25 ಕ್ಷೇತ್ರಗಳಿಗೆ ನಡೆಯಲಿರುವ ಪರಿಷತ್ ಮಿನಿವಾರ್ಗೆ ಮೂರು ಪಕ್ಷಗಳು ಭಾರೀ ಸಿದ್ಧತೆ ನಡೆಸ್ತಿವೆ. ಈಗಾಗಲೇ ಬಿಜೆಪಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನೂ ಫೈನಲ್ ಮಾಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಇದರ ಮಧ್ಯೆ ಬೆಳಗಾವಿಯಲ್ಲಿ ಅಭ್ಯರ್ಥಿಗಳ ಗೆಲುವಿಗಾಗಿ ‘ಕೈ’-ಕಮಲ ನಾಯಕರು ಕಸರತ್ತು ನಡೆಸ್ತಿದ್ದಾರೆ.
ರಾಜ್ಯದಲ್ಲಿ ಯಾವ್ದೇ ಚುನಾವಣೆ ಬರ್ಲಿ ಬೆಳಗಾವಿ ಸಾಹುಕಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಪೈಪೋಟಿ, ಜಿದ್ದಾಜಿದ್ದಿ ಕಾಮನ್. ಇದೀಗ ಪರಿಷತ್ ಮಿನಿ ಸಮರದಲ್ಲೂ ಇಬ್ಬರ ಮಧ್ಯೆ ಕಾಳಗ ಏರ್ಪಟ್ಟಿದೆ. ತಮ್ಮ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳಲು ಭಾರೀ ರಣತಂತ್ರಗಳನ್ನ ಹೆಣೆಯುತ್ತಿದ್ದಾರೆ. ಜೊತೆಗೆ ಜಿಲ್ಲೆಯ ಪ್ರಭಾವಿಗಳನ್ನ ಭೇಟಿಯಾಗಿ ಬೆಂಬಲ ನೀಡುವಂತೆ ಕೋರುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ಕಾಗವಾಡದ ಮಾಜಿ ಶಾಸಕ ರಾಜು ಕಾಗೆಯ ಬೆಂಬಲಕ್ಕಾಗಿ ಮನವಿ ಮಾಡಿದ್ದಾರೆ.
ರಾಜು ಕಾಗೆ ಬೆಂಬಲಕ್ಕಾಗಿ ಕಾಂಗ್ರೆಸ್-ಬಿಜೆಪಿ ಕಸರತ್ತು
ಮೊನ್ನೆಯಷ್ಟೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಗವಾಡದ ಮಾಜಿ ಶಾಸಕ ರಾಜು ಕಾಗೆಯನ್ನ ಭೇಟಿಯಾಗಿದ್ರು. ಈ ವೇಳೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯನ್ನ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ರು. ಇದರ ಬೆನ್ನಲ್ಲೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಾಜು ಕಾಗೆಯನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಟಿಕೆಟ್ ಘೋಷಣೆಗೂ ಮುನ್ನವೇ ತಮ್ಮ ಅಭ್ಯರ್ಥಿ ಪರ ಪ್ರಚಾರ ಶುರು ಮಾಡಿಕೊಂಡಿದ್ದಾರೆ.
ಯಾರಿಗೆ ರಾಜು ಕಾಗೆ ಬೆಂಬಲ?
ಕಾಗವಾಡ ಕ್ಷೇತ್ರವನ್ನು 18 ವರ್ಷಗಳ ಕಾಲ ರಾಜು ಕಾಗೆ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ರು. ಅಲ್ಲದೇ ಈ ಕ್ಷೇತ್ರದಲ್ಲಿ ರಾಜು ಕಾಗೆ ಅಪಾರ ಬೆಂಬಲಿಗರನ್ನೂ ಹೊಂದಿದ್ದಾರೆ. ಹೀಗಾಗಿ ಕಾಂಗ್ರೆಸ್ನ ಮಾಜಿ ಶಾಸಕ ರಾಜು ಕಾಗೆ ಮನೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ಮಾಡಿದ್ದಾರೆ. ಈ ವೇಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ತಮ್ಮ ಸಹೋದರ ಚೆನ್ನರಾಜ ಹಟ್ಟಿಹೊಳಿಗೆ ಬೆಳಗಾವಿ ಪರಿಷತ್ ಟಿಕೆಟ್ ನೀಡುವ ಸಾಧ್ಯತೆ ಇದೆ. ಮೊದಲ ಬಾರಿಗೆ ವಿಧಾನ ಪರಿಷತ್ ಚುನಾವಣೆಗೆ ಚೆನ್ನರಾಜ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪರಿಷತ್ ಅಭ್ಯರ್ಥಿಯಾಗಲಿರುವ ಚೆನ್ನರಾಜಗೆ ಬೆಂಬಲ ನೀಡುವಂತೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಈಗಾಗಲೇ ಮಹಾಂತೇಶ ಕವಟಗಿಮಠಗೆ ಬಿಜೆಪಿ ಟಿಕೆಟ್ ಕನ್ಫರ್ಮ್ ಆಗಿದೆ. ಮತ್ತೊಂದು ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಕಣಕ್ಕಿಳಿಸಲು ಸಾಹುಕಾರ್ ಬಿಗ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದ್ರೆ, ತಮ್ಮ ಸೋದರನ ಸ್ಪರ್ಧೆ ಬಗ್ಗೆ ಶಾಸಕ ರಮೇಶ್ ಜಾರಕಿಹೊಳಿ ಈವರೆಗೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದ್ರೆ, ಲಖನ್ ಪರವಾಗಿ ಈಗಾಗಲೇ ಒಂದು ಹಂತದ ಪ್ರಚಾರವನ್ನೂ ಸಾಹುಕಾರ್ ಮುಗಿಸಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕುಟುಂಬಕ್ಕೆ ಸೋಲಿನ ರುಚಿ ತೋರಿಸಲು ರಮೇಶ್ ಜಾರಕಿಹೊಳಿ ಭಾರೀ ಕಸರತ್ತು ನಡೆಸ್ತಿದ್ದಾರೆ. ಆದ್ರೆ, ಸಾಹುಕಾರ್ ಬಿಡ್ತಿರೋ ಬಾಣವನ್ನ ಅವರಿಗೆ ತಿರುಗಿಸಲು ಕಾಂಗ್ರೆಸ್ ಶಾಸಕಿ ಭಾರೀ ಸ್ಕೆಚ್ ಹಾಕ್ತಿದ್ದಾರೆ. ಈ ಮಧ್ಯೆ ರಾಜು ಕಾಗೆ ಬೆಂಬಲ ಬಿಜೆಪಿಗೋ? ಅಥವಾ ಕಾಂಗ್ರೆಸ್ಗೋ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ವಿಶೇಷ ಬರಹ: ಸಂಜಯ್ ಕೌಲಗಿ ನ್ಯೂಸ್ ಫಸ್ಟ್ ಚಿಕ್ಕೋಡಿ