ಎಚ್ಚರ, ಹೆಚ್ಚುತ್ತಿದೆ ಡೆಂಗ್ಯೂ ಕಾಯಿಲೆ; ಈ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಮುನ್ನೆಚ್ಚರಿಕೆ ವಹಿಸಿ | Prevent Yourself from Dengue with these Tips LXK


ಎಚ್ಚರ, ಹೆಚ್ಚುತ್ತಿದೆ ಡೆಂಗ್ಯೂ ಕಾಯಿಲೆ; ಈ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಮುನ್ನೆಚ್ಚರಿಕೆ ವಹಿಸಿ

ಸಾಂಕೇತಿಕ ಚಿತ್ರ

ಡೆಂಗ್ಯೂ ಎಂಬುದು ಸೊಳ್ಳೆಯಿಂದ ಹರಡುವ ಒಂದು ರೋಗ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಬೀಳದೆ ಇದ್ದರೆ ಅದು ಮಾರಣಾಂತಿಕ. ಈಡಿಸ್ ಈಜಿಪ್ಟಿ ಎಂಬ ಸೊಳ್ಳೆ ಕಚ್ಚುವುದರಿಂದ ಬರುವ ಡೆಂಗ್ಯೂ ಪ್ರಾರಂಭದಲ್ಲಿ ಸಣ್ಣ ಪ್ರಮಾಣದ ಜ್ವರಕ್ಕೆ ಕಾರಣವಾಗುತ್ತದೆ. ಆದರೆ ಬರುಬರುತ್ತ ಅದರ ತೀವ್ರತೆ ಹೆಚ್ಚುತ್ತದೆ. ಡೆಂಗ್ಯೂ ಜ್ವರ ಸರಿಯಾದ ಸಮಯದಲ್ಲಿ ಪತ್ತೆಯಾಗದೆ, ಸೂಕ್ತ ಚಿಕಿತ್ಸೆ ಬೀಳದೆ ಇದ್ದರೆ ಪ್ರಾಣಕ್ಕೆ ಸಂಚಕಾರ. ಸಾಮಾನ್ಯವಾಗಿ ಉಷ್ಣವಲಯ ಮತ್ತು ಉಪ ಉಷ್ಣವಲಯದ ಪ್ರದೇಶಗಳಲ್ಲಿ ಈ ಡೆಂಗ್ಯೂ ಕಾಣಿಸಿಕೊಳ್ಳುವುದು ಹೆಚ್ಚು. ಇದೀಗ ದೆಹಲಿ ಮತ್ತು ಇತರ ಕೆಲವು ನಗರಗಳಲ್ಲಿ ಡೆಂಗ್ಯೂ ಪ್ರಮಾಣ ಹೆಚ್ಚುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ದೆಹಲಿಯಲ್ಲಿ 22 ಡೆಂಗ್ಯೂ ಕೇಸ್​ಗಳು ದಾಖಲಾಗಿದ್ದು ಈ ವರ್ಷದಿಂದ ಇಲ್ಲಿಯವರೆಗೆ ಒಟ್ಟು 61 ಪ್ರಕರಣಗಳು ಕಾಣಿಸಿಕೊಂಡಿವೆ. 

ಸೊಳ್ಳೆ ಕಚ್ಚಿದ ತಕ್ಷಣದಿಂದ ಈ ಕಾಯಿಲೆ ಶುರುವಾಗುವುದಿಲ್ಲ. ಕೆಲವು ದಿನಗಳ ಬಳಿಕ ಒಂದೊಂದೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪ್ರಾರಂಭದಲ್ಲಿ ಸಾಮಾನ್ಯ ವೈರಲ್ ಜ್ವರದಂತೆ ಇದ್ದರೂ ಕೂಡ ದೇಹದಲ್ಲಿ ಪ್ಲೇಟ್​ಲೆಟ್​  ಕಡಿಮೆ ಮಾಡುತ್ತ ಹೋಗುತ್ತದೆ. ಇಲ್ಲಿದೆ ನೋಡಿ..ಡೆಂಗ್ಯೂದ ಸಾಮಾನ್ಯ ಲಕ್ಷಣಗಳು.

1. ಅತಿಯಾದ ಜ್ವರ, ತಲೆನೋವು, ಮಾಂಸಖಂಡ, ಎಲುಬು ಮತ್ತು ಕೀಲು ನೋವು
2. ವಾಕರಿಕೆ, ವಾಂತಿ, ಕಣ್ಣುಗಳ ಹಿಂದೆ ಅತಿಯಾದ ನೋವು
3. ಗ್ರಂಥಿಗಳು ಊದಿಕೊಳ್ಳುವುದು, ಮೈಮೇಲೆ ಕೆಂಪು ದದ್ದಿ
4. ಅತಿಯಾದ ಹೊಟ್ಟೆನೋವು, ನಿರಂತರ ವಾಂತಿ
5. ದಂತದಲ್ಲಿ, ಮೂಗಿನಲ್ಲಿ ರಕ್ತಸ್ರಾವ
6. ಮೂತ್ರದಲ್ಲಿ, ಮಲ ಮತ್ತು ವಾಂತಿಯಲ್ಲಿ ರಕ್ತ ಹೋಗುತ್ತದೆ (ಇದೆಲ್ಲ ಡೆಂಗ್ಯೂದ ಗಂಭೀರ ಸ್ವರೂಪಗಳು.)
7. ಉಸಿರಾಟದಲ್ಲಿ ತೀವ್ರ ತೊಂದರೆ, ಆಯಾಸ, ಕಿರಿಕಿರಿ.

ಡೆಂಗ್ಯೂ ತಡೆಗೆ ಏನೆಲ್ಲ ಮಾಡಬಹುದು

ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಅದು ಬಾರದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಉತ್ತಮ ಎಂಬ ಮಾತಿದೆ. ಹಾಗೇ, ಡೆಂಗ್ಯೂದಿಂದ ಪಾರಾಗಲು ನೀವು ಈ ಎಲ್ಲ ಮುನ್ನೆಚ್ಚರಿಕೆ ವಹಿಸಬಹುದು

1. ಮನೆಯ ಸುತ್ತಮುತ್ತ, ಮನೆಯೊಳಗೆ ಸ್ವಚ್ಛವಾಗಿಟ್ಟುಕೊಂಡು ಸೊಳ್ಳೆಗಳು ಬಾರದಂತೆ ತಡೆಯಿರಿ. ಮನೆಯೊಳಗೆ ಸಾಧ್ಯವಾದಷ್ಟು ಸೊಳ್ಳೆ ಪರದೆಗಳನ್ನು, ಇನ್ನಿತರ ನಿವಾರಕಗಳನ್ನು ಉಪಯೋಗಿಸಿ.
2. ಹೊರಹೋಗುವ ಸಂದರ್ಭದಲ್ಲಿ ಉದ್ದನೆಯ ತೋಳಿನ ಶರ್ಟ್​, ಅಂಗಿಯನ್ನು ಧರಿಸಿ. ಒಟ್ಟಾರೆ ಮೈಯನ್ನು ಪೂರ್ಣವಾಗಿ ಮುಚ್ಚುವ ಉಡುಪುಗಳಿಗೆ ಆದ್ಯತೆ ನೀಡಿದೆ.
3. ಸಾಧ್ಯವಾದರೆ ಮನೆಯಲ್ಲಿ ಏರ್​ ಕಂಡೀಶನರ್​ ಬಳಸಿ. ಬಾಗಿಲು, ಕಿಟಕಿಗಳನ್ನು ಮುಚ್ಚಿ. ಕಿಟಕಿಗಳಿಗೆ ಸೊಳ್ಳೆ ನಿವಾರಕ ಪರದೆಗಳನ್ನು ಹಾಕಿ.
4.  ನಾವು ಮೇಲೆ ಹೇಳಿರುವ ಯಾವುದೇ ಲಕ್ಷಣಗಳೂ ಕಂಡುಬಂದಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
5. ಮನೆಯ ಆಸುಪಾಸು ಟೈರ್​ಗಳಲ್ಲಿ ನೀರು ನಿಲ್ಲದಂತೆ, ಟ್ಯಾಂಕ್​ಗಳಲ್ಲಿ ನೀರು ಸಂಗ್ರಹಿಸುವುದು ಮಾಡಬೇಡಿ. ಇದರಿಂದ ಸೊಳ್ಳೆಗಳ ಉತ್ಪತ್ತಿಯಾಗುತ್ತದೆ. ಹಾಗೇ ಏರ್​ ಕೂಲರ್​ನ ನೀರನ್ನೂ ದಿನವೂ ಬದಲಿಸಿ.

TV9 Kannada


Leave a Reply

Your email address will not be published.