ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲಿಸಲು ಕಾಂಗ್ರೆಸ್ ಷಡ್ಯಂತ್ರ: ಎಚ್​ಡಿ ಕುಮಾರಸ್ವಾಮಿ ಅರೋಪ | HD Kumaraswamy Confident of Winning in Sindagi Hangal By Election

ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲಿಸಲು ಕಾಂಗ್ರೆಸ್ ಷಡ್ಯಂತ್ರ: ಎಚ್​ಡಿ ಕುಮಾರಸ್ವಾಮಿ ಅರೋಪ

ಹೆಚ್‌.ಡಿ. ಕುಮಾರಸ್ವಾಮಿ

ರಾಮನಗರ/ಚನ್ನಪಟ್ಟಣ: ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಅಪಪ್ರಚಾರ ನಡೆಸುತ್ತಿದ್ದಾರೆ. ಅದರೆ ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷವೇ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಚನ್ನಪಟ್ಟಣದಲ್ಲಿ ಶುಕ್ರವಾರ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಬಿಟ್ಟು ಮಾತನಾಡಲು ಬೇರೆ ವಿಷಯ ಇಲ್ಲ. ಅವರ ರಾಜಕೀಯ ನನಗೆ ಬೇಸರ ತರಿಸಿದೆ ಎಂದು ಹೇಳಿದರು.

ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಂ ಎನ್ನುತ್ತಿರುವ ಕಾಂಗ್ರೆಸ್ ನಾಯಕರು, ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕಿದ್ದಾರೆ ಎಂದೆಲ್ಲಾ ಹೇಳುತ್ತಿದ್ದಾರೆ. ಆರೋಪಗಳಿಗೂ ಒಂದು ಮಿತಿ ಬೇಡವೇ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರು ಪದೇಪದೇ ನಿಮ್ಮ ಮೇಲೆ ದೂರುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರ ರೀತಿ ಕುಲಗೆಟ್ಟ ರಾಜಕೀಯ ನಾನು ಮಾಡುವುದಿಲ್ಲ. ಅಲ್ಪಸಂಖ್ಯಾತರು ಜೆಡಿಎಸ್ ಗೆಲ್ಲುವ ಕಡೆ ಜೆಡಿಎಸ್ ಪಕ್ಷಕ್ಕೆ ಮತ ಹಾಕಿ, ಕಾಂಗ್ರೆಸ್ ಗೆಲ್ಲುವ ಕಡೆ ಆ ಪಕ್ಷಕ್ಕೆ ಮತ ಹಾಕಿ ಎಂದು ನಾನು ಹೇಳಿರುವುದು ನಿಜ ಎಂದರು.

ಕಾಂಗ್ರೆಸ್ ಪಕ್ಷದ ನಾಯಕರಿಗೆ ಈ ಹೃದಯ ವೈಶಾಲ್ಯತೆ ಇಲ್ಲ. ನಮ್ಮ ಪಕ್ಷವನ್ನೇ ಮುಗಿಸುವ ಕೆಟ್ಟ ರಾಜಕೀಯವನ್ನು ಅವರು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜ್ಯಾತ್ಯತೀತ ಶಕ್ತಿಗಳು ಉಳಿಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನ ಬೆಂಬಲಿಸಿ ಎಂದು ನಾನು ಹೇಳಿದ್ದೇನೆ. ಆದರೆ, ಸಿದ್ದರಾಮಯ್ಯ ಅವರು ಜೆಡಿಎಸ್ ವಿರುದ್ಧ ಅಪಪ್ರಚಾರ ಮಾಡಿ ತಮ್ಮ ಕೀಳುಮಟ್ಟದ ರಾಜಕೀಯ ಏನು ಎಂಬುದನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದರು.

ಆರ್​ಎಸ್​ಎಸ್​ ಬಗ್ಗೆ ನೀಡಿರುವ ಹೇಳಿಕೆಗೆ ನಾನು ಬದ್ಧ
ಆರ್​ಎಸ್​ಎಸ್ ಬಗ್ಗೆ ಕೊಟ್ಟಿರುವ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ವಾಸ್ತವ ಸಂಗತಿಗಳನ್ನು ಮಾತ್ರ ಹೇಳಿದ್ದೇನೆ. ಆರ್​ಎಸ್​ಎಸ್ ಪ್ರಚಾರಕರೊಬ್ಬರು ಹೇಳಿರುವ ಮಾತುಗಳನ್ನು ನಾನು ಉಲ್ಲೇಖ ಮಾಡಿದ್ದೇನೆ. ಬೇಕಿದ್ದರೆ ನನ್ನ ಹೇಳಿಕೆ ವಿರೋಧ ಮಾಡುವವರು ಸಾರ್ವಜನಿಕವಾಗಿ ಚರ್ಚೆಗೆ ಬರಲಿ. ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಬಂದಾಗ ಆರ್​ಎಸ್ಎಸ್ ಇಲ್ಲದಿದ್ದರೆ ಭಾರತವು ಪಾಕಿಸ್ತಾನ ಆಗುತ್ತಿತ್ತು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿರುವ ಬಗ್ಗೆ ಪ್ರಶ್ನಿಸಿದಾಗ, ಸ್ವಾತಂತ್ರ್ಯ ಬಂದಾಗ ಈಶ್ವರಪ್ಪ ಅವರು ಹುಟ್ಟಿದ್ದರಾ? ಯಾರ ಯಾರ ಕೊಡುಗೆ ಏನೇನು ಇದೆ ಎಂದು ಈಶ್ವರಪ್ಪ ಅವರಿಗೇನು ಗೊತ್ತು? ಎಂದು ಟಾಂಗ್ ಕೊಟ್ಟರು. ಕಾಶ್ಮೀರದಲ್ಲಿ ಶಾಲೆಗೆ ನುಗ್ಗಿ ಭಯೋತ್ಪಾದಕರು ಶಿಕ್ಷಕರಿಗೆ ಗುಂಡು ಹಾರಿಸಿ ಕೊಂದಿದ್ದಾರೆ. ದೇವೇಗೌಡರು ಪ್ರಧಾನಿ ಆಗಿದ್ದಾಗ ನಾಗರಿಕರ ಮೇಲೆ ಗುಂಡು ಹಾರಿಸಿದ ಒಂದೇ ಒಂದು ಘಟನೆ ನಡೆದಿತ್ತಾ? ಕಳೆದ 4 ದಿನಗಳಲ್ಲಿ ಕಾಶ್ಮೀರದಲ್ಲಿ ಪಂಡಿತರು, ಶಿಕ್ಷಕರು, ನಾಗರಿಕರನ್ನು ಭಯೋತ್ಪಾದಕರು ಗುಂಡಿಟ್ಟು ಕೊಂದಿದ್ದಾರೆ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ನಾಯಕರ ಜತೆಗೆ ಬಿಜೆಪಿ ನಾಯಕರು ವಾದ ಮಾಡಿದ ಹಾಗೆ ನನ್ನ ಬಳಿ ಚರ್ಚೆ ಬೇಡ. ನಾನು ದಾಖಲೆ, ಆಧಾರ ಇಟ್ಟುಕೊಂಡು ಮಾತನಾಡಿದ್ದೇನೆ. ಆರ್​ಎಸ್​ಎಸ್ ಹಾಗೂ ಬಿಜೆಪಿ ಸೇರಿಕೊಂಡು ಕಾಶ್ಮೀರವನ್ನು ಹಾಳು ಮಾಡುತ್ತಿದ್ದಾರೆ ಎಂದು ಅವರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ
ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರ ವಾತಾವರಣ ಇದೆ. ಸಿಂದಗಿಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವುದು ಖಚಿತ. ಹಾನಗಲ್​ನಲ್ಲಿ ಗಟ್ಟಿ ಪೈಪೋಟಿ ನೀಡಲಿದ್ದೇವೆ ಹಾಗೂ ಅಲ್ಲಿಯೂ ನಮ್ಮ ಪರವಾದ ಅಲೆ ಇದೆ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದರು.

ನಮ್ಮ ಪಕ್ಷವನ್ನು 2023ರಲ್ಲಿ ಅಧಿಕಾರಕ್ಕೆ ತರಲು ಕಾರ್ಯಾಗಾರಗಳನ್ನು ಮಾಡಿದ್ದೇನೆ. ಇದರ ಭಾಗವಾಗಿ ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ಜನತೆ ಮುಂದೆ ಇಡಲು ಪ್ರಾರಂಭ ಮಾಡಿದ್ದೇನೆ. ಇದು ಇಲ್ಲಿಗೆ ನಿಲ್ಲಿಸುವ ಪ್ರಶ್ನೆ ಇಲ್ಲ. ಕಾರ್ಯಾಗಾರಗಳನ್ನು ಮಾಡುವ ಮೂಲಕ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇನೆ. ಉಪ ಚುನಾವಣೆಯಲ್ಲಿ ಯಾರನ್ನೋ ಓಲೈಸಿಕೊಳ್ಳಲು ಈ ಕಾರ್ಯಾಗಾರ ಮಾಡಿಲ್ಲ. ಓಲೈಸುವ ರಾಜಕಾರಣ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಬಿಟ್ಟಿದ್ದು. ಹಿಂದುತ್ವದ ಹೆಸರಿನಲ್ಲಿ ಸಂದೇಶ ಕೊಡಲು ಬಿಜೆಪಿ ಹೊರಟಿದೆ. ಹಿಂದುತ್ವದ ರಾಜಕಾರಣ ಮಾಡಿಕೊಂಡು ಮತಗಳಿಗೊಸ್ಕರ ನಾನು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿಲ್ಲಾ ಎಂದು ಕುಮಾರಸ್ವಾಮಿ ತಿಳಿಸಿದರು.

ಇದನ್ನೂ ಓದಿ: ಜೆಡಿಎಸ್ ನಂಬಿ ಎಂದು ನಾವು ಯಾರನ್ನೂ ಕೇಳುತ್ತಿಲ್ಲ: ಎಚ್​ಡಿ ರೇವಣ್ಣ
ಇದನ್ನೂ ಓದಿ: ದೇಶ ಉಳಿಸಲು ಜೆಡಿಎಸ್ ಬೆಂಬಲಿಸಿ: ಮುಸ್ಲಿಂ ಮುಖಂಡರಿಗೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಕರೆ

TV9 Kannada

Leave a comment

Your email address will not be published. Required fields are marked *