ಫೋಟೋ : ಕೃಷ್ಣ ದೇವಾಂಗಮಠ
ಋತುವಿಲಾಸಿನಿ | Rutuvilaasini : ಮೊನ್ನೆ ಕಾಯಿ ಕೀಳಿಸ್ತಿದ್ದೀನಿ ಅಂತೊಂದು ವಿಡಿಯೊ ಹಾಕಿದ್ದೆ ನಿನಗೆ. ನೆನಪಿದ್ಯಾ ಹನೀ? ತಿಂಗಳು ಮುಂಚೆಯೇ ಹೇಳಿದ್ರೂ ಇವತ್ತು ನಾಳೆ ಅಂತ ನೆಪ ತೆಗೀತಿದ್ದ ಕಾಯಿ ಕೀಳುವ ಹುಡುಗನಿಗೆ ಮನೆಯಲ್ಲಿ ಶುಭ ಕಾರ್ಯ ಎಂದೆ. ಕೂಡಲೇ ನಾಳೆ ಬೆಳಿಗ್ಗೇನೆ ಬರ್ತೀವಿ ಅಕ್ಕ ಅಂದ. ‘ಕಾಯಿ ಹೊರಲಿಕ್ಕೆ ನಂಗೆ ಹೇಳಬೇಡಿ ಮತ್ತೆ, ಜೊತೆಗೊಂದು ಹುಡುಗನನ್ನು ಕರಕೊಬರ್ತೀನಿ. ಏನಾದರೂ ಕೊಡಿರಂತೆ’ ಎಂದವನ ಮಾತು ಕೇಳಿ ಕೆಲಸ ಸಲೀಸಾಯ್ತು ಅಂತ ನಿರಾಳವಾಗಿದ್ದೆ ಹನೀ. ಮಾರನೆಯ ಬೆಳಿಗ್ಗೆ ನಾನಿನ್ನೂ ಹೊಸಿಲು ತೊಳೆದೇ ಇರಲಿಲ್ಲ.ಆಗಲೇ ಬೆಲ್ ಸದ್ದು. ಹೊರಬಂದರೆ ಮಾತಿಗೆ ತಪ್ಪದ ಮಗನಂತೆ ಕಾಯಿ ಕೆಡುವವ ಒಂದು ಫುಲ್ ಸ್ಮೈಲು ಕೊಟ್ಟು ಕೊನೆ ಮರದಿಂದ ಕೀಳ್ತಿನಿ ಅಂತ ಹೋಗಿ ಸರಸರನೆ ಮರ ಹತ್ತುವ ಮೆಷೀನು ಜೋಡಿಸಿದ. ಅವನು ಹೇಳಿದ್ದ ಆ ಹುಡುಗನೂ ಜೊತೆಯಲ್ಲಿದ್ದ. ಈಗಷ್ಟೇ ಮೀಸೆ ಚಿಗುರುತ್ತಿದ್ದ ಪೋರ ಅವನು. ಬಾಲಿಶತನವೂ ತುಂಟತನವೂ ತುಂಬಿಕೊಂಡು ಮುದ್ದಾಗಿದ್ದ.
ನಂದಿನಿ ಹೆದ್ದುರ್ಗ, ಕವಿ, ಲೇಖಕಿ (Nandini Heddurga)
(ಋತು 6)
ಅವಸರದಲ್ಲಿ ಹೊಸಿಲಿಗೆ ಹೂವಿಟ್ಟು ನಾನೂ ಅಲ್ಲಿಗೆ ಹೋದೆ. ಚಕಚಕ ಹತ್ತಿ ಮೈ ತುಂಬಾ ಫಲ ಹೊತ್ತು ನಿಂತಿದ್ದ ಮರದಿಂದ ಬಲಿತ ಗೊನೆಗಳನ್ನು ಕಡಿದು ಹಾಕುವುದನ್ನು ನೋಡುವುದೇ ಖುಷಿ. ಇದೊಂದು ಕೆಲಸವನ್ನು ಮಾತ್ರ ಇವತ್ತಿನವರೆಗೂ ಅವರ ಪಾಡಿಗೆ ಅವರೇ ಮುಗಿಸಿ ಹೋಗಲು ಬಿಟ್ಟಿಲ್ಲ ಹನೀ ನಾನು.
ಬಲಿತ ಕಾಯಿ ಹಾಗೇ ಉಳಿಸ್ತಾರೆ ಅಂತಲೋ, ಒಣಸೋಗೆಗಳನ್ನು ಕಿತ್ತು ಮರ ಹಗೂರ ಮಾಡುವಲ್ಲಿ ಸೋಮಾರಿತನ ಮಾಡ್ತಾರೆ ಅಂತಲೋ, ಮರ ಹತ್ತುವ ತ್ರಾಸಿನ ಕೆಲಸದಲ್ಲಿ ಯಾವುದಕ್ಕೂ ಮತ್ತೊಂದು ಜೀವ ಜೊತೆಗಿರಬೇಕು ಎನ್ನುವುದೋ ನಾನು ಅಲ್ಲೇ ಉಳಿಯಲು ಇರುವ ಕಾರಣ.
ಅವನು ಒಂದು ಮರದಿಂದ ಮತ್ತೊಂದಕ್ಕೆ ಹತ್ತಿ ಕಾಯಿ ಉದುರಿಸುತ್ತಲೇ ಇದ್ದ. ಅದೋ.. ಅಲ್ಲಿ ನಿಂತಿದ್ದ ಆ ಹುಡುಗ ‘ಆಂಟಿ.. ರಾಶಿ ಹಾಕ್ತಿನಿ ಇನ್ನೂ’ ಅಂತಂದು ನನ್ನ ಒಪ್ಪಿಗೆಗೆ ಕಾಯ್ದ. ಒಂದು ಸಾಲಿನ ಮರ ಮುಗಿಯುವವರೆಗೂ ಅಲ್ಲಿ ಕಾಯಿ ಆರಿಸುವುದಕ್ಕೆ ಕಳಿಸುವುದಿಲ್ಲ ನಾನು. ವೃಥಾ ಅಪಾಯದ ಬಾಬ್ತು ಅದು. ಈ ಕಡೆ ಮರದಲ್ಲಿ ಕೆಡವುವಾಗ ಆ ತುದಿಯ ಮರದಲ್ಲಿ ರಾಶಿ ಹಾಕುತ್ತಿದ್ದ ಹುಡುಗನ ಚುರುಕುತನದ ಚಂದಕ್ಕೆ ಸೋತು ಅಲ್ಲೇ ಈ ಬದಿಯ ನೆರಳಲ್ಲಿ ಕೂರುವ ಅಂತ ಹೆಜ್ಜೆ ತೆಗೆಯುವ ಮುನ್ನ ಬುಡದಲ್ಲೇ ಬಿದ್ದಿದ್ದ ಕಾಯಿ ನೋಡಿ ರಾಶಿಯೆಡೆಗೆ ಎಸೆಯಲು ಬಗ್ಗಿ ಕೈ ಮುಂದೆ ಮಾಡಿದೆ.
ಮಿರಿಮಿರಿ ಮಿಂಚುವ ಗೋದಿಬಣ್ಣದ ಎರಡು ಮಟ್ಟಸ ಗಾತ್ರದ ಸರ್ಪಗಳು ನಾನು ಕೈ ಇಟ್ಟಲ್ಲಿಂದ ಸರಕ್ಕನೆ ಪರಸ್ಪರ ವಿರುದ್ದ ದಿಕ್ಕಿನಲ್ಲಿ ಹರಿದವು! ಕಿರುಬೆರಳಿನಿಂದ ನಡುನೆತ್ತಿಯ ತನಕ ತಣ್ಣನೆಯ ಅಲೆ ಹಾದು ಅಕಸ್ಮಾತ್ ನನ್ನ ಹೆಜ್ಜೆಯನ್ನು ಆ ಜೀವದ ಮೇಲೇ ಇಟ್ಟಿದ್ದರೇ ಎನ್ನುವ ಯೋಚನೆ ಬಂದು ನಾಲಿಗೆ ಒಣಗಿ, ತುಟಿ ಬಿಳುಚಿಕೊಂಡು…
ಹನೀ
ಸಾವಿನ ಕುರಿತು ಎಂದೂ ಭಯಬೀಳದವಳು ನಾನು. ಹೆಜ್ಜೆಯ ಬುಡದಲ್ಲೇ ಘಟಿಸಿದ ಈ ಅಸಂಗತಕ್ಕೆ ಧಿಂಗ್ಮೂಡಳಾಗಿ ಕಳಚಿಬೀಳುತ್ತಿದ್ದ ಹೃದಯವನ್ನು ಮೆಲ್ಲಗೆ ಒತ್ತಿಹಿಡಿದು ಕೊನೆಯ ಕಿರುಬಾಲವಷ್ಟೇ ಕಾಣುತ್ತಿದ್ದ ಸರ್ಪಗಳನ್ನೂ, ಅವು ಹೊಕ್ಕ ಬಿಲವನ್ನೂ ನಡುಗುತ್ತ ನೋಡಿದೆ. ಒಂದು ಕ್ಷಣ ನೀವು ನನ್ನೊಳಗಿಂದ ಹೊರಗಿದ್ದಿರಿ. ಸಾವು ಆವರಿಸುವ ಹೊತ್ತಿನಲ್ಲಿ ನೀನು ಹೊರಗಿರಬೇಕು ಅಂತ ಬಯಸುವವಳು ನಾನು.
ಮತ್ತೊಂದು ವಿಚಿತ್ರ ಗೊತ್ತಾ ಹನೀ?
ನಾನು ಕಾಯಿ ಆರಿಸಲು ಬಗ್ಗಿದ್ದು ನೋಡಿ ಅದೋ ಅಲ್ಲಿದ್ದ ಆ ಹುಡುಗ ‘ಆಂಟಿ. ಬಂದೆ ಇರಿ’ ಎಂದಾಗ ‘ಇಲ್ಲೆರಡು ವಿಷಸರ್ಪಗಳು ಈಗಷ್ಟೇ ಸರಿದು ಹೋಗಿವೆ ಮಗೂ, ಅಲ್ಲಿ ಕಾಯಿ ಆಯುವುದು ಬೇಡ, ಬಿದ್ದಿರಲಿ ಬಿಡು’ ಅಂತನ್ನಬೇಕಿದ್ದ ನನ್ನ ಕೊರಳಿಂದ ಸ್ವರ ಹೊರಬರಲೇ ಇಲ್ಲ. ಜೀವದ ಮೂಲದ ಗುಣ ಸ್ವಾರ್ಥ ಹನೀ. ಎದ್ದು ಬರುತ್ತದೆ ಅಪಾಯದ ಸದ್ದು ಕೇಳಿದೊಡನೇ.
‘ನೀನು ಜೀವದಾಯಿನಿ ಪುಟ್ಟಾ, ಅದಮ್ಯ ಮೋಹ, ಅಸದೃಶ್ಯ ಮಮತೆ, ಉಕ್ಕುವ ಪ್ರೇಮಗಳಿಂದ ತುಂಬಿಕೊಂಡವಳು ನೀನು. ನಿನ್ನ ಸನಿಹಕ್ಕೆ ಬಂದ ಎಲ್ಲವೂ ನಿನ್ನ ಪ್ರೇಮದ ಪ್ರಭಾವಳಿಯೊಳಕ್ಕೆ ಸಿಲುಕಿ ಬಿಡುತ್ತವೆ. ನಿನ್ನಂತೆ ಸುತ್ತಿನ ಮರ ಮಣ್ಣು ಹಾವು ಹಕ್ಕಿಯನ್ನು ಪ್ರೀತಿಸಿದವಳನ್ನು ನಾನು ಈ ತನಕ ನೋಡಿಲ್ಲ’ ಅಂದಿರಲ್ಲವೇ ಮೊನ್ನೆ?
ನೋಡಿ ಈಗ!
ಎಳೆಚುಕ್ಕಿಯಂತ ಆ ಪೋರನನ್ನು ತಡೆಯಬೇಕು ಅಂತ ಅನಿಸಲಿಲ್ಲ ಯಾಕೆ ನನಗೆ? ಹುಡುಗ ಜಿಂಕೆಯಂತೆ ಹಾರಿ ಬಂದು ‘ಸರೀರಿ ಆಂಟಿ ಆ ಕಡೆಗೆ. ರಾಶಿ ಮಾಡ್ತೀನಿ’ ಅಂದವನ ಹೆಜ್ಜೆಗಳು ಕೇವಲ ಒಂದು ಮಾರು ದೂರದಲ್ಲಿದ್ದವು ಆ ಹಾವು ಹೊಕ್ಕ ಬಿಲಕ್ಕೆ. ಬಿಲದ ಸುತ್ತೂ ಸುರಿದ ಕಾಯಿತಳಲು.