ಭಾರತಕ್ಕೆ ಸಹಾಯ ಮಾಡಲು ಅಮೆರಿಕಾ ಒಪ್ಪಿದ್ಯಾಕೆ ಗೊತ್ತಾ?
ನಿಜಕ್ಕೂ ಉಪಕಾರ ಮಾಡಲು ಜೋ ಬೈಡನ್ ಮುಂದಾದ್ರಾ?
ಕಳೆದ ಫೆಬ್ರವರಿಯಲ್ಲಿಯೇ ಹೇರಿದ್ದ ನಿಷೇಧ ತೆರವಾಗಿದ್ದು ಹೇಗೆ?

ತನ್ನನ್ನು ತಾನು ದೊಡ್ಡಣ್ಣ ಎಂದು ಕರೆದುಕೊಳ್ಳುವ ಅಮೆರಿಕಾದ ಸಣ್ಣತನ ಆಗಾಗ್ಗೆ ಬೆಳಕಿಗೆ ಬರ್ತಾನೆ ಇರುತ್ತೆ. ಇಡೀ ವಿಶ್ವವೇ ಕೊರೊನಾ ಸಂಕಷ್ಟದಲ್ಲಿದ್ದಾಗ.. ಅದ್ರಲ್ಲೂ ಭಾರತದಲ್ಲಿ ತಯಾರಾಗಬೇಕಿದ್ದ ವ್ಯಾಕ್ಸಿನ್​ಗೆ ಬೇಕಾದ ಕಚ್ಚಾ ವಸ್ತುವನ್ನೂ ಪೂರೈಕೆ ಮಾಡಲು ಅಮೆರಿಕಾ ನಿಷೇಧ ಹೇರಿತ್ತು. ತನ್ನ ದೇಶದಲ್ಲಿ ತಯಾರಾಗುವ ವ್ಯಾಕ್ಸಿನ್​ಗೂ ನಿಷೇಧ.. ಮೆಡಿಕಲ್ ಸಲಕರಣೆಗಳ ರಫ್ತಿಗೂ ನಿಷೇಧ.. ಅಷ್ಟೇ ಯಾಕೆ ಕಚ್ಚಾ ವಸ್ತು ರಫ್ತಿಗೂ ನಿಷೇಧ ಹೇರಿತ್ತು.. ಈ ಮೂಲಕ ನಿಧನ ಹೊಂದಿದ ಹಲವು ಸೋಂಕಿತರ ಹೆಣದ ಮೇಲೆ ಕುಳಿತು.. ತಮಾಷೆ ನೋಡುತ್ತಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಮೊನ್ನೆ ಬೆಳಗ್ಗೆ ತಾನೆ ಅಮೆರಿಕಾ ಅಧ್ಯಕ್ಷರ ಕಚೇರಿ ವೈಟ್​ ಹೌಸನ್​ ಸಂಪರ್ಕಾಧಿಕಾರಿ, ನಮಗೆ ಅಮೆರಿಕಾ ಫಸ್ಟ್​​. ವ್ಯಾಕ್ಸಿನ್ ಪಡೆದ ಪ್ರತಿಯೊಬ್ಬ ಅಮೆರಿಕನ್ನನೂ ಇಡೀ ವಿಶ್ವವನ್ನು ಕಾಪಾಡುತ್ತಾನೆ.. ಇದು ವಿಶ್ವಕ್ಕೆ ಒಳ್ಳೆಯದ್ದು ಅಂತಾ ಉದ್ಧಟತನದ ಮಾತುಗಳನ್ನಾಡಿದ್ದ..

ಅಷ್ಟೇ ಅಲ್ಲ ಭಾರತಕ್ಕೆ ಸದ್ಯ ವ್ಯಾಕ್ಸಿನ್​ ಅಥವಾ ವ್ಯಾಕ್ಸಿನ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಪೂರೈಕೆಯೂ ಸಾಧ್ಯವಿಲ್ಲ ಅಂತಾ ಹೇಳಲಾಗಿತ್ತು. ಈ ಮೂಲಕ ಮಹತ್ವಾಕಾಂಕ್ಷಿ ಕ್ವಾಡ್​​ ಅಂದ್ರೆ ಭಾರತ, ಅಮೆರಿಕಾ, ಆಸ್ಟ್ರೇಲಿಯಾ ಜಪಾನ್​​ ಒಳಗೊಂಡ ಮೈತ್ರಿಕೂಟದ ಉದ್ದೇಶಕ್ಕೂ ಅಮೆರಿಕಾ ಎಳ್ಳುನೀರು ಬಿಡಲು ಮುಂದಾಗಿತ್ತು. ಆದ್ರೆ, ಭಾರತದ ಕಾಲಮಾನದ ಪ್ರಕಾರ ಮೊನ್ನೆ ರಾತ್ರಿ ಅಮೆರಿಕ ತನ್ನ ವರಸೆ ಬದಲಿಸಿತ್ತು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಒಂದು ಕರೆ ಅಮೆರಿಕಾದ ಮನಸ್ಸನ್ನು ಬದಲಿಸಿತ್ತು. ಅಷ್ಟು ಮಾತ್ರವಲ್ಲ ಕಷ್ಟಕಾಲದಲ್ಲಿ ಭಾರತ ನಮಗೆ ಸಹಾಯ ಮಾಡಿತ್ತು, ಈಗ ಭಾರತಕ್ಕೆ ಎಲ್ಲ ರೀತಿಯ ಸಹಾಯ ಮಾಡ್ತೀವಿ ಅಂತಾ ಸ್ವತಃ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರೇ ಟ್ವೀಟ್ ಮಾಡಿದ್ರು. ಈ ಮೂಲಕ ಉಪಕಾರ ಸ್ಮರಣೆಯ ಮಾತುಗಳನ್ನಾಡಿದ್ರು. ಕೆಲವರಂತೂ ಅಮೆರಿಕಾವನ್ನು ಕೊಂಡಾಡಿಯೂ ಬಿಟ್ಟರು. ಆದ್ರೆ, ಅಮೆರಿಕಾ ಭಾರತಕ್ಕೆ ಸಹಾಯ ಮಾಡುವುದರ ಮೂಲಕ ಏನೋ ದೊಡ್ಡ ಉಪಕಾರ ಮಾಡ್ತಿಲ್ಲ.. ಬದಲಿಗೆ ಇದರ ಹಿಂದಿನ ಅಸಲಿ ಕಹಾನಿಯೇ ಬೇರೆ..

ಉಪಕಾರ ಸ್ಮರಣೆ ಮರೆತಿದ್ದ ಅಮೆರಿಕಾ

ಭಾರತದ ಇವತ್ತಿನ ಕೊರೊನಾ ಸ್ಥಿತಿ ಅತ್ಯಂತ ಚಿಂತಾಜನಕವಾಗಿರೋದು ದಿಟ.. ಹಾಗಂತ ಅಮೆರಿಕಾ ಏನೂ ಹೊರತಾಗಿಲ್ಲ.. ಇಲ್ಲಿಯವರೆಗೆ ಅಮೆರಿಕಾದಲ್ಲಿ ಒಟ್ಟು 3 ಕೋಟಿ 28 ಲಕ್ಷದ 75 ಸಾವಿರದ 45 ಜನರಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ ಒಟ್ಟು 5 ಲಕ್ಷದ 86 ಸಾವಿರದ 611 ಜನರು ಸಾವನ್ನಪ್ಪಿದ್ದಾರೆ. ವರ್ಲ್ಡೋಮೀಟರ್ ಪ್ರಕಾರನ ಇಂದಿಗೂ ಅಲ್ಲಿ ಸಾಕಷ್ಟು ಜನರು ಸೋಂಕಿಗೆ ಒಳಗಾಗ್ತಿದ್ದಾರೆ.. ಸಾವಿನ ಸರಮಾಲೆ ಇನ್ನೂ ನಿಂತಿಲ್ಲ,.. ಈ ನಡುವೆ ಸುಮಾರು 20 ಕೋಟಿ ಜನರು ಕನಿಷ್ಠ ಒಂದು ಡೋಸ್ ಆದ್ರೂ ವ್ಯಾಕ್ಸಿನ್ ಪಡೆದಿದ್ದಾರೆ. ಭಾರತಕ್ಕೆ ಹೋಲಿಸಿದರೆ ಕೇವಲ 33 ಕೋಟಿ ಜನಸಂಖ್ಯೆ ಹೊಂದಿರುವ ಅಮೆರಿಕಾ ಕೊರೊನಾ ಹೊಡೆತಕ್ಕೆ ತತ್ತರಿಸಿ ಹೋಗಿದೆ.

ಜೋ ಬೈಡನ್, ಅಮೆರಿಕಾ ಅಧ್ಯಕ್ಷ

ಇಂಥ ಅಮೆರಿಕಾ ಕಳೆದ ವರ್ಷವಂತೂ ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಿತ್ತು. ಹೇಗೆ ಚಿಕಿತ್ಸೆ ನೀಡಬೇಕು? ಏನು ಔಷಧ ಕೊಡಬೇಕು? ಅನ್ನೋದೇ ಅಲ್ಲಿನ ವೈದ್ಯರಿಗೆ ಸವಾಲಾಗಿತ್ತು. ಅಂಥ ವೇಳೆ ಅಮೆರಿಕಾಕ್ಕೆ ಸಹಾಯ ಮಾಡಿದ್ದು ಭಾರತ. ಭಾರತದಲ್ಲಿ ರಫ್ತಿಗೆ ನಿಷೇಧ ಇದ್ದರೂ, ಅಂದಿನ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಒಂದೇ ಒಂದು ಕರೆಗೆ ಸ್ಪಂದಿಸಿದ್ದ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 5 ಕೋಟಿ ಹೈಡ್ರಾಕ್ಸಿ ಕ್ಲೋರೋಕ್ವಿನ್, ಪಿಪಿಇ ಕಿಟ್, ಮಾಸ್ಕ್, ಗ್ಲೋವ್ಸ್, ಜ್ವರಕ್ಕೆ ನೀಡುವ ಪ್ಯಾರಾಸಿಟಮಾಲ್ ಸೇರಿದಂತೆ ಸಾಕಷ್ಟು ಔಷಧಿಗಳನ್ನು ಮರು ಮಾತನಾಡದೇ ಕಳಸಿಕೊಟ್ಟಿತ್ತು. ಆದ್ರೆ, ಈಗ ಭಾರತಕ್ಕೆ ಸಹಾಯ ಬೇಕಾದಾಗ ಮುಖವನ್ನ ಅಮೆರಿಕಾ ತಿರುಗಿಸಿತ್ತು. ಈ ವೇಳೆ ಎಂಟ್ರಿಯಾಗಿದ್ದೇ ಭಾರತದ ಜೇಮ್ಸ್​ ಬಾಂಬ್ ಖ್ಯಾತಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್..!

ಅಜಿತ್ ದೋವಲ್ ಮಾಡಿದ್ದೇನು?

ಭಯ ಬಿನ ಪ್ರೀತ್ ನ ಹೋಯ್ ಅಂದ್ರೆ ಭಯವಿಲ್ಲದ ಪ್ರೀತಿ ಇರಲ್ಲ ಅಂತಾ ತುಳಸಿದಾಸರು ತಮ್ಮ ರಾಮಾಯಣದಲ್ಲಿ ಒಂದು ಮಾತು ಹೇಳಿದ್ದಾರೆ.. ಇದೇ ತಂತ್ರವನ್ನ ಅಜಿತ್ ದೋವಲ್ ಪ್ರಯೋಗಿಸಿದ್ದಾರೆ ಅಂತಾ ಹೇಳಲಾಗ್ತಿದೆ. ಹೌದು.. ಮೊನ್ನೆ ಅಮೆರಿಕಾದ NSA ಜೇಕ್ ಸಲ್ಲಿವನ್​ಗೆ ಕರೆ ಮಾಡಿದ್ದ ಅಜಿತ್ ದೋವಲ್, ಭಾರತದ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಜೊತೆಗೆ, ಅಮೆರಿಕಾಕ್ಕೆ ಭಾರತದ ಅವಶ್ಯಕತೆ ಎಷ್ಟು? ಭಾರತ ಅಮೆರಿಕಾಕ್ಕೆ ಯಾವೆಲ್ಲ ಸಹಾಯ ಮಾಡಿದೆ? ಈಗಲೂ ಕೊರೊನಾ ವಿರುದ್ಧದ ಯುದ್ಧದಲ್ಲಿ ಭಾರತ ಯಾವ ರೀತಿ ಅಮೆರಿಕಾಕ್ಕೆ ಸಹಾಯ ಮಾಡುತ್ತಿದೆ ಅನ್ನೋದನ್ನೂ ವಿವರಿಸಿದ್ದಾರೆ. ಜೊತೆಗೆ VAV ಲೈಫ್ ಸೈನ್ಸಸ್ ಸಂಸ್ಥೆಯ ಹೆಸರನ್ನೂ ಪ್ರಸ್ತಾಪಿಸಿದ್ರು ಅಂತಾ ಕೆಲ ತಜ್ಞರು ವಿಶ್ಲೇಷಿಸಿದ್ದಾರೆ.

ಜೇಕ್ ಸಲ್ಲಿವನ್, ಅಮೆರಿಕಾ ಎನ್​ಎಸ್​ಎ

VAV ಲೈಫ್ ಸೈನ್ಸಸ್ ಸಂಸ್ಥೆ ಹೆಸರು ಕೇಳುತ್ತಿದ್ದ ಹಾಗೆ, ಅಮೆರಿಕಾದ ಎನ್​ಎಸ್​ಎ ವರಸೆ ಬದಲಾಯ್ತು ಅಂತ ಹೇಳಲಾಗ್ತಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಒತ್ತಡ, ಜೊತೆಗೆ ಅಮೆರಿಕಾದ ವಿರುದ್ಧ ಮಡುಗಟ್ಟಲಾರಂಭಿಸಿದ್ದ ಭಾರತೀಯರ ಆಕ್ರೋಶ ಮತ್ತು ಕಳೆದ 30 ವರ್ಷಗಳಿಂದ ಸುಧಾರಿಸುತ್ತಿದ್ದ ಭಾರತ ಮತ್ತು ಅಮೆರಿಕಾದ ಸಂಬಂಧ ಹಾಳಾಗುವ ಆತಂಕ ಎಲ್ಲವೂ ಪರಿಣಾಮ ಬೀರಿದ್ದು ಅಮೆರಿಕಾದ ಮನಸ್ಸು ಬದಲಾಗಲು ಕಾರಣವಾಯ್ತು ಎನ್ನಲಾಗ್ತಿದೆ.

VAV ಲೈಫ್ ಸೈನ್ಸಸ್ ಸಂಸ್ಥೆಯ ಪ್ರಾಮುಖ್ಯತೆ ಏನು?

VAV ಲೈಫ್ ಸೈನ್ಸಸ್ ಅನ್ನೋ ಸಂಸ್ಥೆಯ ಗಣನೀಯ ಪಾತ್ರ
ಅಮೆರಿಕಾದ ಫೈಜರ್ ವ್ಯಾಕ್ಸಿನ್​ ತಯಾರಿಕೆಗೆ ಭಾರತದಿಂದ ಕಚ್ಚಾ ವಸ್ತು
VAV ಲೈಫ್ ಸೈನ್ಸಸ್ ಸಂಸ್ಥೆ ಪೂರೈಸುತ್ತಿದೆ ಅತ್ಯಂತ ಮಹತ್ವದ ವಸ್ತು

ಭಾರತದ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುವ ಕೋವಿಶೀಲ್ಡ್ ವ್ಯಾಕ್ಸಿನ್​ಗೆ ಬೇಕಾದ ಕಚ್ಚಾ ವಸ್ತುಗಳು ಅಮೆರಿಕಾದಿಂದ ಬರಬೇಕು.. ಅದರಂತೆಯೇ ಅಮೆರಿಕಾದಲ್ಲಿ ನೀಡಲಾಗ್ತಿರೋ ಫೈಜರ್ ಮತ್ತು ಮಾಡರ್ನಾ ರೀತಿಯ ಎಂ-ಆರ್​ಎನ್​ಎ ವ್ಯಾಕ್ಸಿನ್ ತಯಾರಿಸಲು ಬೇಕಾದ ಸಾಕಷ್ಟು ಕಚ್ಚಾ ವಸ್ತು ಭಾರತದಿಂದ ಹೋಗುತ್ತೆ. ಅದ್ರಲ್ಲೂ, ಫಾಸ್ಫೊಲಿಪಿಡ್ ಅನ್ನೋವಂಥ ಪ್ರಮುಖ ಕಚ್ಚಾ ವಸ್ತುವನ್ನು ಭಾರತದ್ದೇ ಆಗಿರುವ VAV ಲೈಫ್ ಸೈನ್ಸಸ್ ಅನ್ನೋ ಸಂಸ್ಥೆ ಪೂರೈಕೆ ಮಾಡುತ್ತೆ. ಒಂದು ವೇಳೆ ಇದರ ಸಪ್ಲೈ ನಿಂತರೆ ಅಮೆರಿಕಾಕ್ಕೆ ಸಾಕಷ್ಟು ತೊಂದರೆಯಾಗುತ್ತೆ.. ಜೊತೆಗೆ ಅಮೆರಿಕಾದ ಕೊರೊನಾ ವಿರುದ್ಧದ ಯುದ್ಧಕ್ಕೂ ಹಿನ್ನಡೆಯಾಗುತ್ತೆ.. ಈ ಸಂಗತಿಯನ್ನು ಅಜಿತ್ ದೋವಲ್ ಮನವರಿಕೆ ಮಾಡಿ ಕೊಟ್ಟಿದ್ದಾರೆ ಎನ್ನಲಾಗ್ತಿದೆ.

ಇದೇ ಹಿನ್ನೆಲೆಯಲ್ಲಿ ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಕರೆ ಮಾಡಿದ್ದ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಕೊಡೋರ ರೀತಿಯಲ್ಲಿ ಮಾತನಾಡದೇ.. ಕೊಡು-ಕೊಳ್ಳುವಿಕೆ ಅರಿತು ಮಾತನಾಡಿದ್ದಾರೆ. ಜೊತೆಗೆ ಭಾರತ ಮತ್ತು ಅಮೆರಿಕಾ ಪರಸ್ಪರ ಸಹಕಾರದಿಂದ ಕೊರೊನಾ ವಿರುದ್ಧದ ಯುದ್ಧ ಗೆಲ್ಲುತ್ತೇವೆ ಎಂದೂ ಸಹ ಹೇಳಿದ್ದಾರೆ.

ಒಟ್ಟಿನಲ್ಲಿ ಭಾರತಕ್ಕೆ ತೊಂದರೆ ಬಂದಾಗಲೆಲ್ಲ ಅದನ್ನು ಬಗೆಹರಿಸಲು ಮುಂದೆ ಇರುವ ಅಜಿತ್ ದೋವಲ್, ಈ ಬಾರಿ ಕೂಡ ಅಮೆರಿಕಾಕ್ಕೆದೊಂದಿಗೆ ಫಲಪ್ರದವಾಗಿ ಮಾತನಾಡಿದ್ದಾರೆ.

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ಎದ್ನೋ ಬಿದ್ನೋ ಅಂತಾ ಭಾರತದ ಸಹಾಯಕ್ಕೆ ಬಂದಿದ್ಯಾಕೆ ಅಮೆರಿಕಾ? ಇಲ್ಲಿದೆ ಅಸಲಿ ಕಹಾನಿ appeared first on News First Kannada.Source link