ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸಂಸದ; ಪೊಲೀಸರ ಲಾಠಿಚಾರ್ಜ್​ಗೆ ಖಂಡನೆ | BJP MP Varun Gandhi asked Uttar Pradesh government over a police crackdown on protesters


ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸಂಸದ; ಪೊಲೀಸರ ಲಾಠಿಚಾರ್ಜ್​ಗೆ ಖಂಡನೆ

ವರುಣ್​ ಗಾಂಧಿ

ತಮ್ಮದೇ ಪಕ್ಷದ ಸರ್ಕಾರಗಳ ವಿರುದ್ಧ ಸದಾ ಒಂದಿಲ್ಲೊಂದು ವಿಷಯಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಉತ್ತರಪ್ರದೇಶ ಪಿಲಿಭಿತ್​ ಬಿಜೆಪಿ ಸಂಸದ ವರುಣ್​ ಗಾಂಧಿ, ಇದೀಗ ಮತ್ತೊಮ್ಮೆ ಉತ್ತರ ಪ್ರದೇಶ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಲಖನೌನಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿದ ಕ್ಯಾಂಡಲ್​ ಲೈಟ್​ ಮೆರವಣಿಗೆ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೇ, ಮೇಣದಬತ್ತಿ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದವರನ್ನು ಪೊಲೀಸರು ಬೆನ್ನತ್ತಿ ಹೋಗಿ ಲಾಠಿ ಚಾರ್ಜ್ ಮಾಡಿದ ವಿಡಿಯೋವನ್ನು ಕೂಡ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ವರುಣ್​ ಗಾಂಧಿ, ಈಗಿಲ್ಲಿ ಪ್ರತಿಭಟನೆ ನಡೆಸುತ್ತಿರುವವರೂ ಕೂಡ ಭಾರತಾಂಬೆಯ ಮಕ್ಕಳೇ ಆಗಿದ್ದಾರೆ. ಆದರೆ ಅವರ ಅಗತ್ಯತೆಗಳು, ಸಮಸ್ಯೆಗಳನ್ನು ಏನೆಂದರು ಕೇಳಲು ಯಾರೂ ಸಿದ್ಧರಿಲ್ಲ. ಇಲ್ಲಿನ ಆಡಳಿತ ಪ್ರತಿಭಟನಾ ನಿರತರ ಮೇಲೆ ಹೀಗೆ ದೌರ್ಜನ್ಯ ನಡೆಸಿದೆ. ಅದೇ ಇವರ ಮಕ್ಕಳೂ ಪ್ರತಿಭಟನೆಯಲ್ಲಿ ಇದ್ದಿದ್ದರೆ, ಹೀಗೆ ಮಾಡಲು ಸಾಧ್ಯವಾಗುತ್ತಿತ್ತಾ ಎಂದು ವರುಣ್​ ಗಾಂಧಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಖಾಲಿ ಹುದ್ದೆಗಳೂ ಇವೆ..ಅರ್ಹ ಅಭ್ಯರ್ಥಿಗಳೂ ಇದ್ದಾರೆ. ಆದರೂ ಏಕೆ ನೇಮಕಾತಿ ಸಾಧ್ಯವಾಗುತ್ತಿಲ್ಲ ಎಂದು ಕೇಳಿದ್ದಾರೆ.

ಉತ್ತರಪ್ರದೇಶದಲ್ಲಿ 69 ಸಾವಿರ ಸಹಾಯಕ ಶಿಕ್ಷಕರ ನೇಮಕಾತಿಗೆ ಸಂಬಂಧ 2019ರಲ್ಲಿ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಕೆಲವು ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ನಿವಾಸದೆಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಹಾಗೇ, ಲಾಠಿ ಚಾರ್ಜ್​ ಕೂಡ ನಡೆಸಿದ್ದಾರೆ. ಇದರ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ, ಕಾಂಗ್ರೆಸ್ ನಾಯಕರಾದ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ಕೂಡ ತೀವ್ರವಾಗಿ ಖಂಡಿಸಿದ್ದಾರೆ.  ಅಷ್ಟೇ ಅಲ್ಲ, ಅಖಿಲೇಶ್​ ಯಾದವ್​ ಕೂಡ ಇದೊಂದು ಕ್ರೂರಕೃತ್ಯ ಎಂದು ಹೇಳಿದ್ದಾರೆ.

ವರುಣ್​ ಗಾಂಧಿ ವಿಷಯಕ್ಕೆ ಬರುವುದಾದರೆ ಅವರು ಇತ್ತೀಚೆಗೆ ಉತ್ತರಪ್ರದೇಶ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಗಾಗ ತಿರುಗಿಬೀಳುತ್ತಿದ್ದಾರೆ. ಇತ್ತೀಚೆಗೆ ಲಖಿಂಪುರ ಖೇರಿಯಲ್ಲಿ ಹಿಂಸಾಚಾರ ನಡೆದಾಗಲೂ ಸರ್ಕಾರಗಳ ವಿರುದ್ಧ ಧ್ವನಿಯೆತ್ತಿದ್ದರು. ಮೂರು ಕೃಷಿ ಕಾಯ್ದೆಗಳನ್ನು ಸದಾ ವಿರೋಧಿಸುತ್ತಿದ್ದರು. ಅವರನ್ನು ಈ ಬಾರಿ ರಾಷ್ಟ್ರೀಯ ಕಾರ್ಯಕಾರಿಯಿಂದಲೂ ಕೈಬಿಡಲಾಗಿದೆ.

TV9 Kannada


Leave a Reply

Your email address will not be published. Required fields are marked *