ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ: ಮುಟ್ಟಳ್ಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಸಾವು | Four died after mud hill collapse on house in bhatkal mutalli


Karnataka Rains: ಬೆಳಗಾಗೋದ್ರೊಳಗೆ ದುರಂತವೊಂದು ಸಂಭವಿಸುತ್ತೆ ಅನ್ನೋ ಸಣ್ಣ ಸುಳಿವೂ ಇಲ್ಲದೆ ಲಕ್ಷ್ಮೀನಾರಾಯಣ ನಾಯ್ಕ ಕುಟುಂಬ ನಿದ್ರೆಗೆ ಜಾರಿತ್ತು. ಆದ್ರೆ ಏಕಾಏಕಿ ಸುರಿದ ಮಳೆಗೆ ಮನೆ ಹಿಂದಿನ ಗುಡ್ಡ ಕುಸಿದು, ಸಂಪೂರ್ಣ ಮನೆ ಧರಾಶಾಹಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ: ಮುಟ್ಟಳ್ಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಸಾವು

ಘಟನಾ ಸ್ಥಳದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ

ಕಾರವಾರ: ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು(Karnataka Rains) ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಸಿಬ್ಬಂದಿ ಹರ ಸಾಹಸ ಪಟ್ಟು ಮಣ್ಣಿನಡಿ ಸಿಲುಕಿದ್ದ ನಾಲ್ವರ ಶವ ಹೊರತೆಗೆದಿದ್ದಾರೆ. ಲಕ್ಷ್ಮೀ ನಾಯ್ಕ(48), ಪುತ್ರಿ ಲಕ್ಷ್ಮೀ(33), ಅನಂತ(32), ಪ್ರವೀಣ್ ನಾಯ್ಕ(20) ಸೇರಿದಂತೆ ನಾಲ್ವರ ಮೃತದೇಹ ಹೊರತೆಗೆಯಲಾಗಿದೆ.

ಬೆಳಗಾಗೋದ್ರೊಳಗೆ ದುರಂತವೊಂದು ಸಂಭವಿಸುತ್ತೆ ಅನ್ನೋ ಸಣ್ಣ ಸುಳಿವೂ ಇಲ್ಲದೆ ಲಕ್ಷ್ಮೀನಾರಾಯಣ ನಾಯ್ಕ ಕುಟುಂಬ ನಿದ್ರೆಗೆ ಜಾರಿತ್ತು. ಆದ್ರೆ ಏಕಾಏಕಿ ಸುರಿದ ಮಳೆಗೆ ಮನೆ ಹಿಂದಿನ ಗುಡ್ಡ ಕುಸಿದು, ಸಂಪೂರ್ಣ ಮನೆ ಧರಾಶಾಹಿಯಾಗಿದೆ. ಮನೆಯಲ್ಲಿ ಮಲಗಿದ್ದ ನಾಲ್ವರು ಮನೆಯ ಅವಶೇಷಗಳ ಅಡಿ ಸಿಲುಕಿ ಕೊನೆಯುಸಿರೆಳೆದಿದ್ದಾರೆ. ಘಟನೆ ನಡೆದ ಕೂಡಲೇ ಧಾವಿಸಿ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಮುಂದಾದರಾದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಜೆಸಿಬಿ ಸಹಾಯದಿಂದ ಕುಸಿದ ಮನೆಯ ಅವಶೇಷಗಳನ್ನ ಎತ್ತೋ ಪ್ರಯತ್ನ ನಡೆಸಲಾಯ್ತು.

ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ ಪರದಾಡಿದ ರಕ್ಷಣಾ ಸಿಬ್ಬಂದಿ

ಸ್ಥಳೀಯರು ನಡೆಸಿದ ರಕ್ಷಣಾ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗಿತ್ತು. NDRF, SDRF ತಂಡ ಕ್ಷಿಪ್ರ ಕಾರ್ಯಾಚರಣೆಗೆ ಧಾವಿಸಿತ್ತಾದರೂ, ಮನೆ ಬಳಿ ತೆರಳೋಕೆ ಸೂಕ್ತ ರಸ್ತೆ ಸಂಪರ್ಕವಿಲ್ಲದೆ ಹರಸಾಹಸಪಡಬೇಕಾಯ್ತು. ಆದ್ರೆ, ಅಷ್ಟೊತ್ತಿಗಾಗಲೇ ಮನೆಯಲ್ಲಿ ಸಿಲುಕಿದ್ದ ನಾಲ್ವರು ಉಸಿರು ಚೆಲ್ಲಾಗಿತ್ತು. ಮೊದಲಿಗೆ ಅನಂತ ನಾರಾಯಣ ಮತ್ತು ಲಕ್ಷ್ಮೀ ನಾರಾಯಣ ಶವ ಹೊರಕ್ಕೆ ತೆಗೆಯಲಾಯ್ತು. ನಿರಂತರವಾಗಿ ಸುರಿಯುತ್ತಿದ್ದ ಮಳೆಯಲ್ಲೇ ಶೋಧಕಾರ್ಯ ಮುಂದುವರಿಸಿದ ರಕ್ಷಣಾ ಸಿಬ್ಬಂದಿ, ಬಳಿಕ ಮಗಳು ಲಕ್ಷ್ಮೀ, ಪ್ರವೀಣ್ ರಾಮಕೃಷ್ಣ ಶವವನ್ನ ಹೊರತೆಗೆದರು.

ಮುನ್ನೂರಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವರುಣಾ ಅವಾಂತರ ಹೆಚ್ಚಾಗುತ್ತಲೇ ಇದೆ. ಪಡುಶಿರಾಲಿ, ಮುಂಡಳ್ಳಿ, ಕೋಕ್ತಿ, ಭಾಗದಲ್ಲಿ 300ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಸಂತ್ರಸ್ತರಿಗಾಗಿ ಜಿಲ್ಲಾಡಳಿತ ಕಾಳಜಿ ಕೇಂದ್ರವನ್ನ ತೆರೆದಿದ್ದು, ಮಳೆ ಹಾನಿಗೆ ಸಿಲುಕಿದವರನ್ನ ಶಿಫ್ಟ್ ಮಾಡಲಾಗುತ್ತಿದೆ. ಪಡುಶಿರಾಲಿಯಲ್ಲಿ ಶಾರದ ಹೊಳೆ ಉಕ್ಕಿ ಹರಿಯುತ್ತಿದ್ದು, ಕೃಷಿ ಭೂಮಿಗೆ ನೀರು ನುಗ್ಗಿದೆ. ಅಂಗಡಿ ಮುಂಗಟ್ಟುಗಳಿಗೆ ಜಲಗಂಡಾಂತರ ಎದುರಾಗಿದೆ.

ತಾಲೂಕಿನಲ್ಲಿ ನಿರಂತರವಾಗಿ ಕಾಡ್ತಿರೋ ಮಳೆಯಿಂದಾಗಿ ಶಿರಾಲಿ, ಮುಟ್ಟಳ್ಳಿ, ಶಾರದೋಳಿ, ಮಣ್ಣಕುಳಿ ಗ್ರಾಮಕ್ಕೆ ನೀರು ನುಗ್ಗಿ ಜನ ಪರದಾಡುತ್ತಿದ್ದಾರೆ. ದೋಣಿಗಳ ಮೂಲಕ SDRF ಸಿಬ್ಬಂದಿ ಜನರನ್ನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬಂದ್, ಕಿ.ಮೀಗಟ್ಟಲೇ ನಿಂತ ವಾಹನಗಳು

ಭಟ್ಕಳ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರನ್ನ ಬಂದ್ ಮಾಡಲಾಗಿದೆ. ಪರಿಣಾಮ ಶಿರಾಲಿ, ರಂಗಿನಕಟ್ಟೆ ಗ್ರಾಮ, ಬೈಂದೂರು ರಸ್ತೆ, ಕಾರವಾರ-ಭಟ್ಕಳ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಕಿಲೋಮೀಟರ್‌ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು.

ನಿರಂತರ ವರ್ಷಧಾರೆಯಿಂದಾಗಿ ಭಟ್ಕಳ ತಾಲೂಕಿನಲ್ಲಿ ಶಾಲೆ-ಕಾಲೇಜುಗಳಿಗೂ ಇಂದು ರಜೆ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರಿಯೋ ಸಾಧ್ಯತೆ ಇದ್ದು, ಮುಂಜಾಗ್ರತವಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *