ಎಂಎಲ್​ಸಿ ಟಿಕೆಟ್ ಹಂಚಿಕೆ ವೇಳೆ ಸ್ವಜನಪಕ್ಷಪಾತ -ಕಾಂಗ್ರೆಸ್​​​ ನಾಯಕರ ವಿರುದ್ಧ ಕಾರ್ಯಕರ್ತರ ಕಿಡಿ


ಬೆಂಗಳೂರು: ಪರಿಷತ್‌ ಫೈಟ್‌ನಲ್ಲಿ ಮೂರು ಪಕ್ಷಗಳು ಗೆಲುವಿನ ಲೆಕ್ಕಾಚಾರದಲ್ಲಿ ಭಾರೀ ಜಿದ್ದಿಗೆ ಇಳಿದಿವೆ. ಈಗಾಗಲೇ ಅಭ್ಯರ್ಥಿಗಳನ್ನೂ ಕಣಕ್ಕಿಳಿಸಿವೆ. ಆದ್ರೀಗ ಕಾಂಗ್ರೆಸ್‌ನಲ್ಲಿ ಕ್ಯಾಂಡಿಡೇಟ್‌ಗಳ ವಿಚಾರವೇ ಚರ್ಚೆಗೆ ಗ್ರಾಸವಾಗಿದೆ. ಟಿಕೆಟ್ ಹಂಚಿಕೆ ವೇಳೆ ಕುಟುಂಬ ರಾಜಕೀಯ ಮಾಡಿದ್ದಾರೆ ಅಂತಾ ಕೈನಲ್ಲಿ ಕಿಡಿ ಹೊತ್ತಿದೆ.

ಕಾಂಗ್ರೆಸ್​​​ ನಾಯಕರ ವಿರುದ್ಧ ಕಾರ್ಯಕರ್ತರ ಕಿಡಿ
ಡಿಸೆಂಬರ್ 10ಕ್ಕೆ ನಡೆಯಲಿರೋ ವಿಧಾನಪರಿಷತ್ ಮಿನಿಫೈಟ್‌ಗೆ ತ್ರಿಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳಲು ನಾಯಕರು ಅಖಾಡಕ್ಕೆ ಇಳಿದಿದ್ದಾರೆ. ಆದ್ರೀಗ ಇದೇ ವೇಳೆ ಕಾಂಗ್ರೆಸ್‌ನಲ್ಲಿ ಪರಿಷತ್‌ ಚುನಾವಣೆ ವಿಚಾರಕ್ಕೆ ಕಿಡಿಯೊಂದು ಹೊತ್ತಿದೆ. ಎಂಎಲ್​ಸಿ ಟಿಕೆಟ್ ಹಂಚಿಕೆ ವೇಳೆ ಸ್ವಜನಪಕ್ಷಪಾತ ಮಾಡಲಾಗಿದೆ ಅಂತಾ ಕೈ ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧ ಕಿಡಿ ಕಾರ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಕಾಂಗ್ರೆಸ್​​​ ಹೈಕಮಾಂಡ್​​ಗೆ ಟ್ಯಾಗ್​​ ಮಾಡಿ ಕುಟುಂಬ ರಾಜಕಾರಣದ ವಿರುದ್ಧ ಆಕ್ರೋಶ ಹೊರ ಹಾಕ್ತಿದ್ದಾರೆ. ಇದರ ಮಧ್ಯೆ ಕೈಪಡೆಯ ಕುಟುಂಬ ರಾಜಕಾರಣ ವಿರುದ್ಧ ಬಿಜೆಪಿ ನಾಯಕರೂ ಕೂಡಾ ಟೀಕೆ ಮಾಡ್ತಿದ್ದಾರೆ.

ಪರಿಷತ್ ಟಿಕೆಟ್ ಹಂಚಿಕೆ ವೇಳೆ ಕಾಂಗ್ರೆಸ್‌ ಪ್ರಭಾವಿ ನಾಯಕರ ಕುಟುಂಬದವರಿಗೆ ಟಿಕೆಟ್ ನೀಡಿದ್ದಾರೆ ಅನ್ನೋದು ಕಾರ್ಯಕರ್ತರ ಅಸಮಾಧಾನ. ಹಾಗಾದ್ರೆ, ಯಾರೆಲ್ಲಾ ನಾಯಕರ ಕುಟುಂಬದವರಿಗೆ ಟಿಕೆಟ್ ನೀಡಲಾಗಿದೆ ಅಂತಾ ನೋಡೋದಾದ್ರೆ,

ಕಾಂಗ್ರೆಸ್​​ನಲ್ಲಿ ಕುಟುಂಬ ರಾಜಕಾರಣ!

  • ಎಸ್. ರವಿ -ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೋದರ ಸಂಬಂಧಿ
  • ಚನ್ನರಾಜ್ ಹಟ್ಟಿಹೊಳಿ -ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ
  • ಭೀಮರಾವ್ ಪಾಟೀಲ್ -ಶಾಸಕ ರಾಜಶೇಖರ್ ಹುಮನಾಬಾದ್ ಸಹೋದರ
  • ಸುನೀಲ್ ಗೌಡ ಪಾಟೀಲ್ -ಮಾಜಿ ಸಚಿವ ಎಂ.ಬಿ. ಪಾಟೀಲ್ ಸಹೋದರ

ಈ ಎಲ್ಲಾ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿರೋದು ಕಾರ್ಯಕರ್ತರ ಅಸಮಾಧಾನ ಸ್ಫೋಟಗೊಳ್ಳೋಕೆ ಕಾರಣವಾಗಿದೆ. ಹೀಗಾಗಿ ನೇರವಾಗಿ ತಮ್ಮ ಪಕ್ಷದ ನಾಯಕರ ವಿರುದ್ಧವೇ ಕಿಡಿ ಕಾರ್ತಿದ್ದಾರೆ. ಈ ಅಸಮಾಧಾನದ ಬೆಂಕಿ ಕೈ ಹೈಕಮಾಂಡ್‌ವರೆಗೂ ತಲುಪಿದೆ.

ಪಕ್ಷದ ವಿರುದ್ಧ ಅಸಮಾಧಾನ ಸ್ಫೋಟ
ಕುಟುಂಬಸ್ಥರಿಗೆ ವಿಧಾನ ಪರಿಷತ್​​​​ ಟಿಕೆಟ್ ಕೊಟ್ಟಿದ್ದಕ್ಕೆ ಪಕ್ಷದ ನಾಯಕರ ವಿರುದ್ಧ ಕೈಪಡೆ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಬಹಿರಂಗವಾಗಿಯೇ ಪ್ರಭಾಕರ ರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ, NSUI ಮಾಜಿ ಅಧ್ಯಕ್ಷರಾಗಿರೋ ಪ್ರಭಾಕರ ರೆಡ್ಡಿ ಪಕ್ಷದ ವರಿಷ್ಠರು, ರಾಜ್ಯ ನಾಯಕರಿಗೆ ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್ ಕುಟುಂಬ ರಾಜಕೀಯ ಪಕ್ಷದ ಪಡಸಾಲೆಯಲ್ಲೇ ಚರ್ಚೆಗೆ ಗ್ರಾಸವಾಗಿದೆ.

ಒಟ್ಟಾರೆ, ಇಷ್ಟು ದಿನ ಜೆಡಿಎಸ್‌ ವಿರುದ್ಧ ಕುಟುಂಬ ರಾಜಕೀಯದ ಆರೋಪ ಆಗಾಗ ಕೇಳಿ ಬರ್ತಿತ್ತು. ಇದೀಗ ಕಾಂಗ್ರೆಸ್‌ನಲ್ಲಿ ಸ್ವಜನಪಕ್ಷಪಾತದ ಕಿಡಿ ಹೊತ್ತಿಕೊಂಡಿದೆ. ಇದು ಕಾಂಗ್ರೆಸ್ ಪರಿಷತ್‌ ಚುನಾವಣಾ ಫಲಿತಾಂಶಕ್ಕೆ ಹೊಡೆತ ಕೊಡುತ್ತಾ? ಲೆಟ್ಸ್‌ ವೇಯ್ಟ್‌ ಅಂಡ್ ವಾಚ್.

ವಿಶೇಷ ಬರಹ: ವೀರೇಂದ್ರ ಉಪ್ಪುಂದ, ನ್ಯೂಸ್‌ಫಸ್ಟ್, ಬೆಂಗಳೂರು.

News First Live Kannada


Leave a Reply

Your email address will not be published. Required fields are marked *