ಉತ್ತರ ಪ್ರದೇಶ: ಭ್ರಷ್ಟಾಚಾರ ಬಯಲಿಗೆಳೆದು 7 ಬಾರಿ ಗುಂಡೇಟು ತಿಂದಿದ್ದ ಅಧಿಕಾರಿ UPSCಯಲ್ಲಿ ಪಾಸ್ | UP Officer was shot 7 times for exposing scam, survived and cleared UPSC exam


UPSC: ಭ್ರಷ್ಟಾಚಾರ ಬಯಲಿಗೆಳೆದು ಭ್ರಷ್ಟರ ಕೆಂಗಣ್ಣಿಗೆ ಗುರಿಯಾಗಿ 7 ಬಾರಿ ಗುಂಟೇಟು ಎದುರಿಸಿದ್ದ ಉತ್ತರ ಪ್ರದೇಶದ ಅಧಿಕಾರಿಯೊಬ್ಬರು ಯುಪಿಎಸ್​ಸಿ (UPSC)ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಲಕ್ನೋ: ಭ್ರಷ್ಟಾಚಾರ ಬಯಲಿಗೆಳೆದು ಭ್ರಷ್ಟರ ಕೆಂಗಣ್ಣಿಗೆ ಗುರಿಯಾಗಿ 7 ಬಾರಿ ಗುಂಟೇಟು ಎದುರಿಸಿದ್ದ ಉತ್ತರ ಪ್ರದೇಶದ ಅಧಿಕಾರಿಯೊಬ್ಬರು ಯುಪಿಎಸ್​ಸಿ (UPSC)ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

2008ರಲ್ಲಿ ಮುಜಾಫರ್‌ನಗರದಲ್ಲಿ 83 ಕೋಟಿ ಸ್ಕಾಲರ್‌ಶಿಪ್‌ ಹಗರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ರಾಜ್ಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ರಿಂಕೂ ಸಿಂಗ್ ರಾಹೀ ಎಂಬ ಅಧಿಕಾರಿಯು ಯುಪಿಎಸ್​ಸಿ ಪರೀಕ್ಷೆಯಲ್ಲಿ 683ನೇ ರ್‍ಯಾಂಕ್ ಪಡೆದಿದ್ದಾರೆ.

ರಿಂಕೂ ಸಿಂಗ್ ಉತ್ತರ ಪ್ರದೇಶದ ಹಾಪುರ್‌ನ ಪ್ರಾಂತೀಯ ನಾಗರಿಕ ಸೇವಾ ಅಧಿಕಾರಿಯಾಗಿದ್ದಾರೆ. ಈ ಸ್ಕಾಲರ್ ಶಿಪ್ ಹಗರಣದಲ್ಲಿ ಒಟ್ಟು ಎಂಟು ಮಂದಿ ಮೇಲೆ ಆರೋಪ ಹೊರಿಸಲಾಗಿತ್ತು. ಈ ಪ್ರಕರಣದಲ್ಲಿ ನಾಲ್ವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಹಗರಣ ಬಹಿರಂಗವಾದ ಕೂಡಲೇ, ರಿಂಕೂ ರಹೀ ಮೇಲೆ ಏಳು ಬಾರಿ ಗುಂಡು ಹಾರಿಸಲಾಯಿತು.

ಅವರ ಮುಖಕ್ಕೂ ಗುಂಡು ಹಾರಿಸಲಾಗಿತ್ತು. ಹೀಗಾಗಿ ಅವರ ಮುಖವು ವಿರೂಪಗೊಂಡಿದ್ದು, ದೃಷ್ಟಿ ಮತ್ತು ಶ್ರವಣವನ್ನು ಕಳೆದುಕೊಂಡಿದ್ದಾರೆ. ದಾಳಿಯಲ್ಲಿ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಅಲ್ಲಿನ ಐಎಎಸ್ ಕೋಚಿಂಗ್ ಸೆಂಟರ್‌ನ ನಿರ್ದೇಶಕರಾಗಿ ಹಲವು ವರ್ಷಗಳಿಂದ ನಾಗರಿಕ ಸೇವೆಗಳ ಆಕಾಂಕ್ಷಿಗಳಿಗೆ ಅವರು ಕಲಿಸಿದ್ದಾರೆ. ‘ನನ್ನ ವಿದ್ಯಾರ್ಥಿಗಳು ಯುಪಿಎಸ್ ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವಂತೆ ಹೇಳುತ್ತಿದ್ದರು.

ಅವರ ಒತ್ತಾಯ ಹಾಗೂ ಆಸೆಯಿಂದಾಗಿ ನಾನು ಪರೀಕ್ಷೆ ತೆಗೆದುಕೊಂಡೆ. ಇದಕ್ಕೂ ಮೊದಲು 2004ರಲ್ಲಿ ನಾನು ಪ್ರಾಂತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಯುಪಿಎಸ್​ಸಿ ಫಲಿತಾಂಶದ ಕುರಿತು ಮಾಹಿತಿ
ಕೇಂದ್ರ ನಾಗರಿಕ ಸೇವಾ ಆಯೋಗ (UPSC) 2021 ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಮೇ 31ರಂದು ಪ್ರಕಟಿಸಿತ್ತು.

ಶ್ರುತಿ ಶರ್ಮಾ ದೇಶದಲ್ಲಿ ಮೊದಲ ಸ್ಥಾನ, ಅಂಕಿತಾ ಅಗರ್ವಾಲ್ ಎರಡನೇ ಸ್ಥಾನ ಪಡೆದರು. ಗಾಮಿನಿ ಸಿಂಗ್ಲಾ ಮೂರನೇ ಟಾಪರ್ ಆಗಿ ಆಯ್ಕೆಯಾಗಿದ್ದಾರೆ. ಈ ವರ್ಷ ಮೊದಲ 3 ಸ್ಥಾನಗಳು ಮಹಿಳೆಯರ ಪಾಲಾಗಿದೆ. 4ನೇ ಸ್ಥಾನವನ್ನು ಐಶ್ವರ್ಯಾ ವರ್ಮಾ ಅವರು ಪಡೆದುಕೊಂಡಿದ್ದಾರೆ.

ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರ ಸೇವೆಗಳು, ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ನೇಮಕಾತಿಗಾಗಿ ಒಟ್ಟು 685 ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗಿದೆ.

2021 ರ ನಾಗರಿಕ ಸೇವೆಗಳ ಪರೀಕ್ಷೆಯ ಲಿಖಿತ ಭಾಗವನ್ನು UPSC 2022ರ ಜನವರಿಯಲ್ಲಿ ನಡೆಸಿತ್ತು. ವ್ಯಕ್ತಿತ್ವ ಪರೀಕ್ಷೆಯ ಸಂದರ್ಶನಗಳನ್ನು ಏಪ್ರಿಲ್-ಮೇಯಲ್ಲಿ ನಡೆಸಲಾಗಿತ್ತು.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *