ಚಿಕ್ಕಮಗಳೂರು: ಎರಡು ತಿಂಗಳ ಬಳಿಕ ಜಿಲ್ಲೆಯಲ್ಲಿ ಅತಿ ಕಡಿಮೆ ಕೇಸ್ ಬಂದಿದ್ದು ಜಿಲ್ಲೆಯ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಎರಡು ತಿಂಗಳಿಂದ ಜಿಲ್ಲೆಯಲ್ಲಿ ಪ್ರತಿದಿನ ನೂರಾರು ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಇಂದು ಎರಡು ತಿಂಗಳ ಬಳಿಕ ಕೇವಲ 39 ಪಾಸಿಟಿವ್ ಕೇಸ್ ಬಂದಿರುವುದರಿಂದ ಜಿಲ್ಲೆಯ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಅದರಲ್ಲೂ ಚಿಕ್ಕಮಗಳೂರು ತಾಲೂಕು ಸೇರಿದಂತೆ ಜಿಲ್ಲೆಯ ಬಯಲುಸೀಮೆ ಭಾಗವಾದ ತರೀಕೆರೆ, ಕಡೂರು ತಾಲೂಕಿನಲ್ಲಿ ಅತಿ ಹೆಚ್ಚು ಕೇಸ್ ದಾಖಲಾಗುತ್ತಿದ್ದವು. ಕೊರೊನಾ ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ 276 ಪ್ರಕರಣವೇ ದೈನಂದಿನದ ಹೆಚ್ಚು ಕೇಸ್ ಆಗಿತ್ತು. ಎರಡನೇ ಅಲೆಯಲ್ಲಿ ದಿನವೊಂದಕ್ಕೆ ಹೆಮ್ಮಾರಿ ಕೊರೊನಾ 1,200 ಗಡಿಯನ್ನೂ ದಾಟಿತ್ತು. ಇಡೀ ರಾಜ್ಯದಲ್ಲೇ ಕೊರೊನಾ ಸೋಂಕು ಕಡಿಮೆಯಾದರೂ ಜಿಲ್ಲೆ ಮಾತ್ರ ದೈನಂದಿನ 600ಕ್ಕೂ ಅಧಿಕ ಕೇಸ್ ನೊಂದಿಗೆ ರಾಜ್ಯದಲ್ಲೇ ನಂಬರ್ 1 ಪಟ್ಟ ಅಲಂಕರಿಸಿತ್ತು.

ರಾಜ್ಯದ ಇತರೆ ಜಿಲ್ಲೆಗಳು ಅನ್‍ಲಾಕ್ ಆದರೂ ಕೂಡ ಚಿಕ್ಕಮಗಳೂರಲ್ಲಿ ಲಾಕ್‍ಡೌನ್ ಕಂಟಿನ್ಯೂ ಎಂಬ ಸರ್ಕಾರದ ಆದೇಶ ಸಾಮಾನ್ಯವಾಗಿತ್ತು. ಜನ ಕೂಡ ಆತಂಕಕ್ಕೀಡಾಗಿದ್ದರು. ಕಳೆದೊಂದು ವಾರದಿಂದ ಕ್ರಮೇಣ ಕಡಿಮೆಯಾದ ಸೋಂಕಿತರ ಸಂಖ್ಯೆ ಇಂದು ಎರಡು ತಿಂಗಳ ಬಳಿಕ ಎರಡಂಕಿಗೆ ಇಳಿದಿರುವುದರಿಂದ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಕೊರೊನಾ ಮೊದಲ ಅಲೆಯಲ್ಲೂ ಜಿಲ್ಲೆಗೆ ಕೊರೊನಾ ಕಾಲಿಟ್ಟಿದ್ದು ತಡವಾಗಿಯೇ. ಫಸ್ಟ್ ಸ್ಟೇಜ್‍ನಲ್ಲಿ ಎರಡು ತಿಂಗಳ ಬಳಿಕ ಜಿಲ್ಲೆಗೆ ಬಂದಿದ್ದ ಕೊರೊನಾ ಹಂತಹಂತವಾಗಿ ಕಡಿಮೆಯಾಗಿತ್ತು.

ಎರಡನೇ ಅಲೆಯ ಜಿಲ್ಲೆಯ ದಶದಿಕ್ಕುಗಳಲ್ಲಿ ಕೊರೊನಾ ತನ್ನ ದಾಂಗುಡಿ ಇಟ್ಟಿತ್ತು. ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ ಸುಮಾರು 16 ಸಾವಿರದಷ್ಟು ಕೇಸ್ ಗಳು ಮಾತ್ರ ದಾಖಲಾಗಿದ್ದವು. ಎರಡನೇ ಅಲೆಯಲ್ಲಿ 29 ಸಾವಿರಕ್ಕೂ ಹೆಚ್ಚು ಕೇಸ್‍ಗಳು ದಾಖಲಾಗಿ ಜಿಲ್ಲೆಯ ಜನರ ನಿದ್ದೆಗೆಡಿಸಿತ್ತು. ಎರಡನೇ ಅಲೆಯಲ್ಲೂ ಜಿಲ್ಲೆಗೆ ಬೆಂಗಳೂರಿಗರ ರೂಪದಲ್ಲಿ ಸ್ವಲ್ಪ ತಡವಾಗಿಯೇ ಬಂದಿದ್ದ ಕೊರೊನಾ ಇಡೀ ಜಿಲ್ಲೆಯನ್ನ ಆತಂಕಕ್ಕೆ ದೂಡಿತ್ತು. ಕಳೆದೊಂದು ವಾರದಿಂದ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದ ಫಲವಾಗಿ ಇಂದು ಜಿಲ್ಲೆಯಲ್ಲಿ ಹೆಮ್ಮಾರಿ ಅಬ್ಬರ ಬಹುತೇಕ ಕಡಿಮೆಯಾಗಿದೆ. ಇದನ್ನೂ ಓದಿ: ಚೀನಿ ಲಸಿಕೆ ಪಡೆದವರಿಗೆ ಸೌದಿ ನಿರ್ಬಂಧ – ಪಾಕ್ ಜನತೆಗೆ ಶಾಕ್

ಜಿಲ್ಲೆಯ ಜನ ಕೂಡ ಇಡೀ ರಾಜ್ಯವೇ ಅನ್‍ಲಾಕ್ ಆಗುತ್ತಿದೆ. ನಮ್ಮ ಜಿಲ್ಲೆ ಮಾತ್ರ ಆಗುತ್ತಿಲ್ಲ. ಇನ್ನು ಎಷ್ಟು ದಿನ ಈ ವನವಾಸ ಅಂತ ಹೆಮ್ಮಾರಿಗೆ ಹಿಡಿಶಾಪ ಹಾಕಿದ್ದರು. ಇಂದು ಜಿಲ್ಲೆಯಲ್ಲಿ ಎರಡು ತಿಂಗಳ ಬಳಿಕ ಕೇವಲ 39 ಪ್ರಕರಣ ದಾಖಲಾಗಿರುವುದರಿಂದ ಜಿಲ್ಲೆಯ ಜನ ಸಂತಸಕ್ಕೀಡಾಗಿದ್ದಾರೆ. ಜೊತೆಗೆ ಸರ್ಕಾರ ಜಿಲ್ಲೆಗೆ ಅನ್‍ಲಾಕ್ ಘೋಷಿಸಿರೋದು ಕೂಡ ಜನರಿಗೆ ಡಬಲ್ ಸಂತಸ ತಂದಿದೆ. ಜಿಲ್ಲೆಯಲ್ಲಿ ಒಟ್ಟು 339 ಜನ ಕೊರೊನಾಗೆ ಬಲಿಯಾಗಿದ್ದಾರೆ. ಅವರಲ್ಲಿ ಮೊದಲ ಅಲೆಯಲ್ಲಿ ಸಾವನ್ನಪ್ಪಿದವರು 139 ಜನ. ಇದನ್ನೂ ಓದಿ: ಚೀನಿ ಲಸಿಕೆ ಪಡೆದ ರಾಷ್ಟ್ರಗಳಲ್ಲಿ ಕೊರೊನಾ ಕೇಸ್ ಭಾರೀ ಹೆಚ್ಚಳ

The post ಎರಡು ತಿಂಗಳ ನಂತರ ಎರಡಂಕಿಗೆ ಇಳಿದ ಕೊರೊನಾ ಪ್ರಕರಣ- ನಿಟ್ಟುಸಿರು ಬಿಟ್ಟ ಕಾಫಿನಾಡಿಗರು appeared first on Public TV.

Source: publictv.in

Source link