ಉ.ಪ್ರ ಕಾಂಗ್ರೆಸ್​​ಗೆ ಹೊಸ ಚಾರ್ಮ್​​ ಕೊಟ್ಟ ಪ್ರಿಯಾಂಕಾ.. ಇಂದಿರಾ ಗಾಂಧಿಯಂತೆ ಮುಖದಲ್ಲಿ ಕಳೆ, ಗತ್ತು..!


ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿದ್ದ ಕಾಲದಲ್ಲಿ ಒಂದು ಮಾತು ಇತ್ತು. ಅದೇನಂದ್ರೆ ಕಾಂಗ್ರೆಸ್‌ ಹೆಸರಲ್ಲಿ ಒಂದು ಬೇಲಿಗೂಟ ನಿಲ್ಲಿಸಿದ್ರೂ ಗೆದ್ದು ಬರುತ್ತೆ ಅಂತಾ. ಆ ಮಾತು ಆ ಕಾಲದಲ್ಲಿ ಅಕ್ಷರಶಃ ಸತ್ಯವಾಗಿತ್ತು. ಯಾಕಂದ್ರೆ, ಕಾಂಗ್ರೆಸ್‌ಗೆ ಅಂತಹದ್ದೊಂದು ಗತ್ತು, ಜನಪ್ರಿಯತೆ, ಚಾರ್ಮ್‌ ನೀಡಿದ್ದೇ ಇಂದಿರಾ ಗಾಂಧಿ. ಇದೀಗ ಮುಖದಲ್ಲಿ ಅದೇ ರೀತಿಯ ಕಳೆ, ಗತ್ತು ಹೊಂದಿರೋ ಇಂದಿರಾ ಮೊಮ್ಮಗಳು ಉತ್ತರವನ್ನಾಳಲು ಸನ್ನದ್ಧವಾಗಿರುವ ಸುಳಿವು ನೀಡಿದ್ದಾರೆ. ಆಕೆ ಯುಪಿಯಲ್ಲೇನಾದ್ರೂ ಚುನಾವಣಾ ರಾಜಕೀಯದ ರಣಕಹಳೆ ಮೊಳಗಿಸಿದ್ರೆ ಅದರಿಂದಾಗುವ ಪರಿಣಾಮಗಳೇನು?

ದುರ್ಗಾದೇವಿ ಅಂದ್ರೆ ಶಕ್ತಿಯ ಅವತಾರ, ಅಂತಹ ದುರ್ಗಾ ಮಾತೆಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಹೋಲಿಕೆ ಮಾಡ್ತಾ ಇದ್ರು ಅಂದ್ರೆ ಇಂದಿರಾ ಪವರ್‌ ಹೇಗಿತ್ತು ಅನ್ನೋದು ಗೊತ್ತಾಗಿಬಿಡುತ್ತೆ. ಇಂದಿರಾ ನೇತೃತ್ವದಲ್ಲಿ ಕಾಂಗ್ರೆಸ್​ ಎದುರಿಸಿದ 1967, 1971, 1980 ಮೂರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪೂರ್ಣ ಬಹುಮತ ಪಡೆದು ಎದುರಾಳಿಗಳನ್ನ ಧೂಳಿಪಟ ಮಾಡಿತ್ತು. ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಉಳುವವನೇ ಭೂಮಿಯ ಒಡೆಯ ಸೇರಿದಂತೆ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದು ಬಡವರ ಬಂಧುವಾಗಿ ಕಾಣಿಸಿಕೊಂಡಿದ್ರು. ಭೂಮಾಲೀಕರ ವಿರೋಧಕ್ಕೆ ಇಂದಿರಾ ಕ್ಯಾರೇ ಅಂದಿರಲಿಲ್ಲ. ಇನ್ನು, 1971ರಲ್ಲಿ ಪಾಕ್‌ ದಾಳಿಯನ್ನು ತಪ್ಪಿಸಿಕೊಳ್ಳಲು ಬಾಂಗ್ಲಾದೇಶ ಓಡೋಡಿ ಇಂದಿರಾ ಬಳಿ ಬಂದಿತ್ತು. ಇಂದಿರಾ ಅಂದು ಅವರಿಗೆ ಕೊಟ್ಟಿದ್ದು ನಾವು ನಿಮ್ಮ ಜೊತೆ ನಿಲ್ತೀವಿ ಅನ್ನೋ ಮಾತು. ಅದಾದ್ಮೇಲೆ ಕೊನೆಗೆ ಆಗಿದ್ದೆಲ್ಲಾ ಇತಿಹಾಸ. ಇನ್ನು, ಅಜ್ಜಿಯ ಮುಖಚಹರೆ, ಅಷ್ಟೇ ಬೋಲ್ಡ್​ ಌಟಿಟ್ಯೂಡ್ ಇಟ್ಕೊಂಡು ಬಂದಿರೋ ಪ್ರಿಯಾಂಕಾ ಅಜ್ಜಿಯ ಹಾದಿಯಲ್ಲಿಯೇ ನಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರ್ತಿದ್ದ ಮಧ್ಯೆಯೇ, ಈಗ ರಾಜಕಾರಣದಲ್ಲಿ ಮತ್ತಷ್ಟು ಮಿಂಚಲು ಸಜ್ಜಾಗಿ ನಿಂತಿದ್ದಾರೆ.. ಪ್ರಿಯಾಂಕಾ ತಾನೇ ಸಿಎಂ ಫೇಸ್ ಅಂತಾ ಹೇಳಿದ ಮಾತು ಉತ್ತರ ಪ್ರದೇಶ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ


ಅಜ್ಜಿಯಂತೆ ಕಾಂಗ್ರೆಸ್‌ ಬಲಿಷ್ಠ ಮಾಡ್ತಾರಾ ಪ್ರಿಯಾಂಕಾ?
ಥೇಟ್ ಅಜ್ಜಿಯನ್ನೇ ಹೋಲುವ ಮುಖಚಹರೆ ಹಾಗೂ ಗತ್ತು, ಗಾಂಭೀರ್ಯ ಹೊಂದಿರುವ ಪ್ರಿಯಾಂಕ ಅವರ ಮಾತಿನ ಶೈಲಿಯಲ್ಲಿಯೂ ಅಷ್ಟೇ ಖಡಕ್.. ಯಾವಾಗ ಮೃದುವಾಗಿ ತಿವಿಯಬೇಕು, ಅಥವಾ ಇನ್ಯಾವಾಗ ಜೋರಾಗಿ ಎದುರಾಳಿಗಳಿಗೆ ತಿರುಗೇಟು ಕೊಡಬೇಕು ಅನ್ನೋದು ಪ್ರಿಯಾಂಕಾ ಗಾಂಧಿಗೆ ಚೆನ್ನಾಗಿ ಗೊತ್ತು. ಹೀಗಿರೋ ಪ್ರಿಯಾಂಕಾ ಕಾಂಗ್ರೆಸ್​ನ ಗತವೈಭವ ಮತ್ತೊಮ್ಮೆ ಮರುಕಳಿಸುವಂತೆ ಮಾಡಲು ಸಾಕಷ್ಟು ಶ್ರಮವಹಿಸುತ್ತಿರೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಸಾಲು ಸಾಲು ರಾಜ್ಯಗಳನ್ನ ಕಳೆದುಕೊಂಡಿರುವ ಕಾಂಗ್ರೆಸ್ ಮತ್ತೆ ಗೆಲುವಿನ ಲಯಕ್ಕೆ ಮರಳುವ ತವಕದಲ್ಲಿದೆ. ರಾಹುಲ್ ಗಾಂಧಿಯ ನಾಯಕತ್ವ ಕಾಂಗ್ರೆಸ್​ನಲ್ಲಿ ಅಷ್ಟೇನೂ ಪರಿಣಾಮ ಬೀರಿಲ್ಲ ಎಂಬ ಮಾತುಗಳು, ಪಕ್ಷದ ಒಳಗೊಳಗೇ ಆಗಾಗ ಕೇಳಿಬರುತ್ತಿರುತ್ತವೆ. ಹೀಗಾಗಿ, ಹೊಸ ಚೈತನ್ಯ ಕಾಂಗ್ರೆಸ್​ಗೆ ಶತಾಯಗತಾಯ ಬೇಕಾಗಿದ್ದು, ಅದು ಪ್ರಿಯಾಂಕಾರಿಂದ ಮಾತ್ರ ಸಾಧ್ಯ ಎಂಬ ಮಾತುಗಳು ಕೇಳಸಿಗ್ತಿವೆ.

ಕೈ’ಗೆ ಪ್ರಿಯಾಂಕಾ ಶಕ್ತಿ?
2014ಕ್ಕೂ ಮುನ್ನ ದೇಶದಲ್ಲಿ ಕಾಂಗ್ರೆಸ್ ಸಾಕಷ್ಟು ಪ್ರಬಲ ಪಕ್ಷವಾಗಿತ್ತು. ನರೇಂದ್ರ ಮೋದಿ ಎಂಟ್ರಿ ಬಳಿಕ ಕಾಂಗ್ರೆಸ್ ಸಾಲು ಸಾಲು ಸೋಲು ಕಂಡಿತ್ತು. ಸಾಲು ಸಾಲು ಸೋಲಿನ ಹೊಡೆತದಿಂದ ಕಾಂಗ್ರೆಸ್ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು, 2014 ರಿಂದ ಇಲ್ಲಿಯವರೆಗೆ ಕಾಂಗ್ರೆಸ್ ತನ್ನ ಕೈಯಲ್ಲಿದ್ದ 6 ರಾಜ್ಯಗಳನ್ನು ಕಳೆದುಕೊಂಡಿದೆ. ಅದರಲ್ಲಿ ಆಂಧ್ರಪ್ರದೇಶ, ಮಧ್ಯಪ್ರದೇಶ, ಕರ್ನಾಟಗಳೂ ಸೇರಿವೆ. ಕರ್ನಾಟಕ ಮತ್ತು ಮಧ್ಯ ಪ್ರದೇಶದಲ್ಲಿ ಶಾಸಕರ ಕುದುರೆ ವ್ಯಾಪಾರದಿಂದ ಕೈಗೆ ಬಂದ ತುತ್ತು ಕಾಂಗ್ರೆಸ್‌ಗೆ ತಪ್ಪಿಹೋಗಿದೆ. ಇನ್ನು, ಸಣ್ಣ ರಾಜ್ಯಗಳಾದ ಮಣಿಪುರ, ಗೋವಾ, ಪಾಂಡಿಚೇರಿಯಲ್ಲಿಯೂ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಮೂರಂಕಿ ದಾಟಲು ಶತಮಾನದ ಇತಿಹಾಸವಿರುವ ಪಕ್ಷಕ್ಕೆ ಸಾಧ್ಯವಾಗಿಲ್ಲ. ಇದರಿಂದ ಕಾಂಗ್ರೆಸ್‌ಗೆ ಹೋರಾಡುವ ಶಕ್ತಿಯೇ ಇಲ್ಲವೇ ಎಂಬ ಅನುಮಾನ ಹುಟ್ಟುವಂತಾಗಿದ್ದು, ಸತತ ಸೋಲುಗಳನ್ನು ನೋಡಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಆತ್ಮವಿಶ್ವಾಸವೇ ಕುಗ್ಗಿ ಹೋಗಿದೆ.

ಸೋಲು, ಗೆಲುವು ಸಮಾನವಾಗಿ ಸಿಗ್ತಾ ಹೋದ್ರೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇರುತ್ತೆ. ಹೋರಾಡಬೇಕು ಗೆಲ್ಲಬೇಕು ಅನ್ನೋ ಛಲ ಇದ್ದೇ ಇರುತ್ತೆ. ಆದ್ರೆ, ಸತತವಾಗಿ ಸೋಲು ಆಗ್ತಾನೆ ಇದ್ರೆ ಅದು ಯಾವುದೇ ಪಕ್ಷದ ಕಾರ್ಯಕರ್ತರೇ ಆದ್ರೂ ವಿಶ್ವಾಸ ಕಳೆದುಕೊಳ್ಳುತ್ತಾರೆ. ಸದ್ಯ, ಕಾಂಗ್ರೆಸ್‌ಗೆ ಆಗಿರೋದು ಅದೇ. ಇಂತಹ ಸಂದರ್ಭದಲ್ಲಿ ಪ್ರಿಯಾಂಕಾ ತಾನು ಉತ್ತರ ಪ್ರದೇಶಕ್ಕೆ ಸಿಎಂ ಅಭ್ಯರ್ಥಿ ಅನ್ನೋ ಸುಳಿವು ನೀಡಿದ್ದಾರೆ.

ಕಾಂಗ್ರೆಸ್‌ಗೆ ಶಕ್ತಿ ನೀಡುತ್ತಾ ಪ್ರಿಯಾಂಕಾ ಸಿಎಂ ಫೇಸ್‌ ಹೇಳಿಕೆ?
ದಿನ ಕಳೆದಂತೆ ಉತ್ತರ ಪ್ರದೇಶ ರಾಜಕೀಯ ರಂಗು ಪಡೆಯುತ್ತಿದೆ. ಒಂದು ಕಡೆ ಬಿಜೆಪಿ ಮತ್ತು ಎಸ್‌ಪಿ ನಡುವೆ ನೇರಾನೇರ ಹೋರಾಟ ನಡೆಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಇನ್ನು, ಬಿಎಸ್‌ಪಿ, ಕಾಂಗ್ರೆಸ್‌ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಅನ್ನೋ ಮಾತುಗಳು ಕೇಳಿಬರ್ತಿದೆ. ಆದ್ರೆ, ಪ್ರಿಯಾಂಕಾ ಗಾಂಧಿ ಅದ್ಯಾವಾಗ ತಾನು ಸಿಎಂ ಫೇಸ್‌ ಅನ್ನೋ ಸುಳಿವು ನೀಡಿದ್ರೋ ಕಾರ್ಯಕರ್ತರಿಗೆ ಒಂದು ರೀತಿಯ ಪವರ್‌ ಪಾಸಾದಂತಾಗಿದೆ. ಇದೇ ಪವರ್‌ನಲ್ಲಿ ಕಾರ್ಯಕರ್ತರು ಅಖಾಡದಲ್ಲಿ ಮತಬೇಟೆಗೆ ತೊಡಗಿದ್ರೂ ಅಚ್ಚರಿಯಿಲ್ಲ. ಹೌದು, ಯಾರು ಎಷ್ಟೇ ಮಾಸ್‌ ಲೀಡರ್‌ ಇದ್ರೂ ಕೆಲಮಟ್ಟದಲ್ಲಿ ನಿಂತು ವೋಟ್‌ ತಂದುಕೊಡೋರು ಕಾರ್ಯಕರ್ತರು. ಅಂತಹ ಕಾರ್ಯಕರ್ತರಿಗೆ ಗೆಲ್ತೀವಿ ಅನ್ನೋ ಸುಳಿವು ನೀಡಬೇಕು. ಅಂತಹ ಸುಳಿವು ಸಿಕ್ರೆ ಮಾತ್ರ ಮತಬೇಟೆಯ ಕಾರ್ಯ ರೋಚಕವಾಗಿ ನಡೆಯುತ್ತೆ. ಅಂತಹವೊಂದು ರೋಚಕತೆಯನ್ನು ಪ್ರಿಯಾಂಕಾ ಸೃಷ್ಟಿಸಿದ್ದಾರೆ.

ಬಿಜೆಪಿ, ಎಸ್‌ಪಿಗೆ ಠಕ್ಕರ್‌ ಕೊಡುತ್ತಾ ಕಾಂಗ್ರೆಸ್‌?
ಸದ್ಯ, ಯೋಗಿ ನಾಡಿನಲ್ಲಿ ಮೇಲ್ನೋಟಕ್ಕೆ ಕಾಣಿಸುತ್ತಾ ಇರೋದು ಬಿಜೆಪಿ ಮತ್ತು ಎಸ್‌ಪಿ ನಡುವಿನ ಕಾಳಗ, ಬಿಜೆಪಿ ಮುಂದೆ ಎಸ್‌ಪಿ ಹಿಂದೆ ಅನ್ನೋ ಮಾತುಗಳು ಕೇಳಿ ಬರ್ತಾ ಇವೆ. ಕಾಂಗ್ರೆಸ್‌, ಬಿಎಸ್‌ಪಿ ಪಕ್ಷಗಳು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಅನ್ನೋ ಮಾತುಗಳು ಕೇಳಿ ಬರ್ತಾ ಇದ್ವು. ಮುಖ್ಯವಾಗಿ ಹೋರಾಟ ಇರೋದು ಬಿಜೆಪಿ ಮತ್ತು ಎಸ್‌ಪಿ ನಡುವೆ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಬಿಜೆಪಿ ಪ್ರಮುಖವಾಗಿ ಶೇಕಡಾ 12ರಷ್ಟಿರೋ ಬ್ರಾಹ್ಮಣ ಜನಾಂಗದ ಜೊತೆಗೆ ಮೇಲ್ವರ್ಗದ ಜನಾಂಗದ ವೋಟ್‌ ನೆಚ್ಚಿಕೊಂಡಿದೆ. ಅದರ ಜೊತೆಗೆ ದಲಿತ, ಹಿಂದುಳಿದ ವೋಟ್‌ಗಳನ್ನು ಮೋದಿ ಅಲೆಯಲ್ಲಿ ಪಡೆಯುವ ಪ್ಲಾನ್‌ ಹಾಕಿಕೊಂಡಿದೆ. ಇನ್ನು, ಎಸ್‌ಪಿ ವಿಚಾರಕ್ಕೆ ಬರುವುದಾದ್ರೆ ಯಾದವ, ಮುಸ್ಲಿಂ ಮತಗಳು ಆ ಪಕ್ಷಕ್ಕೆ ಫಿಕ್ಸ್‌. ಆದ್ರೆ, ಅದು ಗೆಲುವಿನ ದಡ ಸೇರಿಸಲ್ಲ ಅನ್ನೋದು ಎಸ್‌ಪಿ ಮುಖಂಡ ಅಖಿಲೇಶ್‌ಗೆ ಅರ್ಥವಾಗಿದೆ. ಇದೇ ಕಾರಣಕ್ಕೆ ಹಿಂದುಳಿದ, ದಲಿತ ಮತಗಳಿಗೂ ಎಸ್‌ಪಿ ಗಾಳ ಹಾಕುತ್ತಿದೆ.

ಬಿಜೆಪಿ, ಎಸ್‌ಪಿ ನಡೆ ಹೀಗೇ ಆಗಿದ್ರೆ, ಶೇಕಡಾ 21 ರಷ್ಟಿರೋ ದಲಿತ ಮತಗಳನ್ನೇ ಬಿಎಸ್‌ಪಿ ಮುಖಂಡೆ ಮಾಯಾವತಿ ನೆಚ್ಚಿಕೊಂಡಿದ್ದಾರೆ. ಆದ್ರೆ, ಇಲ್ಲಿ ವಿಶೇಷವಾಗಿ ಕಾಣಿಸುತ್ತಿರೋದು ಕಾಂಗ್ರೆಸ್​, ಹೌದು, ಕಾಂಗ್ರೆಸ್‌ ಯಾವುದೇ ಒಂದು ಜನಾಂಗದ ವೋಟ್‌ ನೆಚ್ಚಿಕೊಂಡಿಲ್ಲ. ಇಲ್ಲಿಯವರೆಗೆ ಕಾಂಗ್ರೆಸ್‌ ಜೊತೆ ಮುಸ್ಲಿಂ ಮತಗಳು ಇದ್ವು. ಆದ್ರೆ, ಬಿಜೆಪಿಯನ್ನು ಸೋಲಿಸಬೇಕು ಅನ್ನೋ ಕಾರಣಕ್ಕೆ ಮುಸ್ಲಿಂ ಮತಗಳು ಎಸ್‌ಪಿ ಜೊತೆ ಸೇರಿಕೊಂಡಿವೆ. ಇದೇ ಕಾರಣಕ್ಕೆ ಕಾಂಗ್ರೆಸ್‌ ಯುವ ಮತದಾರರು, ಮಹಿಳಾ ಮತದಾರರನ್ನೇ ಟಾರ್ಗೆಟ್‌ ಮಾಡಿಕೊಂಡಿದೆ.

ಅತಂತ್ರ ಪರಿಸ್ಥಿತಿ ನಿರ್ಮಾಣವಾದ್ರೆ ಏನಾಗುತ್ತೆ?
ಉತ್ತರ ಪ್ರದೇಶದಲ್ಲಿ ಅತಂತ್ರ ಪರಿಸ್ಥಿತಿಯನ್ನು ಅಲ್ಲಗೆಳೆಯುವ ಹಾಗೆ ಇಲ್ಲವೇ ಇಲ್ಲ. ಯಾಕಂದ್ರೆ ಇಲ್ಲಿ ಬಿಜೆಪಿ ಮತ್ತು ಎಸ್‌ಪಿ ನಡುವೆ ತೀವ್ರ ಪೈಪೋಟಿ ಇದೆ. ಇದೇ ಪೈಪೋಟಿ ಅತಂತ್ರ ಸ್ಥಿತಿ ನಿರ್ಮಿಸಲೂಬಹುದು. ಒಮ್ಮೆ ಹಾಗಾದ್ರೆ, ಅಂತಹ ಪರಿಸ್ಥಿತಿಯಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಪಕ್ಷಗಳೇ ನಿರ್ಣಾಯಕವಾಗಿ ಬಿಡುತ್ತವೆ. ಆವಾಗ ಕಾಂಗ್ರೆಸ್‌ ಮತ್ತು ಬಿಎಸ್‌ಪಿ ನಡೆ ಏನಿರಬಹುದು. ಒಮ್ಮೆ ಕಾಂಗ್ರೆಸ್‌ ನಿರ್ಣಾಯಕ ಅಂತಾದ್ರೆ, ಡೌಟೇ ಬೇಡ, ಅದರ ಬೆಂಬಲ ಎಸ್‌ಪಿಗೆ ಇರುತ್ತೆ ಅಂತಾ ಹೇಳಲಾಗ್ತಿದೆ. ಇನ್ನು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದನ್ನು ತಡೆಯುವ ಸಲುವಾಗಿ ಕಾಂಗ್ರೆಸ್‌ ತಾನೇ ಸಿಎಂ ಸ್ಥಾನ ಪಡೆದ್ರೂ ಅಚ್ಚರಿಯಿಲ್ಲ. ಹಾಗೇ ಬಿಎಸ್‌ಪಿ ನಿರ್ಣಾಯಕವಾಗಿ ಬಿಟ್ರೆ ಏನಾಗುತ್ತೆ ಅನ್ನೋದನ್ನು ಅಂದಾಜಿಸುವುದು ಕಷ್ಟ. ಯಾಕೆಂದ್ರೆ ಮಾಯಾವತಿಗೆ ಬಿಜೆಪಿ, ಎಸ್‌ಪಿ ಸಮಾನ ವಿರೋಧಿಗಳು. ಈ ಹಿಂದೆ ಬಿಜೆಪಿ, ಎಸ್‌ಪಿ ಜೊತೆ ಸಮ್ಮಿಶ್ರ ಸರ್ಕಾರ ರಚಿಸಿದ ಇತಿಹಾಸ ಮಾಯಾವತಿಗೆ ಇದೆ. ಆದ್ರೂ, ಆ ಎರಡೂ ಪಕ್ಷಗಳನ್ನು ಮಾಯಾವತಿ ವಿರೋಧಿಸುತ್ತಲೇ ಬಂದಿದ್ದಾರೆ. ಸದ್ಯಕ್ಕೆ ಏನಾಗುತ್ತೆ ಅನ್ನೋದನ್ನು ಅಂದಾಜಿಸೋದು ಕಷ್ಟ. ಅಲ್ಲಿಯ ಸ್ಥಳೀರ ಪರಿಸ್ಥಿತಿ ಮೇಲೆ ಸೀಟುಗಳು ಹೆಚ್ಚು ಕಡಿಮೆಯಾಗುತ್ತವೆ. ಅಷ್ಟಕ್ಕೂ ಏನಾಗುತ್ತೆ ಅನ್ನೋದಕ್ಕೆ ಮಾರ್ಚ್‌ 10 ಫಲಿತಾಂಶದ ವರೆಗೂ ಕಾಯಲೇಬೇಕು.

ಸತತ ಸೋಲಿನ ಸುಳಿಯಲ್ಲಿರುವ ಕಾಂಗ್ರೆಸ್‌ಗೆ ಪ್ರಿಯಾಂಕಾ ಗಾಂಧಿ ಒಂದೇ ಒಂದು ಹೇಳಿಕೆ ಹೊಸ ಚೈತನ್ಯ ನೀಡಿದೆ. ಅದು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ನ ಅಧಿಕಾರಕ್ಕೆ ತಂದು ನಿಲ್ಲಿಸುತ್ತೆ ಅನ್ನಲಾಗದು. ಆದ್ರೆ, ತಳಮಟ್ಟದಲ್ಲಿ ಮತಬೇಟೆಯಾಡುತ್ತಿರೋ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿದೆ. ಹುಮ್ಮಸ್ಸಿನಿಂದ ಕೆಲಸ ಮಾಡುವಂತೆ ಮಾಡಿದೆ.

News First Live Kannada


Leave a Reply

Your email address will not be published. Required fields are marked *