ಐಎನ್ಎಸ್ ಚಾಪೆಲ್ ಯುದ್ಧನೌಕೆ
ಉತ್ತರ ಕನ್ನಡ: ಐಎನ್ಎಸ್ ಚಾಪೆಲ್ ಭಾರತೀಯ ನೌಕಾಪಡೆಯ ಯುದ್ಧಗಳಲ್ಲಿ ಸಕ್ರೀಯವಾಗಿದ್ದ ಯುದ್ಧನೌಕೆ. ಅದರಲ್ಲೂ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಮುಂಚೂಣಿಯಲ್ಲಿದ್ದು, ಸೇನೆಗೆ ತನ್ನದೆಯಾದ ಸೇವೆ ಸಲ್ಲಿಸಿದ ಇದು, ಕೊನೆಗೆ 2005 ರಲ್ಲಿ ನಿವೃತ್ತಿಯಾದ ನಂತರ ಕಾರವಾರದಲ್ಲಿ ಮ್ಯೂಸಿಯಂ ಆಗಿ ಮಾರ್ಪಡಿಸಲಾಗಿದೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಈ ಯುದ್ಧನೌಕೆ ಸ್ಥಾಪನೆಗೊಂಡು ನ.14 ರಂದು 15 ವಸಂತಗಳು ಪೂರೈಸುತ್ತಿದ್ದೆ. ದುರದೃಷ್ಟವಶಾತ್ ನಿವೃತ್ತಿ ಬಳಿಕವೂ ಲಕ್ಷಾಂತರ ರೂಪಾಯಿ ಆದಾಯ ತರುತ್ತಿದ್ದರೂ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುವಂತಾಗಿದೆ.
ಐಎನ್ಎಸ್ ಚಾಪಲ್ ಭಾರತೀಯ ನೌಕಾಪಡೆಯಲ್ಲಿ 29 ವರ್ಷಗಳ ಸುದೀರ್ಘ ಸೇವೆಯ ಬಳಿಕ 2005ರ ಮೇ ತಿಂಗಳಲ್ಲಿ ನಿವೃತ್ತಿಯಾದ ಯುದ್ಧ ನೌಕೆ. ಕ್ಷಿಪಣಿ ಉಡಾವಣೆ ವ್ಯವಸ್ಥೆ ಹೊಂದಿರುವ ರಷ್ಯಾ ನಿರ್ಮಿತ ಈ ಚಾಪೆಲ್ ಯುದ್ಧನೌಕೆಯನ್ನು 1976ರ ನವೆಂಬರ್ 14 ರಂದು ಭಾರತೀಯ ನೌಕಾಪಡೆಯ ಸೇವೆಗೆ ಸೇರ್ಪಡೆಗೊಂಡಿಸಲಾಗಿತ್ತು. 1971ರ ಇಂಡೋ- ಪಾಕ್ ಯುದ್ಧದ ಸಮಯದಲ್ಲಿ ಕರಾಚಿ ಬಂದರಿನ ಮೇಲೆ ಬಾಂಬ್ ದಾಳಿ ಮಾಡಲು ಮತ್ತು ಅರಬ್ಬಿ ಸಮುದ್ರದಲ್ಲಿ ನೌಕಾ ದಿಗ್ಬಂಧನವನ್ನು ಜಾರಿಗೊಳಿಸುವಲ್ಲಿ ಈ ಚಾಪೆಲ್ ಬಹುಮುಖ್ಯ ಪಾತ್ರ ವಹಿಸಿತ್ತು.
ಇದು ಪಾಕಿಸ್ತಾನದ ವಾಣಿಜ್ಯ ರಾಜಧಾನಿಯನ್ನು ದುರ್ಬಲಗೊಳಿಸಿ, ಭಾರತದ ಅಂತಿಮ ವಿಜಯದಲ್ಲಿ ನೆರವಾಗಿತ್ತು. ಈ ಚಾಪೆಲ್‌ನಲ್ಲಿ ಕಾರ್ಯನಿರ್ವಹಿಸಿದ್ದ ಐವರು ಸಿಬ್ಬಂದಿ ಪರಮ ವೀರ ಚಕ್ರ ಮತ್ತು 8 ಜನರು ವೀರ ಚಕ್ರಗಳನ್ನು ಪಡೆದಿದ್ದಾರೆ. ಇನ್ನು 29 ವರ್ಷಗಳ ಸಾರ್ಥಕ ದೇಶ ಸೇವೆಯ ಬಳಿಕ 2005ರ ಮೇ 5 ರಂದು ಇದನ್ನು ನಿವೃತ್ತಿಗೊಳಿಸಲಾಯಿತು. ನಂತರ ಒಂದು ವರ್ಷದ ಬಳಿಕ ಕಾರವಾರದ ಠಾಗೋರ್ ಕಡಲತೀರದಲ್ಲಿ ಮ್ಯೂಸಿಯಂ ಆಗಿ ಸ್ಥಾಪಿಸಲಾಗಿದೆ.
ಸುಮಾರು 245 ಟನ್ ತೂಕ, 38.6 ಮೀಟರ್ ಉದ್ದ ಹಾಗೂ 7.6 ಮೀ. ಅಗಲ ಇರುವ ನೌಕೆ, ಗರಿಷ್ಠ ಗಂಟೆಗೆ 37 ನಾಟಿಕಲ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿತ್ತು. ಈ ನೌಕೆಯಲ್ಲಿ ಎರಡು 30 ಎಂಎಂ ಗನ್‌ಗಳು, ಒಂದು ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ಉಡಾವಣೆ, ನಾಲ್ಕು ಹಡಗು ವಿರೋಧಿ ಕ್ಷಿಪಣಿ ಲಾಂಚರ್‌ಗಳು ಇದೆ. ಪ್ರತಿದಿನ ನೂರಾರು ಪ್ರವಾಸಿಗರು ಇದರ ವೀಕ್ಷಣೆಗೆಂದೇ ಕಾರವಾರಕ್ಕೆ ಭೇಟಿ ನೀಡುತ್ತಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿದೆ ಎಂದು ಚಾಪೆಲ್ ಮ್ಯೂಸಿಯಂ ಕ್ಯೂರೇಟರ್ ವಿಜಯ್ ಹೇಳಿದ್ದಾರೆ.
ಕಾರವಾರದಲ್ಲಿ ಚಾಪೆಲ್ ಯುದ್ಧನೌಕೆ ಅಂದರೆ ಅದು ಸಾಕಷ್ಟು ಪ್ರಸಿದ್ಧಿಯ ಪ್ರವಾಸಿ ಕೇಂದ್ರ. ದುರದೃಷ್ಟವಶಾತ್ ನಿವೃತ್ತಿ ಬಳಿಕವೂ ಸ್ಥಳೀಯ ಆಡಳಿತಕ್ಕೆ ಲಕ್ಷಾಂತರ ರೂಪಾಯಿ ಆದಾಯ ತರುತ್ತಿದ್ದರೂ ಸೂಕ್ತ ನಿರ್ವಹಣೆ ಇಲ್ಲದ ಕಾರಣ ನೌಕೆ ಎಲ್ಲೆಡೆ ತುಕ್ಕು ಹಿಡಿಯುತ್ತಿದೆ. ಒಳಭಾಗದಲ್ಲಿರುವ ಬ್ಯಾರಕ್‌ಗಳು, ಎಂಜಿನ್ ಕೊಠಡಿಗಳು, ಬಾಹ್ಯ ಬಂದೂಕುಗಳು ಸಮುದ್ರದ ಸನಿಹವೇ ಇರುವ ಕಾರಣ ತುಕ್ಕು ಹಿಡಿಯುತ್ತಿವೆ. ವಿಚಿತ್ರ ಅಂದರೆ ಮಳೆಗಾಲದಲ್ಲಿ ನೌಕೆಗೆ ತಾಡಪಲ್ ಹೋದಿಕೆ ಹೊರಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಆವರಣದಲ್ಲಿ ಕುರುಚಲು ಗಿಡಗಳು ಬೆಳೆದು ಸೌಂದರ್ಯ ಕುಂದುತ್ತಿದೆ. ಇರುವ ಇಬ್ಬರು ಕ್ಯೂರೇಟರ್ಗಳಿಗೆ ವೇತನ ಪಾವತಿಸದೇ ವರ್ಷಗಳೇ ಸಂದಿವೆ. ಪ್ರವಾಸಿಗರ ಪಾಲಿನ ಹೆಮ್ಮೆಯಾಗಿರುವ ಚಾಪೆಲ್ ಯುದ್ದನೌಕೆಯನ್ನು ಇನ್ನಾದರೂ ಸೂಕ್ತ ನಿರ್ವಹಣೆ ಮಾಡುವ ಮೂಲಕ ಇದನ್ನು ಉಳಿಸಿಕೊಳ್ಳುವ ಕೆಲಸವನ್ನು ಸ್ಥಳೀಯ ಆಡಳಿತ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಒಟ್ಟಾರೆ ಪ್ರವಾಸಿಗರ ಪಾಲಿಗೆ ಆಕರ್ಷಣೆಯಾಗಿದ್ದ ಚಾಪೆಲ್ ಯುದ್ಧನೌಕೆ 15 ವರ್ಷಗಳಿಗೆ ನಿರ್ವಹಣೆ ಇಲ್ಲದೆ ಸೊರಗುವಂತಾಗಿದ್ದು, ಇನ್ನಾದರೂ ಪ್ರವಾಸೊದ್ಯಮ ಇಲಾಖೆ, ಜಿಲ್ಲಾಡಳಿತ ರಕ್ಷಣೆ ಹೆಚ್ಚಿನ ಗಮನ ಹರಿಸಿ ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕಿದೆ.
ಇದನ್ನೂ ಓದಿ:
ಬನ್ನೇರುಘಟ್ಟ ಚಿಟ್ಟೆ ಉದ್ಯಾನಕ್ಕೆ ಬಂದ ಸ್ಪೆಷಲ್ ಅತಿಥಿ; ಅಟ್ಲಾಸ್ ಪತಂಗ ನೋಡಲು ಮುಗಿಬಿದ್ದ ಜನತೆ
ಸಮುದ್ರ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರೆ ಮರವಂತೆಗೆ ಭೇಟಿ ನೀಡಿ; ಒಂದೇ ಕಡೆ ಸಿಗಲಿದೆ ಬೀಚ್ ಮತ್ತು ನದಿಯ ಅದ್ಭುತ ಅನುಭವ