ಉನ್ನತ ಶಿಕ್ಷಣಕ್ಕೆ ಕೌನ್ಸೆಲಿಂಗ್ ಪಡೆಯುವ ವಿದ್ಯಾರ್ಥಿಗಳಿಗೆ 2.5 ಲಕ್ಷ ಡಾಲರ್‌ ವಿದ್ಯಾರ್ಥಿ ವೇತನ ಘೋಷಿಸಿದ ನೆಸ್ಟ್‌ಲಿಸ್ಟ್‌ ಸಂಸ್ಥೆ | Nestlist Announced 2.5 Lakh USD Scholarship For Students Who Gets Counselling To Study Abroad


ಉನ್ನತ ಶಿಕ್ಷಣಕ್ಕೆ ಕೌನ್ಸೆಲಿಂಗ್ ಪಡೆಯುವ ವಿದ್ಯಾರ್ಥಿಗಳಿಗೆ 2.5 ಲಕ್ಷ ಡಾಲರ್‌ ವಿದ್ಯಾರ್ಥಿ ವೇತನ ಘೋಷಿಸಿದ ನೆಸ್ಟ್‌ಲಿಸ್ಟ್‌ ಸಂಸ್ಥೆ

ಅಶ್ವಥ್​ನಾರಾಯಣ್​ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೆಂಗಳೂರು: ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕುರಿತು ಉಚಿತವಾಗಿ ಮಾರ್ಗದರ್ಶನ ಹಾಗೂ ಉನ್ನತ ಮಟ್ಟದ ಕಾಲೇಜುಗಳಿಗೆ ದಾಖಲಾತಿಗೆ ಕೌನ್ಸೆಲಿಂಗ್ ನೀಡಲು ಅಮೆರಿಕಾ ಮೂಲದ ನೆಸ್ಟ್‌ಲಿಂಗ್ ಸಂಸ್ಥೆ ತನ್ನ ಮೊದಲ ಕೌನ್ಸೆಲಿಂಗ್ ಕೇಂದ್ರವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. ಅಲ್ಲದೆ ಈ ಕೇಂದ್ರಲ್ಲಿ ಕೌನ್ಸೆಲಿಂಗ್ ಪಡೆಯುವ ವಿದ್ಯಾರ್ಥಿಗಳಿಗೆ 2.5 ಲಕ್ಷ ಡಾಲರ್‌ ಸ್ಕಾಲರ್‌ಶಿಪ್‌ ನೀಡುವುದಾಗಿಯೂ ಘೋಷಿಸಿದೆ. ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ್ ಈ ಕೇಂದ್ರವನ್ನು ಉದ್ಘಾಟಿಸಿದರು. ನಂತರ ಮಾತನಾಡಿ, ಪದವಿ ಮುಗಿಸಿದ ಬಳಿಕ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಬಗ್ಗೆ ಸಾಕಷ್ಟು ಗೊಂದಲ ಹಾಗೂ ಮಾಹಿತಿ ಕೊರತೆ ಇರುತ್ತದೆ. ನೆಸ್ಟ್‌ಲಿಂಗ್ ಕೇಂದ್ರವು ಉನ್ನತ ಶಿಕ್ಷಣದಲ್ಲಿ ಯಾವ ಕೋರ್ಸ್‌ಗಳಿಗೆ ದಾಖಲಾಗಬಹುದು, ಶಿಕ್ಷಣ ಸಾಲ, ಇಂಟರ್ನ್​ಷಿಪ್, ವಿದ್ಯಾರ್ಥಿವೇತನ ಇತ್ಯಾದಿ ಬಗ್ಗೆ ಸಂಪೂರ್ಣ ನೆರವು ಹಾಗೂ ಮಾರ್ಗದರ್ಶನ ನೀಡಲಿದೆ. ಅದರಲ್ಲೂ ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವೀಸಾ ನೆರವು ಸೇರಿದಂತೆ ಇತರೆ ಕೌನ್ಸೆಲಿಂಗ್‌ ಅನ್ನು ಈ ಕೇಂದ್ರ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.‌

ವಿದ್ಯಾರ್ಥಿಗಳಿಗೆ ನೀಡುವ ಸಂಪೂರ್ಣ ಕೌನ್ಸಲಿಂಗ್ ಹಾಗೂ ಮಾಹಿತಿಯನ್ನು ಉಚಿತವಾಗಿ ನೀಡುತ್ತಿರುವುದು ಗಮನಾರ್ಹ. ಮೊದಲು ಅರ್ಜಿ ಸಲ್ಲಿಸುವ ಆಯ್ದ ವಿದ್ಯಾರ್ಥಿಗಳಿಗೆ ಒಟ್ಟು 2,50,000 ಡಾಲರ್ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಿದೆ. ಜೊತೆಗೆ ಮೊದಲು ನೋಂದಾಯಿತ 100 ವಿದ್ಯಾರ್ಥಿಗಳಿಗೆ ಇಂಟರ್‌ನ್ಯಾಷನಲ್ ಇಂಗ್ಲಿಷ್ ಲಾಂಗ್‌ವೇಜ್ ಟೆಸ್ಟಿಂಗ್ ಸಿಸ್ಟಮ್ ಹಾಗೂ ಗ್ರಾಜುಯೇಟ್‌ ರೆಕಾರ್ಡ್‌ ಎಕ್ಸಾಮಿನೇಷನ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಈ ಕುರಿತು ಮಾತನಾಡಿದ ನೆಸ್ಟ್‌ಲಿಂಗ್ ಸಂಸ್ಥೆ ಸಂಸ್ಥಾಪಕರಾದ ರಾಜಶೇಖರ್ ಬಸವರಾಜು, ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗೆ ಸೇರಲು ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಆದರೆ ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಕೇಂದ್ರ ಉಚಿತವಾಗಿ ಸೇವೆ ನೀಡಲು ಬದ್ಧವಾಗಿದೆ. ಈಗಾಗಲೇ ಅಮೆರಿಕಾದಲ್ಲಿ ಈ ರೀತಿಯ ಕೇಂದ್ರ ತೆರೆದಿದ್ದು, 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನೀಡಿ, 300ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ದಾಖಲಾತಿ ನೀಡಲಾಗಿದೆ. ಜತೆಗೆ ಅಲ್ಲಿಯೂ ವಿದ್ಯಾರ್ಥಿಗೆಳಿಗೆ ಸ್ಕಾಲರ್‌ಶಿಪ್‌ ನೀಡಲಾಗಿದೆ. ಆಗ್ನೇಯ ಏಷ್ಯಾದ ಅತಿದೊಡ್ಡ ವಿದ್ಯಾರ್ಥಿ ಸಾಲ ಕೊಡಿಸುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ ಎಂದರು.

ವಿಟಿಯು ಉಪಕುಲಪತಿ ಡಾ. ಕರಿಸಿದ್ದಪ್ಪ ಮಾತನಾಡಿ, ನೆಸ್ಟ್‌ಲಿಂಗ್ ಕೇಂದ್ರದ ಉದ್ದೇಶ ಹೆಚ್ಚು ಪ್ರಶಂಸನೀಯ. ಉನ್ನತ ಶಿಕ್ಷಣದ ಬಗ್ಗೆ ಕನಸು ಕಂಡಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೌನ್ಸೆಲಿಂಗ್ ನೀಡಿ, ವಿಶ್ವವಿದ್ಯಾಲಯಗಳಲ್ಲಿ ದಾಖಲಾತಿ ಕೊಡಿಸುತ್ತಿರುವ ಇವರ ಸೇವೆ ಉತ್ತಮವಾಗಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ನೆಸ್ಟ್‌ಲಿಂಗ್ ಸಿಇಒ ಸೌಮ್ಯಾ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಠ್ಯೇತರ ಚಟುವಟಿಕೆ ಕಡ್ಡಾಯ: ಅಶ್ವತ್ಥ್ ನಾರಾಯಣ ಮಾಹಿತಿ

TV9 Kannada


Leave a Reply

Your email address will not be published. Required fields are marked *