ಹುಬ್ಬಳ್ಳಿ: ಮತದಾನದ ಪ್ರಮಾಣ ಕಡಿಮೆಯಾಗಿದ್ದು ಮತ್ತು ಎಂಇಎಸ್ ಸ್ಪರ್ಧೆಯಿಂದ ಮತಗಳು ವಿಭಜನೆಯಾಗಿದ್ದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮೇಲೆ ಪರಿಣಾಮ ಬೀರಿವೆ. ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಮಂಗಳಾ ಅಂಗಡಿ ಗೆಲುವಿನ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪರಂಪರಾಗತ ಮರಾಠರ ಮತಗಳನ್ನು ಎಂಇಎಸ್ ವಿಭಜಿಸಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸುತ್ತೇವೆ. ರೋಚಕ ಹಣಾಹಣಿ ನಡುವೆಯೂ ಬೆಳಗಾವಿಯ ಜನ ನಮ್ಮನ್ನು ಕೈ ಹಿಡಿದಿದ್ದಾರೆ. ಇದು ಕ್ಷೇತ್ರದ ಜನ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ನನ್ನ ಅಂದಾಜಿನ ಪ್ರಕಾರ ನಮ್ಮ ಅಭ್ಯರ್ಥಿ 50 ರಿಂದ 60 ಸಾವಿರ ಮತಗಳ ಅಂತರದಿಂದ ಗೆಲ್ಲಬೇಕಿತ್ತು ಎಂದರು.

ಈಗಿನ ಹಾಗೂ ಮುಂದಿನ ಯಾವ ಉಪ ಚುನಾವಣೆಗಳು ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಲ್ಲ. ಈಗಿನ ಫಲಿತಾಂಶಗಳು ಮುಂದೆ ಯಾವ ಪರಿಣಾಮ ಬೀರುವುದೂ ಇಲ್ಲ. ಈಗಿನ ಫಲಿತಾಂಶದ ಬಗ್ಗೆ ಪಕ್ಷದ ವೇದಿಕೆಯಲ್ಲಿ ವಿಶ್ಲೇಷಣೆ ನಡೆಸುತ್ತೇವೆ ಎಂದು ಹೇಳಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಏನು ಬೇಕೊ ಅದನ್ನು ಮಂಗಳಾ ಅಂಗಡಿ ಮಾಡುತ್ತಾರೆ. ಕೇಂದ್ರ ಸಚಿವನಾಗಿ ಏನು ನೆರವು ನೀಡಬೇಕು ಅದೆಲ್ಲವನ್ನೂ ನೀಡುವೆ ಎಂದು ಪ್ರತಿಕ್ರಿಯಿಸಿದರು.

ಬೆಳಗಾವಿ ಉಪಚುನಾವಣೆಯಲ್ಲಿ ಮಂಗಳಾ ಅಂಗಡಿ 3,986 ಮತಗಳ ಅಂತರದಿಂದ ಸತೀಶ್ ಜಾರಕಿಹೊಳಿ ವಿರುದ್ಧ ಗೆದ್ದಿದ್ದಾರೆ. ಮಂಗಳಾ ಅಂಗಡಿಗೆ 4,36,868 ಮತಗಳು ಬಿದ್ದರೆ ಸತೀಶ್ ಜಾರಕಿಹೊಳಿಗೆ 4,32,882 ಮತಗಳು ಬಿದ್ದಿದೆ. ಎಂಇಎಸ್‍ನ ಶುಭಂ ವಿಕ್ರಂ ಅವರಿಗೆ 1,16,923 ಮತಗಳು ಬಿದ್ದಿದೆ. ನೋಟಾ ಪರವಾಗಿ 10,563 ಮತಳು ಚಲಾವಣೆ ಆಗಿದೆ.

The post ಎಂಇಎಸ್ ಸ್ಪರ್ಧೆಯಿಂದ ಬಿಜೆಪಿ ಅಂತರ ಕುಸಿತ: ಜೋಶಿ appeared first on Public TV.

Source: publictv.in

Source link