ಎರಡು ವರ್ಷಗಳ ಬಳಿಕ ಭಾರತಕ್ಕೆ ವಿದ್ಯಾರ್ಥಿ ವೀಸಾ ನೀಡಲು ನಿರ್ಧರಿಸಿದ ಚೀನಾ | China To Resume Student Visas For Indians After Over Two Years


ಎರಡು ವರ್ಷಗಳ ನಂತರ ಭಾರತೀಯ ವಿದ್ಯಾರ್ಥಿಗಳಿಗೆ ಚೀನಾ, ವಿದ್ಯಾರ್ಥಿ ವೀಸಾ ನೀಡಲು ನಿರ್ಧರಿಸಿದೆ.

ಎರಡು ವರ್ಷಗಳ ಬಳಿಕ ಭಾರತಕ್ಕೆ ವಿದ್ಯಾರ್ಥಿ ವೀಸಾ ನೀಡಲು ನಿರ್ಧರಿಸಿದ ಚೀನಾ

ಸಾಂಧರ್ಬಿಕ ಚಿತ್ರ

ಬೀಜಿಂಗ್: ಎರಡು ವರ್ಷಗಳ ಬಳಿಕ ಭಾರತೀಯ ವಿದ್ಯಾರ್ಥಿಗಳಿಗೆ ಚೀನಾ, ವಿದ್ಯಾರ್ಥಿ ವೀಸಾ ನೀಡಲು ನಿರ್ಧರಿಸಿದೆ. ಕೊರೊನಾ ಕಾರಣದಿಂದ ಚೀನಾ ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ನಿರ್ಭಂದಿಸಿತ್ತು. ಸಧ್ಯ ಚೀನಾದ ಕಾಲೇಜುಗಳಿಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ಮತ್ತು ತಮ್ಮ ಅಧ್ಯಯನವನ್ನು ಪುನರಾರಂಭಿಸಲು, ಚೀನಾಕ್ಕೆ ಹಿಂದಿರುಗುವ ವಿದ್ಯಾರ್ಥಿಗಳಿಗೆ ಮತ್ತು ಉನ್ನತ ಶೈಕ್ಷಣಿಕ ಶಿಕ್ಷಣಕ್ಕಾಗಿ ದೀರ್ಘಾವಧಿಯ ಅಧ್ಯಯನವನ್ನು ಕೈಗೊಳ್ಳಲು ಚೀನಾಕ್ಕೆ ಹೋಗಲು ಉದ್ದೇಶಿಸಿರುವ ವಿದ್ಯಾರ್ಥಿಗಳಿಗೆ X1-ವೀಸಾವನ್ನು ನೀಡಲು ಚೀನಾ ನಿರ್ಧರಿಸಿದೆ.

ಈ ಸಂಬಂಧ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಏಷ್ಯನ್ ವ್ಯವಹಾರಗಳ ಇಲಾಖೆಯ ಕೌನ್ಸಿಲರ್ ಜಿ ರಾಂಗ್ ಟ್ವೀಟ್​ ಮಾಡಿ “ಭಾರತೀಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು! ನಿಮ್ಮ ತಾಳ್ಮೆಯು ಸಾರ್ಥಕವಾಗಿದೆ. ನಾನು ನಿಜವಾಗಿಯೂ ನಿಮ್ಮ ಉತ್ಸಾಹ ಮತ್ತು ಸಂತೋಷವನ್ನು ಹಂಚಿಕೊಳ್ಳಬಲ್ಲೆ. ಚೀನಾಗೆ ಮರಳಿ ಸ್ವಾಗತ!”, ಎಂದು ಟ್ವೀಟ್ ಮಾಡಿದ್ದಾರೆ.

ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಚೀನಾದಲ್ಲಿ ಕೆಲಸ ಮಾಡುವವರ ಕುಟುಂಬಗಳಿಗೆ ವೀಸಾಗಳನ್ನು ನೀಡುವ ಸಲುವಾಗಿ ನವದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿಯ ಪ್ರಕಟಣೆಯನ್ನು ಅವರ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ .

ಪ್ರಕಟಣೆಯ ಪ್ರಕಾರ,
ಕೋವಿಡ್ ವೀಸಾ ನಿರ್ಬಂಧಗಳಿಂದಾಗಿ 23,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು, ಹೆಚ್ಚಾಗಿ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರಿಸಲು, ತಕ್ಷಣವೇ ಮರಳಲು ಬಯಸುವ ವಿದ್ಯಾರ್ಥಿಗಳ ಹೆಸರುಗಳ ಪಟ್ಟಿಯನ್ನು ಚೀನಾ ಭಾರತ ಸರ್ಕಾರಕ್ಕೆ ನೀಡುವಂತೆ ಕೇಳಿದೆ. ಹೀಗಾಗಿ ಭಾರತ ಸರ್ಕಾರ ಕೂಡ ನೂರಾರು ವಿದ್ಯಾರ್ಥಿಗಳ ಪಟ್ಟಿಯನ್ನು ಸಲ್ಲಿಸಿದೆ.

ದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿ ಸೋಮವಾರದ ಪ್ರಕಟಣೆಯು ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ಮತ್ತು ಕೋವಿಡ್ ವೀಸಾ ನಿಷೇಧದಿಂದಾಗಿ ಚೀನಾಕ್ಕೆ ಪ್ರಯಾಣಿಸಲು ಸಾಧ್ಯವಾಗದ ಹಳೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೀಸಾಗಳನ್ನು ನೀಡಲಾಗುವುದು ಎಂದು ಹೇಳಿದೆ.

ಚೀನಾಗೆ ತೆರಳುವ ವಿದ್ಯಾರ್ಥಿಗಳು ವೀಸಾ ಪಡೆಯಬೇಕಾದರೆ, ಹೊಸ ವಿದ್ಯಾರ್ಥಿಗಳು ಚೀನಾದ ವಿಶ್ವವಿದ್ಯಾನಿಲಯದಿಂದ ನೀಡಲಾದ ಮೂಲ ಪ್ರವೇಶ ಪತ್ರವನ್ನು ಭಾರತದಲ್ಲಿನ ಚೀನಾ ರಾಯಬಾರ ಕಚೇರಿಗೆ ಸಲ್ಲಿಸಬೇಕು. ಹಳೆಯ ವಿದ್ಯಾರ್ಥಿಗಳು ಚೀನಾದ ವಿಶ್ವವಿದ್ಯಾನಿಲಯವು ನೀಡಿದ ‘ಕ್ಯಾಂಪಸ್‌ಗೆ ಹಿಂತಿರುಗುವ ಪ್ರಮಾಣಪತ್ರ’ವನ್ನು ಸಲ್ಲಿಸಬೇಕಾಗುತ್ತದೆ.

ಅಧಿಕೃತ ಮೂಲಗಳ ಪ್ರಕಾರ, 1,000 ಕ್ಕೂ ಹೆಚ್ಚು ಹಳೆಯ ಭಾರತೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರೆಸಲು ಚೀನಾಗೆ ತೆರಳಲು ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.