲ್ಲ, ಅತ್ತ ಉತ್ತರ ಕರ್ನಾಟಕಕ್ಕೂ ಸೇರಿಸಲಾಗುವುದಿಲ್ಲ. ಇಲ್ಲಿ ಹಳಿಯಾಳ, ಮುಂಡಗೋಡ ಬಯಲುಸೀಮೆ ಪ್ರದೇಶಗಳೂ ಇವೆ ಅಂತ ಕಿತ್ತೂರು ಕರ್ನಾಟಕಕ್ಕೆ ಪರೋಕ್ಷವಾಗಿ ಬೆಂಬಲ ಇರುವಂತೆ ಮಾತನಾಡಿದ್ದರು.

ಮರುನಾಮಕರಣ ಅಭಿವೃದ್ಧಿಗೆ ಪೂರಕವಲ್ಲ
ಉತ್ತರ ಕನ್ನಡವನ್ನು ಕಿತ್ತೂರು ಕರ್ನಾಟಕ ಪ್ರದೇಶವೆಂದು ಮರುನಾಮಕರಣ ಮಾಡಿರುವುದು ಅಭಿವೃದ್ಧಿಗೆ ಪೂರಕವಲ್ಲ. ತಾಂತ್ರಿಕವಾಗಿ ಯಾವ ಆಧಾರದ ಮೇಲೆ ಈ ರೀತಿ ಮರುನಾಮಕರಣ ಮಾಡಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ ಅಂತ ಅರಣ್ಯ ಭೂಮಿ ಹಕ್ಕು ಹೋರಾಟಗಾರ ಎ.ರವೀಂದ್ರ ನಾಯ್ಕ ಅಭಿಪ್ರಾಯಪಟ್ಟರು.

ಐತಿಹಾಸಿಕವಾಗಿ ಕಿತ್ತೂರು ಚೆನ್ನಮ್ಮನನ್ನು ನೆನಪಿನಲ್ಲಿಡುವಂತೆ ಮಾಡಲು ಈ ಮರುನಾಮಕರಣ ನಡೆದಿದೆ. ಚೆನ್ನಮ್ಮ ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ದನಿ ಎತ್ತಿದ್ದರು. ಚೆನ್ನಮ್ಮನನ್ನು ಶಾಶ್ವತವಾಗಿ ನೆನಪಿಟ್ಟಕೊಳ್ಳಬೇಕು ಎಂದು ಮರುನಾಮಕರಣ ಮಾಡಲಾಗಿದ್ದು, ಇದು ಸರಿಯಾದ ಕ್ರಮ. ಆದರೆ ಮುಂದೆ ಇದನ್ನೇ ಇಟ್ಟುಕೊಂಡು ಕರ್ನಾಟಕವನ್ನು ಇಬ್ಬಾಗಿಸುವ ಕಾರ್ಯ ಮಾಡುವಂತಾಗಬಾರದು. ಸಮಗ್ರ ಕರ್ನಾಟಕ ದೃಷ್ಟಿಯಿಂದ ನಾವೆಲ್ಲ ಕರ್ನಾಟಕದವರೆ ಎಂಬ ಭಾವನೆ ಇರಬೇಕು. ಮರುನಾಮಕರಣದ ಉದ್ದೇಶ ಬದಲಾಗದಂತೆ ನೋಡಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರವಾರ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಹೇಳಿದರು.

ಸರ್ಕಾರ ಗೊಂದಲ ನಿವಾರಿಸಲಿ
ಉತ್ತರ ಕನ್ನಡಕ್ಕೆ ಬೆಂಗಳೂರು ಮಟ್ಟದಲ್ಲಿ ಕಾರವಾರ ಜಿಲ್ಲೆ ಎಂದೇ ಕರೆಯುತ್ತಾರೆ. ಹೀಗಾಗಿ ಉತ್ತರ ಕನ್ನಡ ಕರಾವಳಿ ಜಿಲ್ಲೆ ಎಂದು ಎಲ್ಲೆಡೆ ಜನಜನಿತವಾಗಿದೆ. ಆದರೆ ಸರ್ಕಾರ ಈಗ ಕರಾವಳಿ ಕರ್ನಾಟಕ ಪ್ರದೇಶಕ್ಕೆ ನಮ್ಮ ಜಿಲ್ಲೆಯನ್ನು ಸೇರಿ ಮರುನಾಮಕರಣ ಮಾಡಿರುವುದು ಗೊಂದಲ ಸೃಷ್ಟಿಸಿದೆ. ಹೀಗಾಗಿ ಸರ್ಕಾರ ಮೊದಲು ಉತ್ತರ ಕನ್ನಡವನ್ನು ಉತ್ತರ ಕರ್ನಾಟಕದ ಭಾಗವೋ ಅಥವಾ ಕರಾವಳಿ ಜಿಲ್ಲೆಯ ಭಾಗವೋ ಎಂಬುದನ್ನು ಸ್ಪಷ್ಟಪಡಿಸಬೇಕು. ಹೀಗಾದಾಗ ಮಾತ್ರ ಆ ಪ್ರಾಂತ್ಯದ ಸೌಲಭ್ಯಗಳನ್ನು ನಾವು ಕೇಳಬಹುದು. ಆದರೆ ಇದೀಗ ಗೊಂದಲ ಸೃಷ್ಟಿಯಾಗಿದೆ. ಒಂದು ರೀತಿ ಅತಂತ್ರ ಜಿಲ್ಲೆಯಾಗಿ ಉತ್ತರ ಕನ್ನಡ ಗೋಚರಿಸುತ್ತಿದೆ ಅಂತ ಹಿರಿಯ ಪತ್ರಕರ್ತ ಟಿ.ಬಿ.ಹರಿಕಂತ್ರ ನುಡಿದರು.

ಕಿತ್ತೂರು ಕರ್ನಾಟಕದ ಅನುದಾನ ಉತ್ತರ ಕನ್ನಡಕ್ಕೂ ಬರಲಿ
ಈಗಾಗಲೇ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿರುವ ಕಿತ್ತೂರು ಕರ್ನಾಟಕ ಪ್ರದೇಶಕ್ಕೆ ಘೋಷಣೆಯಾಗುವ ಅನುದಾನದಲ್ಲಿ ಅಥವಾ ಅಭಿವೃದ್ಧಿ ಯೋಜನೆಯಲ್ಲಿ ಉತ್ತರ ಕನ್ನಡಕ್ಕೂ ಸಮಪಾಲು ನೀಡಬೇಕಿದೆ. ಈ ಮೊದಲಿನಂತೆ ನಿರ್ಲಕ್ಷ್ಯ ಮುಂದುವರೆದರೆ ಸರ್ಕಾರ ಉತ್ತರ ಕನ್ನಡಿಗರನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆ ಇದೀಗ ಸ್ಥಳೀಯರಿಂದ ಕೇಳಿಬಂದಿದೆ.

ವರದಿ: ದೇವರಾಜ್​ ನಾಯ್ಕ್​

ಇದನ್ನೂ ಓದಿ

ನಾನೂ ದಲಿತ; ಅವಕಾಶ ವಂಚಿತರೆಲ್ಲರೂ ದಲಿತರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ದೊಡ್ಮನೆ ಅನ್ನಸಂತರ್ಪಣೆ ಕಾರ್ಯಕ್ರಮ ಮುಕ್ತಾಯ; ಒಟ್ಟೂ ಊಟ ಮಾಡಿದವರ ಸಂಖ್ಯೆ ಎಷ್ಟು ಗೊತ್ತಾ?

TV9 Kannada


Leave a Reply

Your email address will not be published. Required fields are marked *