ಉಪಚುನಾವಣೆ ಫಲಿತಾಂಶದ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದ್ದಾರೆ: ಡಿಕೆ ಶಿವಕುಮಾರ್ | DK Shivakumar on Fuel Price Petrol Diesel Rate Karnataka Politics Byelection Results


ಉಪಚುನಾವಣೆ ಫಲಿತಾಂಶದ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದ್ದಾರೆ: ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ಬೆಂಗಳೂರು: ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಮತದಾರನ ತೀರ್ಪಿಗೆ ಬೆಳಕು ಬರಲು ಪ್ರಾರಂಭ ಆಗ್ತಿದೆ ಅಂತ ಹೇಳಿದ್ದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ತೀರ್ಪಿಗೆ ಎಷ್ಟು ಬೆಲೆ ಇದೆ, ಸರ್ಕಾರಗಳು ಎಷ್ಟು ಹೆದರಿಕೊಳ್ತಾವೆ ಅನ್ನೋದಕ್ಕೆ ಉಪಚುನಾವಣೆ ಫಲಿತಾಂಶ ಸಾಕ್ಷಿಯಾಗಿದೆ. ಅದರ ಪರಿಣಾಮವಾಗಿ ಈಗ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಇಂದು (ನವೆಂಬರ್ 4) ಹೇಳಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಎರಡೂ ಸೇರಿ ಈ ರೀತಿ ಪೆಟ್ರೋಲ್ ಡೀಸೆಲ್ ಕಡಿಮೆ ಆಗಿರುವುದು ಉಪಚುನಾವಣೆಯ ಫಲಿತಾಂಶದ ಪರಿಣಾಮ ಆಗಿದೆ. ರಾಜ್ಯದ ಉದ್ದಗಲಕ್ಕೂ ಚುನಾವಣೆ ನಡೆದಿಲ್ಲ, ಕೇವಲ ಉಪಚುನಾವಣೆಯಲ್ಲಿಯೇ ಜನ ಸಂದೇಶ ಕೊಟ್ಟಿದ್ದಾರೆ. ಇದು ಕೇಂದ್ರಕ್ಕೆ ಎಚ್ಚರಿಕೆ ಗಂಟೆ ಆಗಬೇಕು. ನಾವು ಹೇಳಿದ್ರೆ ಕೇಳಲ್ಲ, ಮತದಾರರೇ ಹಸ್ತದ ಮೂಲಕ ಉತ್ತರ ಕೊಡಬೇಕು ಅಂತ ಹೇಳಿದ್ದೆವು. ಪ್ರಬುದ್ದ ಮತದಾರರೇ ಸರ್ಕಾರಕ್ಕೆ ಮಾಲೀಕರು ಎನ್ನೋದನ್ನು ತೋರಿಸಿದ್ದಾರೆ. ಮತದಾರರಿಗೆ ಫಲ ಸಿಕ್ಕಿದೆ. ಇಷ್ಟಕ್ಕೇ ಸಾಲದು, ಎಲ್ಲರಿಗೂ ಉದ್ಯೋಗ ಸಿಗಬೇಕು ಎಂದು ಶಿವಕುಮಾರ್ ತಿಳಿಸಿದ್ದಾರೆ.

ಗ್ಯಾಸ್ ಬೆಲೆ ಕಡಿಮೆ ಆಗಿಲ್ಲ. ಗ್ಯಾಸ್ ಬೆಲೆ ಕಡಿಮೆ ಆಗುವವರೆಗೂ ಕೂಡ ಹೋರಾಟ ಮುಂದುವರಿಯಬೇಕು. ಆಹಾರ ಪದಾರ್ಥ, ಸಿಮೆಂಟ್, ಕಬ್ಬಿಣ ಎಲ್ಲ ಬೆಲೆಯೂ ಕಡಿಮೆ ಆಗಬೇಕು. ನವೆಂಬರ್ 14 ರಿಂದ ಬೆಲೆ ಏರಿಕೆ ವಿರುದ್ದ ಹೋರಾಟ ಮಾಡುವ ಕೆಲಸ ಮಾಡ್ತೇವೆ. ಉದ್ಯೋಗ ಸೃಷ್ಟಿ ಮಾಡಬೇಕು. ಯುವಕರು, ಶ್ರೀಸಾಮಾನ್ಯ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡ್ತೇವೆ. ಸರ್ಕಾರದ ತೀರ್ಮಾನ ಸ್ವಾಗತ ಮಾಡ್ತೇವೆ, ಆದ್ರೆ ಇದೇ ಮಾನದಂಡ ಸಿಮೆಂಟ್, ಕಬ್ಬಿಣ, ಗ್ಯಾಸ್​ನಲ್ಲೂ ಆಗಬೇಕು. ಕೋಟ್ಯಾಂತರ ರೂಪಾಯಿ ಕಲೆಕ್ಟ್ ಮಾಡಿಕೊಂಡಿದ್ದೀರಿ. ಆ ಹಣ ಜನರಿಗೆ ವಾಪಸ್ ನೀಡುವುದಕ್ಕೆ ಕಾರ್ಯಕ್ರಮ ರೂಪಿಸಬೇಕು ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಮತದಾರರ ತೀರ್ಪಿನಿಂದ ಆಡಳಿತ ವಿಫಲವಾಗಿದೆ ಎನ್ನೋದು ಎಲ್ಲರಿಗೂ ಮನವರಿಕೆ ಆಗಿದೆ. ರಾಜ್ಯವನ್ನು ಕತ್ತಲಲ್ಲಿ ದೂಡುವ ಕೆಲಸ ಮತ್ತೆ ಆಗ್ತಿದೆ. ರಾಜ್ಯದಲ್ಲಿ ಮತ್ತೆ ಪವರ್ ಶಾರ್ಟೆಜ್ ಅಂತ ತೋರಿಸಿದರೆ ಬಂಡವಾಳ ಹೂಡಿಕೆಗೆ ಯಾರೂ ಮುಂದೆ ಬರೋದಿಲ್ಲ. ಈಗಲೇ ಉದ್ಯೋಗಗಳು ಲಾಸ್ ಆಗಿವೆ, ಮತ್ತಷ್ಟು ಉದ್ಯೋಗ ನಷ್ಟ ಆಗುತ್ತದೆ. ನವೆಂಬರ್ 7 ರಂದು ಸಭೆ ಕರೆದಿದ್ದೇನೆ. ಎಲ್ಲರ ಜೊತೆಗೆ ಚರ್ಚೆ ಮಾಡಿ ಹೋರಾಟ ರೂಪಿಸುತ್ತೇವೆ. ಒಂದೊಂದು ದಿನಕ್ಕೆ ಬೇಕಾಗುವಷ್ಟೇ ಕಲ್ಲಿದ್ದಲು ರಾಜ್ಯಕ್ಕೆ ಬರ್ತಿದೆ. ರಾಜ್ಯದವರೇ ಕೇಂದ್ರ ಕಲ್ಲಿದ್ದಲು ಮಂತ್ರಿ ಆಗಿದ್ದಾರೆ. ಹೀಗಾಗಿ ಈ ಸಮಸ್ಯೆಯೂ ಪರಿಹಾರ ಆಗಬೇಕು ಎಂದು ಶಿವಕುಮಾರ್ ಆಗ್ರಹಿಸಿದ್ದಾರೆ.

ಸರ್ಕಾರದ ಸಾಧನೆಗೆ, ನೂರು ದಿನದ ಕೆಲಸಕ್ಕೆ ಸಿಎಂ ಜಿಲ್ಲೆಯ ಜನರೇ ಉತ್ತರ ಕೊಟ್ಟಿದ್ದಾರೆ. ನಾವಂತೂ ಅವರ ಭ್ರಷ್ಟಾಚಾರದ ಬಗ್ಗೆ ಏನೂ ಹೇಳಿಲ್ಲ. ನಮಗೆ ಬೊಮ್ಮಾಯಿ ಆದ್ರೂ ಒಂದೇ, ಯಡಿಯೂರಪ್ಪ ಆದ್ರೂ ಒಂದೇ, ನಮಗೆ ಗೊತ್ತಿರೋದು ಬಿಜೆಪಿ ಸರ್ಕಾರ ಒಂದೇ. ವ್ಯಕ್ತಿ ಮೇಲೆ ಸರ್ಕಾರ ಇಲ್ಲ, ಪಕ್ಷದ ಮೇಲೆ ಸರ್ಕಾರ ಇದೆ. ಅವರ ಪಾಲಿಸಿ ಏನಾದ್ರೂ ಬದಲಾಗತ್ತಾ? ಎಂದು ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಡೀಸೆಲ್ ಕಡಿತದಿಂದ ಜನರಿಗೆ ಗಿಫ್ಟ್ ಎಂಬ ಪ್ರಚಾರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಇದು ಜನರಿಗೆ ಕೊಟ್ಟ ಗಿಫ್ಟ್ ಅಲ್ಲ. ಇಷ್ಟು ದಿನ ಪಿಕ್ ಪಾಕೆಟ್ ಮಾಡ್ತಿದ್ರು, ಪಿಕ್ ಪಾಕೆಟ್ ನಿಲ್ಸಿದಾರೆ ಅಷ್ಟೇ. ಪಿಕ್ ಪಾಕೆಟ್ ಗೆ ಬ್ರೇಕ್ ಬಿತ್ತು ಅಷ್ಟೇ ಎಂದು ಹೇಳಿದ್ದಾರೆ.

ಇದನ್ನೂ ಓದಿ: Fuel Price: ದೀಪಾವಳಿ ಗಿಫ್ಟ್​ ಕೊಟ್ಟ ಸರ್ಕಾರ; ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ!

ಇದನ್ನೂ ಓದಿ: LPG Cylinder Price: ಕಮರ್ಷಿಯಲ್​ ಎಲ್​​ಪಿಜಿ ಸಿಲಿಂಡರ್​ ಬೆಲೆ ಬರೋಬ್ಬರಿ 265 ರೂ.ಏರಿಕೆ; ದೆಹಲಿಯಲ್ಲಿ 2 ಸಾವಿರದ ಗಡಿ ದಾಟಿದ ದರ

TV9 Kannada


Leave a Reply

Your email address will not be published. Required fields are marked *