– ಮಧುಮೇಹಿಗಳಲ್ಲೇ ಕಂಡುಬಂದ ಬ್ಲ್ಯಾಕ್ ಫಂಗಸ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರ ಬೆನ್ನಲ್ಲೇ ಇದೀಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ.

ಕಳೆದ ನಾಲ್ಕು ದಿನದ ಹಿಂದೆ ದಾಂಡೇಲಿಯ ಸೋಂಕಿತ ವ್ಯಕ್ತಿಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಕಾರವಾರ ತಾಲೂಕಿನ ಸದಾಶಿವಗಢ ಮೂಲದ ವ್ಯಕ್ತಿಗೆ ಹಾಗೂ ಜೋಯಿಡಾದ ಓರ್ವ ವ್ಯಕ್ತಿಯಲ್ಲಿ ಇಂದು ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಸದ್ಯ ಪತ್ತೆಯಾದ ರೋಗಿಗಳೆಲ್ಲರೂ ಮಧುಮೇಹ ರೋಗಿಗಳಾಗಿದ್ದಾರೆ.

ಇಂದು ಕಾರವಾರದಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾದ ರೋಗಿಯು ಕೊರೊನಾದಿಂದ ಹೋಂ ಐಸೋಲೇಷನ್ ನಲ್ಲಿದ್ದರು. ಕಿಡ್ನಿ, ಡಯಾಬಿಟಿಸ್, ನ್ಯುಮೋನಿಯಾ, ಹೈಪರ್ ಟೆನ್ಶನ್ ಸಮಸ್ಯೆಯಿಂದ ಬಳಲುತ್ತಿದ್ದ ಇವರಲ್ಲಿ ಇದೀಗ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಜೋಯಿಡಾದ ವ್ಯಕ್ತಿಯಲ್ಲಿ ಸಹ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು ಹುಬ್ಬಳ್ಳಿಯಲ್ಲಿ ಕೊರೊನಾಗ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಇಬ್ಬರು ರೋಗಿಗಳನ್ನು ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಓರ್ವ ರೋಗಿಯನ್ನು ಕಾರವಾರಕ್ಕೆ ಕರೆತರಲಾಗುತ್ತಿದೆ.

ಕ್ರಿಮ್ಸ್ ನಲ್ಲಿ ವಿಶೇಷ ವಾರ್ಡ್:
ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗುತ್ತಿದ್ದಂತೆ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಕಾರವಾರದ ಕ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ವಾರ್ಡ್ ನಲ್ಲಿ ಈ ವ್ಯವಸ್ಥೆ ಮಾಡಲಾಗಿದ್ದು, ತಜ್ಞ ವೈದ್ಯರನ್ನು ಸಹ ನಿಯೋಜನೆ ಮಾಡಲಾಗಿದೆ. ಇಲ್ಲಿ ಬ್ಲ್ಯಾಕ್ ಫಂಗಸ್ ನ ಮೊದಲ ಹಾಗೂ ಎರಡನೇ ಹಂತದ ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಾಲ್ಕರ್ ರವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಮೂರು ಪ್ರಕರಣದಲ್ಲಿ ಎರಡು ಪ್ರಕರಣ ಬ್ಲ್ಯಾಕ್ ಫಂಗಸ್ ನ ಮೂರನೇ ಹಂತ ತಲುಪಿತ್ತು. ಹೀಗಾಗಿ ಇಬ್ಬರು ರೋಗಿಗಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯದ ಮಟ್ಟಿಗೆ ರೋಗ ಲಕ್ಷಣದ ಮೊದಲ ಹಾಗೂ ಎರಡನೇ ಹಂತದ ರೋಗ ಲಕ್ಷಣಕ್ಕೆ ಕಾರವಾರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆ ಬೇಕಾದ ಔಷಧಿ ,ತಜ್ಞ ವೈದ್ಯರು ನಮ್ಮಲ್ಲಿದ್ದಾರೆ. ಮೂರನೇ ಹಂತದಲ್ಲಿ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದ್ದು ಇದಕ್ಕೆ ಬೇಕಾದ ವ್ಯವಸ್ಥೆ ಇಲ್ಲದ ಕಾರಣ ಮಂಗಳೂರಿಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಸಿ.ಇ.ಓ ಪ್ರಿಯಾಂಗ ರವರು ತಿಳಿಸಿದ್ದಾರೆ.

The post ಉತ್ತರ ಕನ್ನಡ ಜಿಲ್ಲೆಯ ಕೊರೊನಾ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ appeared first on Public TV.

Source: publictv.in

Source link