ಊರೊಳಕ್ಕೆ ಬಂದ ಒಂಟಿ ಸಲಗನಿಗೆ ಜನರನ್ನು ಕಂಡು ಭಯವಾಗಿ ವಾಪಸ್ಸು ಓಡಿಹೋದ ಪ್ರಸಂಗ! | Tuskar mistakenly enters a human habitat only to run back into woods after watching people


ಕಾಡುಪ್ರಾಣಿಗಳು ಊರೊಳಗೆ ಬರುವುದು, ಜನ ಆತಂಕಕ್ಕೀಡಾಗುವುದು ಈಗ ಸುದ್ದಿಯೇ ಅಲ್ಲ ಮಾರಾಯ್ರೇ. ಸಿದ್ದರಾಮಯ್ಯ ಮತ್ತು ಕೆ ಎಸ್ ಈಶ್ವರಪ್ಪ ಪರಸ್ಪರ ಬೈದಾಡುವಷ್ಟೇ ಅದು ಕಾಮನ್ ಆಗಿಬಿಟ್ಟಿದೆ. ನಮಗೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಹೆಸರಿನ ಊರಿಂದ ಒಂದು ವಿಡಿಯೋ ಲಭ್ಯವಾಗಿದೆ. ಮೊಬೈಲ್ ಫೋನಲ್ಲಿ ಶೂಟ್ ಮಾಡಿದ ವಿಡಿಯೋನಲ್ಲಿ ನಿಮಗೆ ಸಲಗವೊಂದು ಕಾಣುತ್ತಿದೆ. ವೀರಪ್ಪನ್ ಗತಿಸಿದ ನಂತರ ನಮಗೆ ಹೆಣ್ಣಾನೆ ಮತ್ತ್ತು ಗಂಡಾನೆಯನ್ನು ಗುರುತಿಸುವುದು ಸಾಧ್ಯವಾಗುತ್ತಿದೆ. ಅವನಿದ್ದಿದರೆ, ಗಂಡಾನೆಗಳನ್ನು ಕೊಂದೋ ಅಥವಾ ಮೂರ್ಛೆ ಬರುವಂತೆ ಮಾಡಿ ಅವುಗಳ ದಂತಗಳನ್ನು ಕದ್ದು ಬಿಡುತ್ತಿದ್ದ. ಸಲಗಗಳಿಗೆ ಕಾಡಿನಲ್ಲಿ ತಮ್ಮ ಐಡೆಂಟಿಟಿ ಮೆರೆಯಲು ಸಾಧ್ಯವಾಗುತ್ತಿರುವುದಕ್ಕೆ ವೀರಪ್ಪನ್ ಶೂಟ್ ಮಾಡಿದ ಕೆ ವಿಜಯಕುಮಾರ ನೇತೃತ್ವದ ತಮಿಳುನಾಡು ಟಾಸ್ಕ್ ಫೋರ್ಸ್ ಅಧಿಕಾರಿಗಳಿಗೆ ಅವು ಒಮ್ಮೆ ಪೊಡಮಡಬೇಕು.

ಓಕೆ ವಿಷಯಕ್ಕೆ ಬರೋಣ ಮರಾಯ್ರೇ. ಈ ಒಂಟಿ ಸಲಗ ಶುಕ್ರವಾರದಂದು ಕಾಡಿನಿಂದ ಊರು ಪ್ರವೇಶಿಸಿದೆ. ಸತತ ಮಳೆಯಿಂದಾಗಿ ಸಸ್ಯಾಹಾರಿ ಪ್ರಾಣಿಗಳಿಗೆ ಕಾಡಿನಲ್ಲಿ ಆಹಾರದ ಕೊರತೆ ಇಲ್ಲ. ರಾಜ್ಯದ ಎಲ್ಲ ಕಾಡುಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಅದರೆ, ಈ ಕಪ್ಪು ಐರಾವತನಿಗೆ ಸ್ವಲ್ಪ ಚೇಂಜ್ ಬೇಕೆನಿಸಿ ಊರಿನೆಡೆ ಬಂದಿರಬಹುದು.

ಅದನ್ನು ನೋಡಿದ ಊರಿನ ನಿವಾಸಿಗಳಿಗೆ ಗಾಬರಿ ಮತ್ತು ಆತಂಕವಾಗಿದೆ ಮತ್ತು ಓಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅಸಲಿಗೆ ಜನರನ್ನು ಕಂಡು ಮತ್ತು ಅವರು ಮಾಡುತ್ತಿದ್ದ ಗಲಾಟೆ ಕೇಳಿ ಇದೆಲ್ಲಿ ಬಂದೆನಪ್ಪೋ ಅಂತ ಆನೆಗೂ ಗಾಬರಿಯಾಗಿದೆ.

ಜನ ಸುತ್ತಲೂ ನೆರೆದಿದ್ದರಿಂದ ಓಡಿ ಹೋಗುವುದಕ್ಕೆ ದಾರಿ ಸಿಕ್ಕಿಲ್ಲ. ಕೊನೆಗೆ ಒಂದು ಭಾಗದಲ್ಲಿ ನಿಂತಿದ್ದ ಜನ ದೂರ ಸರಿದಾಗ ಅದಕ್ಕೆ ದಾರಿ ಕಾಣಿಸಿದೆ. ಕೂಡಲೇ ಅಲ್ಲಿಂದ ಓಟ ಶುರುಮಾಡಿ ವಾಹನಗಳು ಸಂಚರಿಸುವ ಡಾಮರು ರಸ್ತೆಯನ್ನು ಅಕ್ಕಪಕ್ಕ ನೋಡದೆ ಕ್ರಾಸ್ ಮಾಡಿ ಕಾಡಿನೊಳಕ್ಕೆ ವಾಪಸ್ಸು ಹೋಗಿದೆ.

ಆನೆಗಳು ಹೀಗೆ ಬರುತ್ತಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದರೂ ಸಿಬ್ಬಂದಿ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲವಂತೆ. ಜನ ಆತಂಕದಲ್ಲೇ ದಿನಗಳೆಯುತ್ತಿದ್ದಾರೆ.

ಇದನ್ನೂ ಓದಿ:   ಅಯ್ಯಪ್ಪನ ಸನ್ನಿಧಿಯಲ್ಲಿ ಅಪ್ಪು; ನಟ ಪುನೀತ್ ಭಾವಚಿತ್ರ ಹೊತ್ತು ಶಬರಿಮಲೆ ಹತ್ತಿದ ಅಭಿಮಾನಿ- ವಿಡಿಯೋ ನೋಡಿ

TV9 Kannada


Leave a Reply

Your email address will not be published. Required fields are marked *