ಲಕ್ನೋ: ಉತ್ತರ ಪ್ರದೇಶದ ಕಂದಾಯ ಮತ್ತು ಪ್ರವಾಹ ನಿಯಂತ್ರಣ ಸಚಿವ ವಿಜಯ್ ಕಶ್ಯಪ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಮುಜಫರ್‍ನಗರದ ಚಾರ್ತವಾಲ್ ಅಸೆಂಬ್ಲಿ ಶಾಸಕರಾಗಿದ್ದ ಕಶ್ಯಪ್(56) ಗುರಗಾಂವ್‍ನ ಮೆದಂತ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಇವರು ಕೊರೊನಾ ಸೋಂಕಿಗೆ ಬಲಿಯಾದ ಮೂರನೇ ಯುಪಿ ಸಚಿವರಾಗಿದ್ದು, ಕಳೆದ ವರ್ಷ ಉತ್ತರ ಪ್ರದೇಶದ ಮಂತ್ರಿಗಳಾದ ಕಮಲ್ ರಾಣಿ ವರುಣ್ ಮತ್ತು ಚೇತನ್ ಚೌಹಾನ್ ಸೋಂಕಿನಿಂದ ಸಾವನ್ನಪ್ಪಿದ್ದರು.

ವಿಜಯ್ ಕಶ್ಯಪ್‍ರವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ಬಿಜೆಪಿ ಮುಖಂಡ ಮತ್ತು ಸಚಿವರಾದ ವಿಜಯ್ ಕಶ್ಯಪ್‍ರವರ ಸಾವಿನ ಸುದ್ದಿ ಬಹಳ ದುಃಖವನ್ನುಂಟು ಮಾಡಿದೆ. ಅವರು ತಳಮಟ್ಟದವರೊಂದಿಗೆ ಸಂಪರ್ಕ ಹೊಂದಿದ್ದನಾಯಕರಾಗಿದ್ದರು ಹಾಗೂ ಯಾವಾಗಲೂ ಸಾರ್ವಜನಿಕ ಹಿತಾಸಕ್ತಿ ಕಾರ್ಯಗಳನ್ನು ಮಾಡುವಲ್ಲಿ ತೊಡಗಿಸಿಕೊಂಡಿದ್ದರು. ದುಃಖದ ಈ ಕ್ಷಣದಲ್ಲಿ ಅವರ ಕುಟುಂಬ ಹಾಗೂ ಬೆಂಬಲಿಗರಿಗೆ ನನ್ನ ಸಂತಾಪ. ಓಂ ಶಾಂತಿ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಕೂಡ ವಿಜಯ್ ಕಶ್ಯಪ್‍ರವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

The post ಉತ್ತರ ಪ್ರದೇಶದ ಸಚಿವ ವಿಜಯ್ ಕಶ್ಯಪ್ ಕೊರೊನಾಗೆ ಬಲಿ appeared first on Public TV.

Source: publictv.in

Source link