ಎಡಿಜಿಪಿ ಬಾಯಿ ಬಿಟ್ಟರೆ ಎರಡೂ ಪಕ್ಷದವರು ಒಳಗೆ ಹೋಗ್ತಾರೆ: ಭಾಸ್ಕರ್ ರಾವ್ | Lots of Truth will come out of DGP gives statement says AAP Leader Bhaskar Rao


ಎಡಿಜಿಪಿ ಬಾಯಿ ಬಿಟ್ಟರೆ ಎರಡೂ ಪಕ್ಷದವರು ಒಳಗೆ ಹೋಗ್ತಾರೆ: ಭಾಸ್ಕರ್ ರಾವ್

ಆಪ್ ಧುರೀಣ ಭಾಸ್ಕರ್ ರಾವ್

ಪಿಎಸ್​ಐ ನೇಮಕಾತಿ ಹಗರಣದ ಬಗ್ಗೆ ಎಡಿಜಿಪಿ ಬಾಯಿ ಬಿಟ್ಟರೆ ಎರಡೂ ಪಕ್ಷದವರು ಒಳಗೆ ಹೋಗಬೇಕಾಗುತ್ತದೆ ಎಂದು ಸ್ವಯಂ ನಿವೃತ್ತಿ ಪಡೆದು ಆಮ್ ಆದ್ಮಿ ಪಕ್ಷ (AAP) ಸೇರಿರುವ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು

ಬೆಂಗಳೂರು: ಪಿಎಸ್​ಐ ನೇಮಕಾತಿ ಹಗರಣದ ಬಗ್ಗೆ ಎಡಿಜಿಪಿ ಬಾಯಿ ಬಿಟ್ಟರೆ ಎರಡೂ ಪಕ್ಷದವರು ಒಳಗೆ ಹೋಗಬೇಕಾಗುತ್ತದೆ ಎಂದು ಸ್ವಯಂ ನಿವೃತ್ತಿ ಪಡೆದು ಆಮ್ ಆದ್ಮಿ ಪಕ್ಷ (AAP) ಸೇರಿರುವ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು. ಹಗರಣದಲ್ಲಿ ಪ್ರಭಾವಿ ಸಚಿವರ ಹೆಸರು ಕೇಳಿ ಬರುತ್ತಿದೆ. ಹಗರಣ ನಡೆದಿದೆ ಎಂದು ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ. ಎಡಿಜಿಪಿ ಬಾಯಿ ಬಿಟ್ಟರೆ ಎರಡೂ ಪಕ್ಷದವರು ಒಳಗೆ ಹೋಗುತ್ತಾರೆ. ಅವರು ಬಾಯಿ ಬಿಡಲು ಬಿಡುವುದಿಲ್ಲ. ಈ ತನಿಖಾ ಸಂಸ್ಥೆಗಳು ಸರ್ಕಾರದ ಕೆಳಗೆ ಬರುತ್ತವೆ. ಸಂತೋಷ್ ಪ್ರಕರಣದಲ್ಲಿ ಸರ್ಕಾರ ವೈಫಲ್ಯ ತೋರಿದೆ. ಅದೇ ರೀತಿ ಈ ಪ್ರಕರಣ ಮಾಡಬೇಡಿ. ಪಿಎಸ್​ಐ ನೇಮಕಾತಿ ಹಗರಣದಿಂದಾಗಿ 50 ಸಾವಿರ ಕುಟುಂಬಗಳಿಗೆ ಅನ್ಯಾಯವಾಗಿದೆ. ನ್ಯಾಯಾಲಯಗಳ ನಿಗಾದಲ್ಲಿ ತನಿಖೆ ನಡೆಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಿಎಸ್ಐ ಹಗರಣದಲ್ಲಿ ಎರಡು ದೊಡ್ಡ ರಾಜಕೀಯ ಪಕ್ಷಗಳು ಹಾಗೂ ದೊಡ್ಡ ನಾಯಕರ ಹೆಸರುಗಳು ಕೇಳಿ ಬರುತ್ತಿದೆ. ನಾವು ಮಾಡಿದ್ದೇವೆ, ನೀವು ಮಾಡಿಲ್ವಾ ಎಂದು ಸ್ವತಃ ಮುಖ್ಯಮಂತ್ರಿ ಕೇಳುತ್ತಿದ್ದಾರೆ. ಪ್ರತಿಭಟನೆ ನಡೆಸುವವರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಯುತ್ತಿದೆ. ಸಚಿವರೊಬ್ಬರು ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ. ಈ ಸರ್ಕಾರಕ್ಕೆ ನಾಯಕತ್ವವೂ ಇಲ್ಲ, ನಿಯತ್ತೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಡಿಜಿಪಿಯನ್ನು ಬಂಧಿಸಿ ಇತರ ದೊಡ್ಡ ಪ್ರಭಾವಿಗಳನ್ನು ಕೈಬಿಡಲಾಗಿದೆ. ರಾಜಕೀಯ‌ ನಾಯಕರು ಬಕಪಕ್ಷಿಗಳ ರೀತಿ ವರ್ತಿಸುತ್ತಿದ್ದಾರೆ. ಈ ಘೋರ ಪ್ರಕರಣದ ತನಿಖೆ ಆದಷ್ಟೂ ಬೇಗ ಮುಗಿಸಬೇಕೆಂಬ ಆದೇಶವಿದೆಯಂತೆ. ಸರಿಯಾದ ರೀತಿಯಲ್ಲಿ ತನಿಖೆ ಮಾಡದಿದ್ದರೆ ಜನರು ಕ್ಯಾಕರಿಸಿ ಉಗಿಯುತ್ತಾರೆ. ಮಾನ ಮರ್ಯಾದೆ ಎನ್ನುವುದು ಇದ್ದರೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ಸಿಐಡಿ ಎನ್ನುವುದು ಮೇಲಿನಿಂದ ಇಳಿದಿಲ್ಲ. ಅದೂ ಸಹ ಸರ್ಕಾರದ ಅಧೀನದಲ್ಲಿಯೇ ಕೆಲಸ ಮಾಡುತ್ತದೆ. ಯಾವ ಪ್ರಕರಣದಲ್ಲಿಯೂ ನಿರ್ದಿಷ್ಟವಾಗಿ ಸಿಐಡಿ ಚಾರ್ಜ್​ಶೀಟ್ ಸಲ್ಲಿಸಿಲ್ಲ. ಸರ್ಕಾರದ ಅಭಯ ಹಸ್ತದಿಂದಲೇ ಇಂಥ ಅಕ್ರಮ ನಡೆಯುತ್ತದೆ. ಮಾಧ್ಯಮಗಳ ಒತ್ತಡ ಕಡಿಮೆ ಮಾಡಲು ಸಿಐಡಿಗೆ ಕೊಡುವ ನಾಟಕ ಮಾಡುತ್ತಾರೆ ಎಂದು ದೂರಿದರು.

TV9 Kannada


Leave a Reply

Your email address will not be published. Required fields are marked *