ಎಂಜಿನ್ ಮುಚ್ಚಳ ರನ್​ವೇನಲ್ಲಿ ಕಳಚಿಬಿದ್ದರೂ ಅಲಯನ್ಸ್ ಸಂಸ್ಥೆಯ ವಿಮಾನ ಮುಂಬೈಯಿಂದ ಭುಜ್​ಗೆ ಸುರಕ್ಷಿತವಾಗಿ ಹಾರಿತು! | Despite key part coming off during takeoff at Mumbai airport runway Alliance Airlines flight lands safely in Bhuj ARB


ಎಂಜಿನ್ ಮುಚ್ಚಳ ರನ್​ವೇನಲ್ಲಿ ಕಳಚಿಬಿದ್ದರೂ ಅಲಯನ್ಸ್ ಸಂಸ್ಥೆಯ ವಿಮಾನ ಮುಂಬೈಯಿಂದ ಭುಜ್​ಗೆ ಸುರಕ್ಷಿತವಾಗಿ ಹಾರಿತು!

ಎಂಜಿನ್​ ಹೊದಿಕೆ ಇಲ್ಲದೆ ಹಾರಿದ ವಿಮಾನ ಇದೇ

ಮುಂಬೈ: 70 ಪ್ರಯಾಣಿಕರನ್ನು ಹೊತ್ತು ಮುಂಬೈಯಿಂದ ಗುಜರಾತಿನ ಭುಜ್ಗೆ ಬುಧವಾರ ಬೆಳಗ್ಗೆ ಹಾರಿದ ಅಲಯನ್ಸ್ ಏರ್ ಲೈನ್ಸ್ (Alliance Airlines) ವಿಮಾನವೊಂದು ರನ್ ವೇಯಿಂದ ಟೇಕಾಫ್ ಆಗುವಾಗ ಎಂಜಿನ್ ಭಾಗದ ಮುಚ್ಚಳ (cowling) ಕಳಚಿಬಿದ್ದರೂ ಸುರಕ್ಷಿತವಾಗಿ ಹಾರಿ ಭುಜ್ ತಲುಪಿದೆ. ಅಲಯನ್ಸ್ ಏರ್ ಎಟಿಆರ್ 72-600 ವಿಮಾನ ಭುಜ್‌ನಲ್ಲಿ ಸುರಕ್ಷಿತವಾಗಿ ಇಳಿದಿದೆಯಾದರೂ ನಾಗರಿಕ ವಿಮಾನಯಾನದ (civil aviation) ಕಾವಲುಗಾರ ಎನಿಸಿಕೊಂಡಿರುವ ಡೈರೆಕ್ಟೋರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) (DGCA) ಇಂಥ ಅಚಾತುರ್ಯ ಹೇಗೆ ಸಂಭವಿಸಿತು ಅಂತ ತನಿಖೆ ನಡೆಸುತ್ತಿದೆ. ವಿಮಾನ ಟೇಕಾಫ್ ಆಗುತ್ತಿದ್ದಂತೆ ಇಂಜಿನ್‌ನ ಕವರ್ ಅಥವಾ ಕೌಲಿಂಗ್ ಎಂದು ಕರೆಸಿಕೊಳ್ಳುವ ಭಾಗ ವಿಮಾನದಿಂದ ಕಳಚಿಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲ್ ಎಚ್ಚರಿಕೆಯನ್ನು ನೀಡಿತ್ತು ಮತ್ತು ಕಳಚಿದ ಭಾಗ ಮುಬೈ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಪತ್ತೆಯಾಗಿದೆ.

ಪಿಟಿಐ ಜೊತೆ ಮಾತಾಡಿರುವ ಅಧಿಕಾರಿಯೊಬ್ಬರು ಕೌಲಿಂಗ್ ಕಳಚಿಬಿದ್ದಿದ್ದು ವಿಮಾನ ಹಾರಿಸುತ್ತಿದ್ದ ಪೈಲಟ್ ಗಳ ಗಮನಕ್ಕೆ ಬಂದಿಲ್ಲ ಮತ್ತು ಭುಜ್ ನಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್​ಗೆ ಎಲ್ಲ ಸರಿಯಾಗಿದೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದರು ಅಂತ ತಿಳಿಸಿದ್ದಾರೆ.

‘ರನ್‌ವೇಯಲ್ಲಿ ವಸ್ತುವೊಂದು ಕಂಡ ನಂತರ, ಮುಂಬೈ ಎಟಿಸಿ ಭುಜ್‌ಗೆ ಹೋಗುವ ವಿಮಾನದ ಪೈಲಟ್‌ಗಳನ್ನು ಸಂಪರ್ಕಿಸಿ ವಿಮಾನದಿಂದ ಏನಾದರೂ ಬಿದ್ದಿದೆಯೇ ಎಂದು ಕೇಳಿದ್ದಾರೆ. ಪೈಲಟ್‌ಗಳು ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾರೆ. ಅದಾದ ಮೇಲೆ ವಿಮಾನ ಯಾವುದೇ ತೊಂದರೆಯಿಲ್ಲದೆ ಭುಜ್‌ನಲ್ಲಿ ಇಳಿದಿದೆ. ಮುಂದಿನ ಹಾರಾಟಕ್ಕೆ ಮೊದಲು ಇದೇ ವಿಮಾನದ ರೂಟೀನ್ ಮೇಲ್ವಿಚಾರಣೆ ನಡೆದಾಗ, ನಿರ್ವಹಣಾ ಸಿಬ್ಬಂದಿಗೆ ಇಂಜಿನ್ ಕೌಲ್ ಕಾಣೆಯಾದ ಬಗ್ಗೆ ಗೊತ್ತಾಗಿದೆ,’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ನವನೀತ್ ಕುಮಾರ್ ಗುಪ್ತಾ ಹೇಳಿದರು.

‘ಇಂದು (ಬುಧವಾರ) ಬೆಳಗ್ಗೆ ಸದರಿ ವಿಮಾನದಿಂದ 66 ಪ್ರಯಾಣಿಕರು ಭುಜ್ ನಲ್ಲಿ ಬಂದಿಳಿದರು ಮತ್ತು ಕೆಲ ಗಂಟೆಗಳ ಬಳಿಕ ಈ ವಿಮಾನದ ರಿಟರ್ನ್ ಪ್ರಯಾಣದಲ್ಲಿ 61 ಪ್ರಯಾಣಿಕರು ಮುಂಬೈಗೆ ಪ್ರಯಾಣಿಸುವವರಿದ್ದರು. ಅದರೆ, ಎಂಜಿನ್ ಮುಚ್ಚಳ ಕಾಣೆಯಾಗಿರುವುದು ಪತ್ತೆಯಾದಾಗ ಏರ್ಲೈನ್ ಹಾರಾಟವನ್ನು ರದ್ದು ಮಾಡಿ, ವಿಮಾನದ ನಿರ್ವಹಣಾ ಕೆಲಸದಲ್ಲಿ ತೊಡಗಿತು,’ ಎಂದು ಗುಪ್ತಾ ಹೇಳಿದರು.

ಡಿಜಿಸಿಎ ಮೂಲಗಳ ಪ್ರಕಾರ ಎಂಜಿನ್ ಮುಚ್ಚಳ ಕಳಚಿಬಿದ್ದರೆ ವಿಮಾನ ಹಾರಾಟದ ಮೇಲೆ ಯಾವುದೇ ಪರಿಣಾಮ ಬೀರದು, ಹಾಗಾಗಿ ಅದು ಸುರಕ್ಷಿತವಾಗಿ ತನ್ನ ಗಮ್ಯವನ್ನು ತಲುಪಿದೆ. ವಿಮಾನ ಹಾರಾಟದ ಸಾಮರ್ಥ್ಯದಲ್ಲಿ ಕಡಗಣಿಸಬಹುದಾದಷ್ಟು ಕ್ಷೀಣತೆ ಕಂಡುಬರಬಹುದು ಎಂದು ಮೂಲಗಳು ತಿಳಿಸಿವೆ.

ಅಲಯನ್ಸ್ ಸಂಸ್ಥೆಯು ನಡೆದುಹೋದ ಅಚಾತುರ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದೆ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದೆ.

‘ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಒಂದು ಸಮಗ್ರ ತನಿಖೆ ನಡೆಸಲು ಆದೇಶಿಸಲಾಗಿದೆ. ಎಲ್ಲಿ ಪ್ರಮಾದ ಜರುಗಿದೆ ಅನ್ನೋದು ಪತ್ತೆಯಾದ ನಂತರ ಅದನ್ನು ನಿಯಂತ್ರಣ ಪ್ರಾಧಿಕಾರದ ಗಮನಕ್ಕೆ ತರಲಾಗುವುದು ಮತ್ತು ಅಗತ್ಯವಿರುವ ಸೂಕ್ತ ಕ್ರಮಗಳನ್ನು ಜಾರಿಮಾಡುವ ಬಗ್ಗೆ ಖಚಿತಪಡಿಸಿಕೊಳ್ಳಲಾಗುವುದು,’ ಎಂದು ಏರಲೈನ್ಸ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಳಪೆ ನಿರ್ವಹಣೆಯೇ ಘಟನೆಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಲ್ಯಾಚ್​ಗಳನ್ನು ಸರಿಯಾಗಿ ಭದ್ರಪಡಿಸಿರದಿದ್ದರೆ ಕೌಲ್​ಗಳು ಬೇರ್ಪಡುವ ಸಾಧ್ಯತೆಯಿರುತ್ತದೆ ಇದು ನಿರ್ವಹಣೆಯ ನಂತರದ ಚಟುವಟಿಕೆಗಳಲ್ಲಿ ಸಂಭವಿಸುವಂಥದ್ದು. ವಿಮಾನವನ್ನು ಪ್ರಾರಂಭಿಸುವ ಮೊದಲು ಇಂಜಿನ್ ಕೌಲ್ ಅನ್ನು ಇರಿಸಲಾಗಿದೆಯೇ ಎಂದು ಸಿಬ್ಬಂದಿ ಖಚಿತಪಡಿಸಿಕೊಳ್ಳುತ್ತಾರೆ,’ ಎಂದು ವಿಮಾನಯಾನ ತಜ್ಞ ಕ್ಯಾಪ್ಟನ್ ಅಮಿತ್ ಸಿಂಗ್ ಹೇಳಿದ್ದಾರೆಂದು ಎ ಎನ್ ಐ ಸುದ್ದಿ ಸಂಸ್ಥೆ ತಿಳಿಸಿದೆ.

TV9 Kannada


Leave a Reply

Your email address will not be published.