ಎಂಜಿನಲ್ಲಿ ಉಂಟಾದ ತಾಂತ್ರಿಕ ದೋಷ ಬಿಕಾನೆರ್-ಗುವಹಾಟಿ ಎಕ್ಸ್​ಪ್ರೆಸ್​​ ಟ್ರೇನ್ ಹಳಿ ತಪ್ಪಿದ್ದಕ್ಕೆ ಕಾರಣ: ಪ್ರಾಥಮಿಕ ವರದಿ | Technical snag in Bikaner Guwahati Express caused accident says preliminary report


ಗುರುವಾರ ರಾತ್ರಿ ಉತ್ತರ ಪಶ್ಚಿಮ ಬಂಗಾಳದ ದೊಮೊಹನಿ ಬಳಿ ಬಿಕಾನೆರ್-ಗುವಹಾಟಿ ಎಕ್ಸ್​ಪ್ರೆಸ್ ಟ್ರೇನಿನ (Bikaner-Guwahati Express) 12 ಬೋಗಿಗಳು ಹಳಿತಪ್ಪಿ ಸಂಭವಿಸಿದ ಅಪಘಾತಕ್ಕೆ ಎಂಜಿನಲ್ಲಿ ಉಂಟಾದ ತಾಂತ್ರಿಕ ದೋಷ ಕಾರಣ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 9 ಜನರು ದುರ್ಮರಣ ಮತ್ತು ಸುಮಾರು 50 ಜನ ಗಾಯಗೊಂಡ ಈ ಅಪಘಾತದಲ್ಲಿ ಬೋಗಿಗಳು ಹಳಿ ತಪ್ಪುವುದರ (derailment) ಜೊತೆಗೆ ಅವುಗಳ ಪೈಕಿ ಎರಡು ಒಂದರ ಮೇಲೆ ಮತ್ತೊಂದ ಹತ್ತಿದ್ದವು. ರೇಲ್ವೆ ತಜ್ಞರು ನೀಡಿರುವ ಪ್ರಾಥಮಿಕ ವರದಿ ಪ್ರಕಾರ 15633 ಬಿಕಾನೆರ್-ಗುವಹಾಟಿ ರೈಲಿನ ಡಬ್ಲ್ಯೂಎಪಿ-4 ಎಂಜಿನ್ನಿನ (WAP-4 Engine) ನಾಲ್ಕು ಟ್ರ್ಯಾಕ್ಷನ್ ಮೋಟಾರುಗಳಲ್ಲಿ ಒಂದು ವಿಫಲಗೊಂಡ ಕಾರಣ ಲೊಕೊ ಪೈಲಟ್​ಗಳು ತುರ್ತು ಬ್ರೇಕ್​ಗಳನ್ನು ಅದುಮಬೇಕಾಯಿತು. 

ಅದರ ಪರಿಣಾಮವಾಗೇ ವೇಗವಾಗಿ ಚಲಿಸುತ್ತಿದ್ದ ರೈಲಿನ 12 ಬೋಗಿಗಳು ಹಳಿ ತಪ್ಪಿದವು ಮತ್ತು 2 ಬೋಗಿಗಳು ಒಂದರ ಮೇಲೆ ಮತ್ತೊಂದು ಹತ್ತಿದವು. ರೇಲ್ವೇ ಸುರಕ್ಷತೆ ಕಮೀಶನರ್ ಅವರು ರೈಲು ದುರಂತದ ಬಗ್ಗೆ ಒಂದು ಸಮಗ್ರ ವರದಿಯನ್ನು ಸಲ್ಲಿಸುವಂತೆ ತಜ್ಞರ ತಂಡಕ್ಕೆ ಆದೇಶ ನೀಡಿದ್ದು ಸದರಿ ತಂಡವು ಶೀಘ್ರದಲ್ಲೇ ವರದಿ ಸಲ್ಲಿಸಲಿದೆ ಎಂದು ಹೇಳಲಾಗಿದೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಗಾಯಗೊಂಡಿರುವವರ ಪೈಕಿ 10 ಜನರ ಸ್ಥಿತಿ ಬಹಳ ಚಿಂತಾಜನಕವಾಗಿದೆ. ಗಾಯಾಳುಗಳನ್ನು ದೊಮೊಹನಿ ಮತ್ತು ಅದರ ಸುತ್ತಮುತ್ತಲಿನ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಬಲಿಯಾದ 9 ಜನರ ಕುಟುಂಬಗಳಿಗೆ ಭಾರತೀಯ ರೇಲ್ವೇಸ್ ತಲಾ ರೂ. 5ಲಕ್ಷಗಳ ಪರಿಹಾರ ಧನವನ್ನು ನೀಡಿದೆ. ತೀವ್ರವಾಗಿ ಗಾಯಗೊಂಡವರಿಗೆ ತಲಾ 1 ಲಕ್ಷ ರೂ. ಮತ್ತು ಸಣ್ಣಪುಟ್ಟ ಗಾಯ ಅನುಭವಿಸಿದವರಿಗೆ ರೂ. 25,000 ನೆರವನ್ನು ಇಲಾಖೆ ನೀಡಿದೆ.

TV9 Kannada


Leave a Reply

Your email address will not be published. Required fields are marked *