ಬೀಜಿಂಗ್:ಕಳೆದ ಕೆಲ ವರ್ಷಗಳಿಂದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನದೆ ಛಾಪು ಮೂಡಿಸಿರುವ ಚೀನಾದ ಶಿಯೋಮಿ (ಎಂಐ) ಈಗ ಮತ್ತೊಂದು ನಾವೀನ್ಯತೆಗೆ ತೆರೆದುಕೊಳ್ಳುತ್ತಿದೆ. ಈ ಬಾರಿ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಗೆ ಶಿಯೋಮಿ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

ಚೀನಾ ಮೂಲದ ಶಿಯೋಮಿ ಈಗಾಗಲೇ ಹಲವು ಬಗೆಯ ಕಡಿಮೆ ದರದ ಮೊಬೈಲ್‍ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಮೊಬೈಲ್ ಉತ್ಪಾದನೆಯೆಲ್ಲಿ ಮೆಲುಗೈ ಸಾಧಿಸಿರುವ ಶಿಯೋಮಿ ಇದೀಗ ಎಲೆಕ್ಟ್ರಿಕಲ್ ವಾಹನಗಳ ಮಾರುಕಟ್ಟೆಗೂ ದಾಂಗುಡಿ ಇಡಲು ಹೊರಟಿದೆ.

ಗ್ರೇಟ್ ವಾಲ್ ಜತೆ ಶಿಯೋಮಿ :

ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯ ಯೋಜನೆ ಹಾಕಿಕೊಂಡಿರುವ ಶಿಯೋಮಿ, ಈ ಕಾರ್ಯಕ್ಕಾಗಿ ಚೀನಾದ ಮತ್ತೊಂದು ದೈತ್ಯ ಕಂಪನಿ ‘ಗ್ರೇಟ್ ವಾಲ್ ಮೋಟಾರ್ ಕಂ. ಲಿ. ಜತೆ ಕೈ ಜೋಡಿಸಲಿದೆಯಂತೆ.

ಕಾರುಗಳ ಉತ್ಪಾದನೆಯಲ್ಲಿ ಗ್ರೇಟ್ ವಾಲ್ ಮೋಟಾರ್ ಕಂ. ಲಿ. ಮುಂಚೂಣಿಯಲ್ಲಿದೆ. ಇದುವರೆಗೂ ಈ ಕಂಪನಿಯೂ ಬೇರೆ ಯಾವ ಕಂಪನಿಗಳ ಜತೆ ಸಹಭಾಗಿತ್ವ ಹೊಂದಿಲ್ಲ. ಆದರೆ ಇದೇ ಮೊದಲ ಬಾರಿಗೆ ಶಿಯೋಮಿ ಜತೆ ವಿದ್ಯುತ್ ಚಾಲಿತ ವಾಹನಗಳ ತಯಾರಿಗೆ ಒಪ್ಪಿಕೊಂಡಿದೆ ಎಂದು ಮೂಲಗಳು ಹೇಳಿವೆ.

ಜಗತ್ತಿನ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕ ಸಂಸ್ಥೆಯಾದ ಶಿಯೋಮಿ, ಗ್ರೇಟ್ ವಾಲ್ ಜತೆಗೆ ಮಾತುಕತೆ ನಡೆಸುತ್ತಿದೆ. ಗ್ರೇಟ್ ವಾಲ್ ಫ್ಯಾಕ್ಟರಿ ಸಹಾಯದಿಂದ, ಅದರ ಮೂಲಕ ತನ್ನದೇ ಸ್ವಂತ ಬ್ರ್ಯಾಂಡ್ ಅಡಿಯಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಶಿಯೋಮಿ ಹೊಂದಿದೆ. ಈ ಯೋಜನೆಗೆ ಗ್ರೇಟ್ ವಾಲ್ ಎಂಜಿನಿಯರ್, ತಾಂತ್ರಿಕ ಸಹಕಾರ ನೀಡಲಿದೆ. ಆದರೆ ಈ ಬಗ್ಗೆ ಉಭಯ ಕಂಪನಿಗಳಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.  ಶಿಯೋಮಿಯ ವಿದ್ಯುತ್ ಚಾಲಿತ ವಾಹನಗಳು 2023ರ ವೇಳೆಗೆ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿವೆ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More