‘ಎರಡು ಸಾವಿರದ ಇಪ್ಪತ್ತು ಗೋಪಿಕೆಯರು’ ನೀಡಿದ ಆಹ್ವಾನಕ್ಕೆ ಓಗೊಟ್ಟು ಬಂದ ಪೊಲೀಸ್​ ಅಧಿಕಾರಿ ರವಿಕಾಂತೇ ಗೌಡ | Police officer Ravikanthe Gowda released Ippatthu Savirada Ippatthu Gopikeyaru movie songs


‘ಎರಡು ಸಾವಿರದ ಇಪ್ಪತ್ತು ಗೋಪಿಕೆಯರು’ ನೀಡಿದ ಆಹ್ವಾನಕ್ಕೆ ಓಗೊಟ್ಟು ಬಂದ ಪೊಲೀಸ್​ ಅಧಿಕಾರಿ ರವಿಕಾಂತೇ ಗೌಡ

‘ಎರಡು ಸಾವಿರದ ಇಪ್ಪತ್ತು ಗೋಪಿಕೆಯರು’ ಸಿನಿಮಾದ ಆಡಿಯೋ ರಿಲೀಸ್

ಪೊಲೀಸ್​ ಅಧಿಕಾರಿಗಳು ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ವಿರಳ. ಒಂದು ವೇಳೆ ಹಿರಿಯ ಅಧಿಕಾರಿಗಳು ಯಾವುದಾದರೂ ಚಿತ್ರದ ಕಾರ್ಯಕ್ರಮದಲ್ಲಿ ಭಾಗಿಯಾದರೆ ಅಲ್ಲಿ ಏನಾದರೂ ಒಂದು ವಿಶೇಷ ಇದೆ ಎಂಬುದೇ ಅರ್ಥ. ಇತ್ತೀಚೆಗೆ ಸಂಚಾರಿ ಪೊಲೀಸ್​ ಆಯುಕ್ತ ರವಿಕಾಂತೇ ಗೌಡ ಅವರು ‘ಎರಡು ಸಾವಿರದ ಇಪ್ಪತ್ತು ಗೋಪಿಕೆಯರು’ ಸಿನಿಮಾದ ಆಡಿಯೋ ರಿಲೀಸ್​ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಶ್ರೀಧರ್​ ವಿ. ಸಂಭ್ರಮ್​ ಅವರು ಸಂಗೀತ ಸಂಯೋಜನೆ ಮಾಡಿದ ಈ ಚಿತ್ರದ ಮೂರು ಹಾಡುಗಳನ್ನು ಅವರು ಬಿಡುಗಡೆ ಮಾಡಿದರು. ಬಳಿಕ ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು. ಈ ಚಿತ್ರಕ್ಕೆ ವಿ. ನಾರಾಯಣಸ್ವಾಮಿ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ನಿವೃತ್ತ ಪೊಲೀಸ್​ ಅಧಿಕಾರಿ ಕುಚ್ಚಣ್ಣ ಶ್ರೀನಿವಾಸನ್​ ನಿಭಾಯಿಸಿದ್ದಾರೆ.

ಈ ಸಿನಿಮಾದ ಹಾಡುಗಳಿಗೆ ಹೃದಯಶಿವ, ಗೌಸ್​ಪೀರ್​ ಮತ್ತು ಮಹೇಂದ್ರ ಗೌಡ ಸಾಹಿತ್ಯ ಬರೆದಿದ್ದಾರೆ. ಪ್ರಿಯಾಂಕಾ ಚಿಂಚೋಳಿ, ಧರಣಿ, ಬಾಲಾಜಿ ಶರ್ಮಾ, ನಂದೀಶ್​ ಗಿರೀಶ್​, ಮಮತಾ, ವರ್ಷಿಣಿ, ಸರಿಗಮ ವಿಜಿ, ಮೈಸೂರು ರಮಾನಂದ್​ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

‘ರವಿಕಾಂತೇ ಗೌಡ ಕೇವಲ ಓರ್ವ ಪೊಲೀಸ್​ ಅಧಿಕಾರಿ ಮಾತ್ರವಲ್ಲ. ಅವರೊಬ್ಬ ಸಾಹಿತಿ. ಅವರ ತಂದೆ ಬೆಸಗರಹಳ್ಳಿ ರಾಮಣ್ಣ ಕನ್ನಡದ ಜನಪ್ರಿಯ ಕಥೆಗಾರ. ರವಿಕಾಂತೇ ಗೌಡ ಕೂಡ ಸಾಹಿತ್ಯ ರಚಿಸಿದ್ದಾರೆ. ಬಹುಶಃ ನಿವೃತ್ತಿಗಾಗಿ ಕಾಯುತ್ತಿದ್ದಾರೆ ಅಂದುಕೊಂಡಿದ್ದೇನೆ. ಆಮೇಲೆ ಅವರ ಹಲವು ಪುಸ್ತಕಗಳು ಪ್ರಕಟವಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಅವರಿಗೆ ಆಹ್ವಾನ ಕಳಿಸಿದಾಗ ವಾಟ್ಸಾಪ್​ನಲ್ಲೇ ಒಂದು ಕವನ ಕಳಿಸಿದರು. ಬಹಳ ಖುಷಿಯಾಯಿತು. ಒಳ್ಳೆಯ ಸಾಲುಗಳಿವೆ. ಅವರು ಇಂದು ಮುಖ್ಯ ಅತಿಥಿಯಾಗಿ ಬಂದಿರುವುದು ಸಂತೋಷ’ ಎಂದರು ಚಿತ್ರವನ್ನು ನಿರೂಪಿಸುತ್ತಿರುವ ಕುಚ್ಚಣ್ಣ ಶ್ರೀನಿವಾಸನ್​.

‘ನನ್ನ ಸೀನಿಯರ್ ಆದ ಕುಚ್ಚಣ್ಣ ಶ್ರೀನಿವಾಸ್ ಅವರು, ನನಗೆ ಸಿನಿಮಾ ನಿರ್ಮಾಣದ ಬಗ್ಗೆ ತಿಳಿಸಿದ್ದರು. ಈಗ ಆಡಿಯೋ ಬಿಡುಗಡೆಗೆ ನನ್ನ ಆಹ್ವಾನಿಸಿದಾಗ ಚಿತ್ರ ಈಗಾಗಲೇ ಬಿಡುಗಡೆ ಹಂತಕ್ಕೆ ಬಂದಿರುವ ಸುದ್ದಿ ತಿಳಿದು ಸಂತೋಷವಾಯಿತು. ಮಲಯಾಳಂ, ತಮಿಳು ಭಾಷೆಗಳಲ್ಲಿ ಕಡಿಮೆ ದುಡ್ಡು ಖರ್ಚು ಮಾಡಿ ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡುತ್ತಾರೆ. ಅಲ್ಲಿ ಆ ಚಿತ್ರಗಳು ಯಶಸ್ವಿಯಾಗಿದುಂಟು. ಈ ಚಿತ್ರದ ಬಗ್ಗೆ ಕೇಳಿದಾಗ ನನಗೂ ಉತ್ತಮವಾದ ಕಥೆಯುಳ್ಳ ಚಿತ್ರವೆನಿಸುತ್ತಿದೆ. ನಾವು ಕೂಡ ಉತ್ತಮ ಚಿತ್ರಗಳನ್ನು ಪ್ರೋತ್ಸಾಹಿಸಬೇಕು. ಇಲ್ಲವಾದಲ್ಲಿ, ಕೆಟ್ಟ ಚಿತ್ರಗಳನ್ನು ನೋಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಚಿತ್ರದ ಹಾಡುಗಳನ್ನು ಕೇಳಿದಾಗ ಕಿವಿಗೆ ಇಂಪಾಯಿತು.‌ ಶ್ರೀಧರ್ ವಿ. ಸಂಭ್ರಮ್​ ಒಳ್ಳೆಯ ಸಂಗೀತ ನೀಡಿದ್ದಾರೆ. ಚಿತ್ರ ಯಶಸ್ವಿಯಾಗಲಿ’ ಎಂದು ರವಿಕಾಂತೇ ಗೌಡ ಶುಭ ಹಾರೈಸಿದರು.

ಇದನ್ನೂ ಓದಿ:

ಒಟ್ಟಿಗೆ 6 ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ‘ಡೆಕ್ಕನ್​ ಕಿಂಗ್​’ ಸಂಸ್ಥೆ; ಕನ್ನಡ ಸೇರಿ ಬಹುಭಾಷೆಯಲ್ಲಿ ಬಂಡವಾಳ​

ಪುನೀತ್​ ಹೊಸ ಚಿತ್ರ ‘ಲಕ್ಕಿ ಮ್ಯಾನ್​’ ಶೀಘ್ರವೇ ರಿಲೀಸ್​; ಅಪ್ಪು ಅಭಿಮಾನಿಗಳಿಗೆ ಗುಡ್​ ನ್ಯೂಸ್​

TV9 Kannada


Leave a Reply

Your email address will not be published. Required fields are marked *