ಊಟ ಮಾಡ್ತ ಮಗಳಿಗೆ ಬುದ್ಧಿ ಹೇಳ್ತಿದ್ದ ಅಪ್ಪ, ಮರುಘಳಿಗೆ ಕೊಂದೇಬಿಟ್ಟ ಕಂಪ್ಲೀಟ್ ಸ್ಟೋರಿ

ಊಟ ಮಾಡ್ತ ಮಗಳಿಗೆ ಬುದ್ಧಿ ಹೇಳ್ತಿದ್ದ ಅಪ್ಪ, ಮರುಘಳಿಗೆ ಕೊಂದೇಬಿಟ್ಟ ಕಂಪ್ಲೀಟ್ ಸ್ಟೋರಿ

ತಂದೆ ತಾಯಿ ಅಂದ್ರೆನೇ ಪ್ರೀತಿ. ತಮ್ಮ ಮಕ್ಕಳನ್ನ ಕಣ್ಣಲ್ಲಿ ಕಣ್ಣಿಟ್ಟು ಸಾಕ್ತಾರೆ. ತಮ್ಮ ಪ್ರೀತಿಯೆನ್ನೆಲ್ಲಾ ಧಾರೆ ಎರೆದು ಮಕ್ಕಳನ್ನು ಬೆಳೆಸ್ತಾರೆ. ಆದರೆ, ಅದೇ ತಂದೆ ತಾಯಿ ಜಾತಿ ಅನ್ನೋ ಒಂದೇ ಒಂದು ಕಾರಣಕ್ಕೆ ಮೃಗವಾಗಿ ಬಿಡ್ತಾರಾ? ಕರುಣೆ ಅನ್ನೋದನ್ನೆ ಮನಸ್ಸಿಂದ ಕಿತ್ತು ಎಸೆಯುತ್ತಾರಾ? ರಕ್ತ ಸಂಬಂಧವನ್ನೇ ಮರೆತು ರಕ್ತ ಚೆಲ್ಲುತ್ತಾರಾ? ಈ ಸುದ್ದಿಯನ್ನ ಕೇಳಿದ್ರೆ ಇದೆಲ್ಲಾ ನಿಜ ಅನ್ನಿಸದೇ ಇರೋಲ್ಲಾ.

ಮರ್ಯಾದ ಹತ್ಯಾ. ಈ ಕೂಗ ಆಗೊಮ್ಮೆ ಈಗೊಮ್ಮೆ ವಿಶ್ವದ ನಾನಾ ಕಡೆ ಕೇಳಿ ಬರುತ್ತಲೆ ಇರುತ್ತೆ. ಇವತ್ತಿಗೂ ನಾನಾ ಕಡೆ ನಡೆಯುತ್ತಲೆ ಇದೆ. ಆದ್ರೆ ಇದನ್ನ ಯಾರಿಂದಲೂ ಕೂಡ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಅನ್ನೋ ಮಾತನ್ನ ತಿಳಿದುಕೊಂಡಿರೋರು ಹೇಳ್ತಾ ಇರುತ್ತಾರೆ. ಬೇರೆ ದೇಶದ್ದನ್ನ ಮಾತಾಡೋದಕ್ಕಿಂತ ನಮ್ಮ ದೇಶದಲ್ಲಿ ನಡೆದ, ಅದೂ ಇತ್ತೀಚಿನ ದಿನಗಳಲ್ಲಿ ನಡೆದಂತಹ ಘಟನೆಗಳೇ ಇದಕ್ಕೆ ಸಾಕ್ಷಿ. ಪಕ್ಕದ ತೆಲಂಗಾಣದಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಮರ್ಯಾದ ಹತ್ಯೆ ದೇಶದಲ್ಲೆಲ್ಲಾ ಸಂಚಲನವನ್ನ ಸೃಷ್ಟಿಸಿತ್ತು. ಈಗ ಅಂಥದ್ದೆ ಒಂದು ಘಟನೆ ನಮ್ಮ ರಾಜ್ಯದಲ್ಲಿಯೂ ನಡೆದುಬಿಟ್ಟಿದೆ.

ಆರೋಪಿ ಜಯರಾಂ, ತಂದೆ

ಮರಾಠಿ ಭಾಷೆಯಲ್ಲಿ ಒಂದು ಸಿನಿಮಾ ಮಹಾರಾಷ್ಟ್ರದ ಯಾವುದೋ ಒಂದು ಮೂಲೆಯಲ್ಲಿ ಬಿಡುಗಡೆಗೊಳ್ಳುತ್ತೆ. ಆ ಸಿನಿಮಾವನ್ನ ಮುಂದೊಂದು ದಿನ ದೇಶದ ನಾನಾ ಭಾಷೆಗಳಲ್ಲಿ ಡಬ್ಬಿಂಗ್ ಕೂಡ ಮಾಡ್ತಾರೆ. ಕೇವಲ ಆ ಸಿನಿಮಾದ ಕ್ಲೈಮ್ಯಾಕ್ಸ್​ನಿಂದಲೇ ಜನ ಕಣ್ಣಂಚಿನಲ್ಲಿ ನೀರನ್ನ ತುಂಬಿಕೊಂಡು ಥಿಯೇಟರ್​​ನಿಂಧ ಹೊರಗಡೆ ಬರ್ತಾರೆ. ಅದ್ಯಾವ ಸಿನಿಮಾ ಅಂದ್ರೆ ಸೈರಾಠ್. ಹೌದು ಈ ಸಿನಿಮಾದಲ್ಲಿ ಅನ್ಯಕೋಮಿನ ಇಬ್ಬರು ಪ್ರೀತಿಸಿ ಹೆತ್ತವರ ವಿರುದ್ಧವಾಗಿಯೂ ಮದುವೆ ಆಗಿ ಎಲ್ಲೋ ಒಂದು ಕಡೆ ಸುಖಕರಾವಾಗಿ ಜೀವನವನ್ನ ಸಾಗಿಸುತ್ತಿರುತ್ತಾರೆ. ಅವರಿಗೊಂದು ಪುಟ್ಟ ಮಗು ಕೂಡ ಇರುತ್ತೇ. ಆದ್ರೆ ಯುವತಿಯ ತಂದೆಗೆ ಬೇರೆ ಜಾತಿಯವನ ಜೊತೆ ಮಗಳು ಮದುವೆ ಆಗಿಬಿಟ್ಟಳು ಅನ್ನೋ ಸಿಟ್ಟಿಗೆ ಕೊನೆಗೂ ಹುಡುಕಾಡಿ ಇಬ್ಬರನ್ನು ಹತ್ಯೆ ಮಾಡಿಸಿಬಿಡುತ್ತಾನೆ. ಇದು ನೇರವಾಗಿ ನಮ್ಮ ನಿಮ್ಮ ನಡುವೆ ಆಗುತ್ತಿರುವ ಮರ್ಯಾದ ಹತ್ಯೆಯ ಒಂದು ಭಾಗವನ್ನ ಸಿನಿಮಾದಲ್ಲಿ ತೋರಿಸಲಾಗಿದೆ. ಹೇಗೋ ಅವರ ಪಾಡಿಗೆ ಅವರನ್ನ ಕೊಲ್ಲದೇ ಬಿಟ್ಟುಬಿಟ್ಟಿದ್ದರೆ ಅವರ ಪಾಡಿಗೆ ಚಿಕ್ಕ ಸಂಸಾರವನ್ನ ನಡೆಸಿಕೊಂಡು ಹೋಗ್ತಾ ಇದ್ದರು. ಆದ್ರೆ ಹೆತ್ತವರ ಆಕ್ರೋಶಕ್ಕೆ ಬಲಿ ಆಗಿಬಿಡುತ್ತಾರೆ.

ಈ ಮಾತನ್ನ ಯಾಕೆ ಹೇಳ್ತಾ ಇದ್ದೀವಿ ಅನ್ನೋದಕ್ಕೆ ಮುಖ್ಯವಾದ ಕಾರಣವೇ ಮೈಸೂರಿನಲ್ಲಿ  ನಡೆದ ಆ ಒಂದು ಘಟೆನ. ಮೊದಲಿಗೆ ಈ ಚಿತ್ರದಲ್ಲಿರೋ ಯುವತಿಯನ್ನ ನೋಡಿಕೊಳ್ಳಿ. ಹೆಸರು 18 ಗಾಯತ್ರಿ. ನೋಡೋದಕ್ಕೆ ಲಕ್ಷಣವಾಗಿ ಸುಂದರವಾಗಿ ಕಾಣುತ್ತಿರೋ ಈ ಯುವತಿ ಜೀವನದಲ್ಲಿ ಇನ್ನು ಬಾಳಿ ಬದುಕಬೇಕಿತ್ತು. ಆದರೆ ತೊಟ್ಟಿಲಲ್ಲಿ ತೂಗುತ್ತಾ ಲಾಲಿ ಹಾಡಿ ಮಲಗಿಸಿದ ಹೆತ್ತ ತಂದೆಯೇ ತನ್ನನ್ನ ಮುಂದೊಂದು ದಿನ ಕೊಲ್ಲುತ್ತಾನೆ ಅಂತಾ ಅಂದುಕೊಂಡಿರಲಿಲ್ಲ. ಆದ್ರೆ ಇಂದು ಹೆತ್ತ ತಂದೆಯೇ ಈಕೆಯನ್ನ ಕೊಂದು ಬಿಟ್ಟಿದ್ದಾನೆ. ಅದಕ್ಕೆ ಕಾರಣವನ್ನ ಹುಡುಕುತ್ತಾ ಹೋಗೋದು ಪೊಲೀಸರಿಗೆ ಕಷ್ಟವೇನು ಆಗಿರಲಿಲ್ಲ. ಯಾಕಂದ್ರೆ ಗಾಯತ್ರಿಯನ್ನ ಕೊಲೆ ಮಾಡಿದ್ದ ತಂದೆಯೇ ಪೊಲೀಸರ ಮುಂದೆ ಹೋಗಿ ನಿಂತು ಬಿಟ್ಟಿದ್ದ. ತಾನು ಮಗಳನ್ನ ಕೊಲೆ ಯಾಕೆ ಮಾಡಿದೆ ಅನ್ನೋದನ್ನು ಕೂಡ ಹೇಳಿದ್ದ.

ಹೌದು. ಕೊಲೆ ಮಾಡಿದ್ದು ನಾನೇ, ನನ್ನ ಮಗಳು ಇನ್ನೊಂದು ಜಾತಿಯ ಯುವಕನನ್ನ ಪ್ರೀತಿ ಮಾಡುತ್ತಿದ್ದಳು ಅಂತಾ ನೇರಾನೇರ ಪೊಲೀಸರ ಮುಂದೆ ಹೇಳಿಬಿಟ್ಟಿದ್ದ. ಒಂದು ತಿಂಗಳ ಹಿಂದೆಯೇ ತನ್ನ ಮಗಳು ಒಬ್ಬನನ್ನ ಪ್ರೀತಿ ಮಾಡುತ್ತಿದ್ದಾಳೆ ಅನ್ನೋದು ಹೆತ್ತವರಿಗೆ ಗೊತ್ತಾಗಿತ್ತು. ಆಕೆಗೆ ಹೆದರಿಸಿ ಬೆದರಿಸಿ ಮನೆಯಲ್ಲಿ ಬುದ್ಧಿ ಹೇಳಿದ್ದರು. ಆದ್ರೆ ಒಂದು ತಿಂಗಳ ಬಳಿಕ ಮಗಳನ್ನ ತಂದೆಯೇ ಕೊಂದು ಬಿಟ್ಟಿದ್ದಾನೆ.

ಏಕಾಏಕಿ ಮಗಳನ್ನ ಕೊಂದಿದ್ದು ಯಾಕೆ?

ಕಳೆದ ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತಂದೆ ಜಯರಾಮ್ ಹೊಲದಲ್ಲಿ ವ್ಯವಸಾಯ ಮಾಡಿಕೊಂಡಿರುತ್ತಾನೆ. ಪ್ರತಿನಿತ್ಯದಂತೆ ಮಗಳು ಗಾಯತ್ರಿ ಊಟವನ್ನ ತಗೊಂಡ್ ಹೊಲದ ಬಳಿ ಹೋಗುತ್ತಾಳೆ. ಸುಮಾರು 12.30ರ ಸುಮಾರಿಗೆ ಜಯರಾಮ್, ಮಗಳು ಊಟ ತಂದಿದ್ದಾಳೆ ಅನ್ನೋ ಖುಷಿಯಲ್ಲಿ ಕೈ ಕಾಲನ್ನ ತೊಳೆದುಕೊಂಡು ಬಂದು ಊಟಕ್ಕೆ ಕೂತುಕೊಳ್ಳುತ್ತಾನೆ. ಮಗಳು ಕೂಡ ಊಟವನ್ನ ಬಡಿಸಿ ಸುಮ್ಮನೇ ಕೂತಿರುತ್ತಾಳೆ. ಇಲ್ಲಿ ಊಟ ಮಾಡಿ ಮುಗಿಸಿ ಕೈ ತೊಳೆದು ತಂದೆ ಎದ್ದು ಹೋಗಿಬಿಟ್ಟಿದ್ದರೆ ಅವಾಂತರ ಆಗ್ತಾ ಇರಲಿಲ್ಲ. ಆದ್ರೆ ತಂದೆ ಊಟ ಮಾಡುತ್ತಲೇ ಮಗಳಿಗೆ ಬುದ್ಧಿ ವಾದ ಹೇಳೋದಕ್ಕೆ ಶುರು ಮಾಡಿಕೊಳ್ಳುತ್ತಾನೆ. ಆಗ ಗಾಯತ್ರಿ ಕೂಡ ತಂದೆಗೆ ಪ್ರತ್ಯುತ್ತರ ಕೊಡೋಕೆ ಶುರು ಮಾಡ್ತಾಳೆ.

ಪ್ರಿಯಕರನನ್ನ ಬಿಟ್ಟು ಬಿಡು ಅಂತ ಹೇಳಿದ್ದ ಜಯರಾಮ್
ನೋಡ ನೋಡ್ತಿದ್ದಂತೆ ಮಗಳನ್ನೇ ಕೊಂದು ಬಿಟ್ಟ ತಂದೆ

ಗಾಯಿತ್ರಿಯೊಂದಿಗೆ ಮಾತನಾಡಿದ ಜಯರಾಂ, ಮಗಳಿಗೆ ಬುದ್ದಿಮಾತು ಹೇಳಿದ್ದ. ಪ್ರೀತಿಸುತ್ತಿರುವ ಯುವಕನನ್ನು ಬಿಟ್ಟು ಬಿಡುವಂತೆ ಒತ್ತಾಯಿಸಿದ್ದ. ಆದ್ರೆ ಗಾಯತ್ರಿ ಮಾತ್ರ, ನಾನು ಬಿಡುವುದಿಲ್ಲ ಏನು ಮಾಡುತ್ತೀಯ ಎಂದು ಅಪ್ಪನನ್ನು ಪ್ರಶ್ನಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಜಯರಾಮ್ ಜ ಕೃಷಿ ಕೆಲಸಕ್ಕೆಂದು ಇಟ್ಟುಕೊಂಡಿದ್ದ ಮಚ್ಚನ್ನೇ ಮಗಳ ಮೇಲೆ ಬೀಸಿದ್ದಾನೆ.

ಕೊಲೆ ಬಗ್ಗೆ ಮಾಹಿತಿ ಸಿಕ್ಕ ಬಳಿಕ ಪರಿಯಾಪಟ್ಟಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಅಲ್ಲದೇ ಖುದ್ದು ಆರೋಪಿ ಜಯರಾಮ್ ಪೊಲೀಸ್ ಠಾಣೆಗೆ ಬಂದು ಶರಣಾಗಿ, ಆತನೆ ಎಲ್ಲವನ್ನು ಒಪ್ಪಿಕೊಂಡಿದ್ದರಿಂದ ಪೊಲೀಸರು ದೂರನ್ನ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಗಾಯತ್ರಿ ಪಿಯುಸಿ ಓದುತ್ತಿದ್ದಳು. ಆದ್ರೆ ಪಾಸ್ ಆಗಿರಲಿಲ್ಲ. ಅದಕ್ಕಾಗಿ ಆಕೆಯನ್ನ ಕಾಲೇಜಿಗೆ ಮತ್ತೆ ಕಳುಹಿಸಿದೇ ಮನೆಯಲ್ಲಿಯೇ ಇಟ್ಟುಕೊಂಡಿದ್ದರು ಹೆತ್ತವರು. ಹೀಗೆ ಮನೆಯಲ್ಲಿ ಇದ್ದ ಗಾಯತ್ರಿ  ಕದ್ದು ಮುಚ್ಚಿ ಲವ್ ಮಾಡ್ತಾಯಿರೋದು ಪೋಷಕರಿಗೂ ಗೊತ್ತಾಗಿಬಿಟ್ಟಿರುತ್ತೇ.  ಎಷ್ಟೇ ಬುದ್ದಿವಾದವನ್ನ ಹೇಳಿದ್ರು ಕೂಡ ಆತನನ್ನೇ ಮದುವೆ ಆಗೋದು ಎಂದು ಗಾಯತ್ರಿ ಹಠಕ್ಕೆ ಬಿದ್ದಿದ್ದಳು. ಆದ್ರೆ ಜಾತಿಗೆ ಕಟುಬಿದ್ದಿದ್ದ ತಂದೆ ಕೊನೆಗೆ ಮಾಡಿದ್ದು ಕೊಲೆ

ಆರೋಪಿ ತಂದೆ ಜಯರಾಂ ಕೃಷಿಕನಾಗಿದ್ದು ಮೂವರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳನ್ನ ಮೈಸೂರಿಗೆ ಮದುವೆ ಮಾಡಿಕೊಡಲಾಗಿದೆ. ಎರಡನೇ ಮಗಳು ಎಂ.ಕಾಂ ಓದುತ್ತಿದ್ದಾಳೆ. ಮೂರನೇಯವಳಾದ ಗಾಯತ್ರಿ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣಳಾದ ಹಿನ್ನೆಲೆಯಲ್ಲಿ ಮನೆಯಲ್ಲೇ ಉಳಿದಿದ್ದಳು. ಈ ನಡುವೆ ಮೆಡಿಕಲ್ ಶಾಪ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅನ್ಯಜಾತಿಯ ರಾಘವೇಂದ್ರ ಎಂಬ ಯುವಕನ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೇಮವಾಗಿ ಕದ್ದು ಮುಚ್ಚಿ ಪ್ರೇಮಪಕ್ಷಿಗಳು ಹಾರಾಡತೊಡಗಿದ್ವು.

ಕೋಪಕ್ಕೆ ಕೆಲಸ ಕೊಟ್ಟಿದ್ದರಿಂದ ಇಂದು ಮಗಳು ಕೊಲೆಯಾದ್ರೆ, ತಂದೆ ಜೈಲು ಸೇರಿದ್ದಾನೆ. ಇಲ್ಲಿ ಇಬ್ಬರು ಒಂದು ಬಾರಿ ಆಲೋಚನೆ ಮಾಡಿದ್ದರೆ ಇವತ್ತು ಇಂಥಾ ಒಂದು ದುರ್ಘಟನೆ ನಡೆಯುತ್ತಿರಲಿಲ್ಲ. ಮಗಳನ್ನ ಯಾರಿಗೋ ಕೊಟ್ಟು ಮದುವೆ ಮಾಡಬೇಕಲ್ವಾ ಅನ್ನೋ ಆಲೋಚನೆ ಹೆತ್ತವರದ್ದು, ಇನ್ನೊಂದು ತನ್ನ ಪ್ರೀತಿಯನ್ನ ಉಳಿಸಿಕೊಳ್ಳಲೇಬೇಕು ಅನ್ನೋ ಹಠಕ್ಕೆ ಬಿದ್ದ ಮಗಳು. ಇದೇ ಕಾರಣದಿಂದಾಗಿ ಇವತ್ತು ಈ ಒಂದು ಘಟನೆ ನಡೆದು ಹೋಗಿದೆ. ಹೆತ್ತವರ ಬಳಿ ತಾನು ಮದುವೆ ಯಾಕೆ ಆಗುತ್ತೇನೆ ಅನ್ನೋದು ಮನವರಿಕೆ ಮಾಡಿಕೊಟ್ಟು ಅದನ್ನ ಪೋಷಕರು ಒಪ್ಪಿಕೊಳ್ಳಬಹುದಿತ್ತು. ಅಥವಾ ಪೋಷಕರ ಮಾತನ್ನ ಮಗಳು ಕೇಳಿ ಸುಮ್ಮನಾಗಿಬಿಡಬಹುದಿತ್ತೇನೋ. ಇಲ್ಲಿ ಒಂದು ಕಡೆ ಪೋಷಕರು ಸೋಲಲಿಲ್ಲ, ಮಗಳು ಕೂಡ ಜಗ್ಗಲಿಲ್ಲ. ಇದೇ ಕಾರಣಕ್ಕೆ ಇವತ್ತು ಮರ್ಯಾದ ಹತ್ಯಾ ನಡೆದು ಹೋಗಿದೆ.

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನ ಮುಂದುವರೆಸಿದ್ದಾರೆ. ಏನೆ ಆಗಲಿ ಒಂದು ಸಣ್ಣ ವಾಗ್ವಾದ ಸಾವಿನಲ್ಲಿ ಅಂತ್ಯ ಆಗಿರೋದು ನಿಜಕ್ಕು ವಿಪರ್ಯಾಸವೇ ಸರಿ.

The post ಊಟ ಮಾಡ್ತ ಮಗಳಿಗೆ ಬುದ್ಧಿ ಹೇಳ್ತಿದ್ದ ಅಪ್ಪ, ಮರುಘಳಿಗೆ ಕೊಂದೇಬಿಟ್ಟ ಕಂಪ್ಲೀಟ್ ಸ್ಟೋರಿ appeared first on News First Kannada.

Source: newsfirstlive.com

Source link