ಬೆಂಗಳೂರು: ಕಾನುನು ಉಲ್ಲಂಘಿಸಿ ಟೆಂಡರ್ ಪಡೆದುಕೊಂಡಿರುವ ಆರೋಪವಿರುವ ಎಂಎಸ್‍ವಿ ಕನ್‍ಸ್ಟ್ರಕ್ಷನ್ ಕಂಪನಿ ವಿರುದ್ಧ ಸದ್ಯದಲ್ಲೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ತಿಳಿಸಿದ್ದಾರೆ.

ನಿನ್ನೆ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ರಮೇಶ್ ಎನ್ ಆರ್ ಅವರು ಈ ಬಗ್ಗೆ ವಿಸ್ತೃತವಾಗಿ ಬಿಬಿಎಂಪಿ ಆಯುಕ್ತರಿಗೆ ದೂರನ್ನ ಸಲ್ಲಿಸಿದ್ದರು. ಈ ದೂರಿನಲ್ಲಿ ಹಲವಾರು ವರ್ಷಗಳಿಂದಲೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೂರಾರು ಕೋಟಿ ರೂಪಾಯಿಗಳ ಮೊತ್ತದ ಕಾಮಗಾರಿಗಳ ಗುತ್ತಿಗೆದಾರರಾಗಿ ಅವಕಾಶ ಪಡೆದಿರುವ ವೆಂಕಟೇಶ್ (MSV Construction Company) ಎಂಬ ಗುತ್ತಿಗೆದಾರರು ತಮ್ಮ ಲೆಕ್ಕ ಪರಿಶೋಧಕರ ಮೂಲಕ ಸತ್ಯಕ್ಕೆ ದೂರವಾದ ಮಾಹಿತಿಗಳನ್ನು / ದಾಖಲೆಗಳನ್ನು ನೀಡಿ ನೂರಾರು ಕಾಮಗಾರಿಗಳ ಗುತ್ತಿಗೆಯನ್ನು ಪಡೆದಿದ್ದಾರೆ. ಪ್ರಸ್ತುತ ಇವರು-ಅವರೇ ಪ್ರಮಾಣೀಕರಿಸಿರುವ ದಾಖಲೆಗಳಂತೆ ಪಾಲಿಕೆ ವ್ಯಾಪ್ತಿಯಲ್ಲಿ ಅವರ ಒಟ್ಟು Bid Capacity ಮೊತ್ತ ಕೆ. 108.88 (ಒಂದು ನೂರಾ ಎಂಟು ಕೋಟಿ ಎಂಬತ್ತೆಂಟು ಲಕ್ಷ) ಕೋಟಿಗಳಾಗಿರುತ್ತದೆ. ಆದರೆ, ಅವರು ನಕಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಸುಮಾರು 380 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸಿರುವ ಅಂಶ ಬೆಳಕಿಗೆ ಬಂದಿರುತ್ತದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಆರ್.ಅಂಬಿಕಾಪತಿ, ಸಾಮಾಜಿಕ ಹೋರಾಟಗಾರ ನರಸಿಂಹ ಮೂರ್ತಿ ಹಾಗೂ ವಕೀಲರುಗಳಾದ ಹೆಚ್.ಎನ್.ರವಿಶಂಕರ್, ಎಂ. ಮುರಳಿಧರ್ ಮತ್ತು ತೇಜರಾಜ್ ಅವರುಗಳು ಈ ಸಂಬಂಧ ಎಂ.ಎಸ್.ವೆಂಕಟೇಶ್ ಅಲಿಯಾಸ್ ಗಿಲಿ ಗಿಲಿ ವೆಂಕಟೇಶ್ ಎಂಬ ಗುತ್ತಿಗೆದಾರರ ವಿರುದ್ಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ನಗರಾಭಿವೃದ್ಧಿಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಬಿಬಿಎಂಪಿಯ ಆಯುಕ್ತರಿಗೆ ಹಲವಾರು ದೂರುಗಳನ್ನು ನೀಡಿದ್ದಾರೆ.

ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳ ಮತ್ತು ಪಾಲಿಕೆಯ ಆಯುಕ್ತರ ಆದೇಶದಂತೆ ಪಾಲಿಕೆಯ ಟಿವಿಸಿಸಿ ಇಲಾಖೆಯ ಅಧಿಕಾರಿಗಳು ವೆಂಕಟೇಶ್ ಅವರಿಗೆ ಸಂಬಂಧಿಸಿದಂತೆ ಸಮಗ್ರವಾದ ವರದಿಯನ್ನು ಪಾಲಿಕೆಯ ಮುಖ್ಯ ಆಯುಕ್ತರಿಗೆ ಸಲ್ಲಿಸಿರುತ್ತಾರೆಂಬ ವಿಷಯ ತಿಳಿದು ಬಂದಿರುತ್ತದೆ.

ಕಳೆದ ಒಂದೂವರೆ ವರ್ಷದ ಹಿಂದಷ್ಟೇ, ಪಾಲಿಕೆ ವ್ಯಾಪ್ತಿಯ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆಂದು ಪ್ರಾರಂಭಿಸಲಾಗಿರುವ Hot Batch Mix Plant ನ ಗುತ್ತಿಗೆಯನ್ನು ಪಡೆದುಕೊಂಡಿದ್ದ ಇದೇ ವೆಂಕಟೇಶ್ ಅವರು ಗುತ್ತಿಗೆ ಕಾರ್ಯವನ್ನು ಸರಿಯಾಗಿ ನಿರ್ವಹಣೆ ಮಾಡದಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ನೀಡಿದ್ದ ಆದೇಶದಂತೆ ಅವರ ಗುತ್ತಿಗೆಯನ್ನು ರದ್ದು ಪಡಿಸಿರುವುದು ಸರಿಯಷ್ಟೇ. ಆದರೆ, ಗುತ್ತಿಗೆ ಕರಾರುಪತ್ರದ ಷರತ್ತುಗಳನ್ನು ಪಾಲಿಸದ ಉಲ್ಲಂಘಿರುವ ವೆಂಕಟೇಶ್ ಅವರನ್ನು ನಿಯಮಗಳಿಗೆ ಅನುಸಾರವಾಗಿ ಕಪ್ಪುಪಟ್ಟಿಗೆ ಸೇರಿಸಬೇಕಿರುತ್ತದೆ ಎಂದು ಆಗ್ರಹಿಸಿದ್ದರು.

ಈ ಎಲ್ಲಾ ಕಾರಣಗಳಿಂದಾಗಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಿತ ದೃಷ್ಟಿಯಿಂದ ವೆಂಕಟೇಶ್ (MSV Construction Company) ಎಂಬ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸುವುದು ಅತ್ಯಂತ ಸೂಕ್ತವಾಗಿರುತ್ತದೆ ಎಂಬ ವಾಸ್ತವವನ್ನು ತಿಳಿಸುತ್ತಾ, ಎಂತಹುದೇ ರಾಜಕೀಯ ಪ್ರಭಾವಗಳಿಗೆ ಒಳಗಾಗದೇ ವೆಂಕಟೇಶ್ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದರು.

ಈ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸದ್ಯದಲ್ಲೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.

The post ಎಂಎಸ್‍ವಿ ಕನ್‍ಸ್ಟ್ರಕ್ಷನ್ ಕಂಪನಿ ವಿರುದ್ಧ ಕಾನೂನು ಕ್ರಮ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ appeared first on Public TV.

Source: publictv.in

Source link