ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ‘ಕನ್ಯಾದಾನ’; ಈ ಸೀರಿಯಲ್​ ಕಥೆ ಏನು? | New Kannada serial Kanyadana to go on air on Udaya TV from 15th November


ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ‘ಕನ್ಯಾದಾನ’; ಈ ಸೀರಿಯಲ್​ ಕಥೆ ಏನು?

‘ಕನ್ಯಾದಾನ’ ಕನ್ನಡ ಸೀರಿಯಲ್​

ಕನ್ನಡ ಕಿರುತೆರೆ ಜಗತ್ತು ದಿನೇದಿನೇ ದೊಡ್ಡದಾಗುತ್ತಿದೆ. ಹೊಸ ಹೊಸ ಧಾರಾವಾಹಿಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಪ್ರತಿ ದಿನವೂ ಪೈಪೋಟಿ ಹೆಚ್ಚುತ್ತಿದೆ. ಇದರ ಜೊತೆಗೆ ಜನಪ್ರಿಯ ಉದಯ ವಾಹಿನಿಯಲ್ಲಿ ಹೊಸ ಸೀರಿಯಲ್​ ‘ಕನ್ಯಾದಾನ’ ಆರಂಭ ಆಗುತ್ತಿದೆ. ನ.15ರಿಂದ ಪ್ರಸಾರ ಆರಂಭಿಸಲಿದ್ದು, ಈಗಾಗಲೇ ವೀಕ್ಷಕರಲ್ಲಿ ಕೌತುಕ ಮೂಡಿಸಿದೆ. ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30ಕ್ಕೆ ‘ಕನ್ಯಾದಾನ’ ಬಿತ್ತರ ಆಗಲಿದೆ. ಕಳೆದ 26 ವರ್ಷಗಳಿಂದಲೂ ನಿರಂತರವಾಗಿ ಕನ್ನಡಿಗರಿಗೆ ತನ್ನ ವಿಶಿಷ್ಟ ಶೈಲಿಯ ಕಾರ್ಯಕ್ರಮಗಳಿಂದ ಮನರಂಜನೆ ನೀಡುತ್ತಿರುವ ಉದಯ ವಾಹಿನಿಯಲ್ಲಿ ಈ ಹೊಸ ಸೀರಿಯಲ್​ ಗಮನ ಸೆಳೆಯಲಿದೆ.

ಉದಯ ವಾಹಿನಿಯಲ್ಲಿ ಈಗಾಗಲೇ ಹಲವು ಧಾರಾವಾಹಿಗಳು ಜನಮೆಚ್ಚುಗೆ ಗಳಿಸಿವೆ. ಗೌರಿಪುರದ ಗಯ್ಯಾಳಿಗಳು, ನೇತ್ರಾವತಿ, ಸುಂದರಿ, ಕಾವ್ಯಾಂಜಲಿ, ನಯನತಾರ, ಸೇವಂತಿ, ಕಸ್ತೂರಿ ನಿವಾಸ ಧಾರಾವಾಹಿಗಳಿಗೆ ಕನ್ನಡಿಗರಿಂದ ಪ್ರಶಂಸೆ ಸಿಕ್ಕಿದೆ. ಅವುಗಳ ಸಾಲಿಗೆ ‘ಕನ್ಯಾದಾನ’ ಕೂಡ ಸೇರ್ಪಡೆ ಆಗುತ್ತಿದೆ. ಬೇರೆಲ್ಲ ಧಾರಾವಾಹಿಗಳಿಗಿಂತಲೂ ಭಿನ್ನವಾದ ಕಥಾಹಂದರವನ್ನು ಈ ಸೀರಿಯಲ್​ ಹೊಂದಿರಲಿದೆ.

‘ಕನ್ಯಾದಾನ’ದಲ್ಲಿ ವಿಶೇಷ ಕಥೆ

ಬೆಂಗಳೂರಿನ ಪಕ್ಕದ ಹಳ್ಳಿಯಲ್ಲಿ ವಾಸಿಸುತ್ತಿರುವ ಅಶ್ವತ್ಥ್​ ಅವರಿಗೆ 5 ಹೆಣ್ಣು ಮಕ್ಕಳು. ಮೌಲ್ಯಗಳಿಗೆ ಬೆಲೆ ಕೊಡುವ ಮನುಷ್ಯ ಅಶ್ವತ್ಥ್. ತಾಯಿ ಇಲ್ಲದ ಮಕ್ಕಳಿಗೆ ಯಾವುದೇ ಕೊರತೆ ಬಾರದ ಹಾಗೆ ಅಕ್ಕರೆಯಿಂದ ಸಂಸ್ಕಾರವಂತರಾಗಿ ಬೆಳೆಸಿರುತ್ತಾರೆ. ತಮ್ಮ ಮಕ್ಕಳಿಗೆ ಮದುವೆ ಮಾಡಿ ಅವರಿಗೆ ಹೊಸ ಜೀವನ ಕೊಡುವ ಭರದಲ್ಲಿದ್ದಾರೆ. ಅವರ ಆಸೆಯಂತೆ ಇಬ್ಬರು ಮಕ್ಕಳಿಗೆ ಮದುವೆ ಮಾಡುತ್ತಾರೆ. ಆದರೆ ಮದುವೆ ಮಾಡಿ ಕಳುಹಿಸಿದ ತಕ್ಷಣ ತಂದೆಯ ಜವಾಬ್ದಾರಿ ಮುಗಿಯುವುದಿಲ್ಲ. ಮಕ್ಕಳ ಮೇಲಿನ ಜವಾಬ್ದಾರಿ ತಂದೆಗೆ ಕೊನೆ ಉಸಿರಿನವರೆಗೂ ಇರುತ್ತದೆ ಎನ್ನುವ ಕಥೆಯನ್ನು ‘ಕನ್ಯಾದಾನ’ ಒಳಗೊಂಡಿದೆ.

ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ?

ಅನುಭವಿ ಕಲಾವಿದ ಮೈಕೊ ಮಂಜು ಅವರು ‘ಕನ್ಯಾದಾನ’ ಧಾರಾವಾಹಿಯಲ್ಲಿ ಐವರು ಹೆಣ್ಣುಮಕ್ಕಳ ತಂದೆಯ ಪಾತ್ರ ನಿರ್ವಹಿಸಿದ್ದಾರೆ. ಐವರು ಹೆಣ್ಣು ಮಕ್ಕಳ ಪಾತ್ರವನ್ನು ಮಾನಸಾ ನಾರಾಯಣ್, ಕೀರ್ತಿ ವೆಂಕಟೇಶ್, ಯಶಸ್ವಿನಿ, ವಿದ್ಯಾ ರಾಜ್ ಹಾಗು ಪ್ರಾರ್ಥನಾ ಕಿರಣ್ ನಿರ್ವಹಿಸಿದ್ದಾರೆ. ಅರುಣ್ ಹರಿಹರನ್ ನಿರ್ದೇಶನ ಮಾಡುತ್ತಿದ್ದು, ಅಂಜಲಿ ವೆಂಚರ್ಸ್ ನಿರ್ಮಾಣದಲ್ಲಿ ಈ ಧಾರಾವಾಹಿ ಮೂಡಿಬರಲಿದೆ.

ಟಿಆರ್​ಪಿ ವಿಚಾರದಲ್ಲಿ ಎಲ್ಲ ಧಾರಾವಾಹಿಗಳ ನಡುವೆ ಭಾರಿ ಪೈಪೋಟಿ ಇದೆ. ಹಾಗಾಗಿ ಹೊಸ ಹೊಸ ಪ್ರಯತ್ನಗಳ ಮೂಲಕ ವೀಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಜನರನ್ನು ಆಕರ್ಷಿಸಿರುವ ಸೀರಿಯಲ್​ಗಳ ನಡುವೆ ‘ಕನ್ಯಾದಾನ’ ಯಾವ ರೀತಿ ಗುರುತಿಸಿಕೊಳ್ಳಲಿದೆ ಎಂಬ ಕೌತುಕ ಮೂಡಿದೆ.

ಇದನ್ನೂ ಓದಿ:

ಮತ್ತೆ ಕೋರ್ಟ್​ ಕಥೆ ಹಿಡಿದು ಬಂದ ಟಿಎನ್​ ಸೀತಾರಾಮ್​; ಈ ಬಾರಿ ಸೀರಿಯಲ್​ ಅಲ್ಲ, ವೆಬ್​ ಸಿರೀಸ್​

‘ಸಿಲ್ಲಿ ಲಲ್ಲಿ ಸೀರಿಯಲ್​ನಲ್ಲಿ ಯಶ್​ ನಟಿಸಿದ್ರು, ಇಂದು ಐಕಾನ್​ ಆಗಿದ್ದಾರೆ’: ಹಾಸ್ಯ ನಟ ಮಿತ್ರ

TV9 Kannada


Leave a Reply

Your email address will not be published. Required fields are marked *