ರಾಂಚಿ: ಕೊರೊನಾದಿಂದಾಗಿ 14ನೇ ಆವೃತ್ತಿಯ ಐಪಿಎಲ್ ಅರ್ಧದಲ್ಲೇ ಸ್ಥಗಿತಗೊಂಡಿದೆ. ಆಟಗಾರರೆಲ್ಲ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ತಂಡದ ಆಟಗಾರೆಲ್ಲ ಮನೆಗೆ ಸೇರಿದ ಬಳಿಕ ಕೊನೆಯವರಾಗಿ ಮನೆಗೆ ತೆರಳಿದ್ದಾರೆ.

ಸಿಎಸ್‍ಕೆ ತಂಡದ ಆಟಗಾರರೆಲ್ಲರನ್ನು ಕೂಡ ಸುರಕ್ಷಿತವಾಗಿ ಮನೆಗೆ ತಲುಪಿಸುವ ಹೊಣೆ ಹೊತ್ತಿದ್ದ ಚೆನ್ನೈ ಫ್ರಾಂಚೈಸಿ, ಆಟಗಾರರನ್ನು ಮನೆಗೆ ತಲುಪಿಸಲು ವಿಮಾನದ ವ್ಯವಸ್ಥೆ ಮಾಡಿತ್ತು. ಈ ವಿಮಾನದಲ್ಲಿ ಮೊದಲು ವಿದೇಶಿ ಆಟಗಾರರು ತೆರಳಿದ ಬಳಿಕ ದೇಶೀಯ ಅಟಗಾರರು ತೆರಳಿ ನಂತರ ಕೊನೆಯವರಾಗಿ ಧೋನಿ ತೆರಳುವ ನಿರ್ಧಾರ ಕೈಗೊಂಡಿದ್ದರು. ಈ ಮೂಲಕ ತನ್ನ ತಂಡದ ಸದಸ್ಯರ ಬಗ್ಗೆ ಧೋನಿಗಿರುವ ಕಾಳಜಿಯನ್ನು ಮತ್ತೊಮ್ಮೆ ತೋರಿಸಿದ್ದಾರೆ.

ಐಪಿಎಲ್ ರದ್ದುಗೊಳ್ಳುತ್ತಿದ್ದಂತೆ ಸಿಎಸ್‍ಕೆ ತಂಡ ಆಟಗಾರರೆಲ್ಲ ಡೆಲ್ಲಿಯ ಹೋಟೆಲ್ ಒಂದರಲ್ಲಿ ಬಿಡುಬಿಟ್ಟಿದ್ದರು. ಅಲ್ಲಿ ಸಿಎಸ್‍ಕೆ ತಂಡ ಸುದೀರ್ಘವಾದ ಸಭೆಯೊಂದನ್ನು ನಡೆಸಿತ್ತು. ಈ ಸಭೆಯಲ್ಲಿ ಧೋನಿ ಚೆನ್ನೈ ಫ್ರಾಂಚೈಸಿಯೊಂದಿಗೆ ಆಟಗಾರರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದರ ಕುರಿತು ಮಾತನಾಡುವ ವೇಳೆ ಮೊದಲು ವಿದೇಶಿ ಆಟಗಾರರು ತೆರಳಲಿ ಬಳಿಕ ದೇಶೀಯ ಆಟಗಾರರು ತಮ್ಮ ತಮ್ಮ ಮನೆಗೆ ತೆರಳಲಿ ಬಳಿಕ ಕೊನೆಯದಾಗಿ ನಾನು ಮನೆ ಸೇರುತ್ತೇನೆ ಎಂದಿದ್ದರು. ಹಾಗಾಗಿ ಚೆನ್ನೈ ತಂಡದ ಆಡಳಿತ ಮಂಡಳಿ ಚಾರ್ಟರ್ ಫ್ಲೈಟ್ ಆಯೋಜನೆ ಮಾಡಿ ಆಟಗಾರರನೆಲ್ಲ ಮನೆಗೆ ಸುರಕ್ಷಿತವಾಗಿ ತಲುಪಿಸಿದೆ. ಬಳಿಕ ಧೋನಿ ತನ್ನ ಮಾತಿನಂತೆ ಗುರುವಾರ ಸಂಜೆ ತಮ್ಮ ರಾಂಚಿಯ ನಿವಾಸಕ್ಕೆ ತಲುಪಿದ್ದಾರೆ.

ಚೆನ್ನೈ ತಂಡದಿಂದ ಕಡೆಯವರಾಗಿ ಧೋನಿ ರಾಂಚಿಗೆ ಹೊರಡುತ್ತಿದ್ದಂತೆ, ಚೆನ್ನೈ ತಂಡದಲ್ಲಿ ಸೋಂಕಿತರಾಗಿದ್ದ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಮತ್ತು ಬೌಲಿಂಗ್ ಕೋಚ್ ಬಾಲಾಜಿ ಅವರನ್ನು ಏರ್ ಅಂಬ್ಯುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಕರೆತರಲಾಗಿದೆ. ಹಸ್ಸಿ ಕೊರೊನಾ ಸೋಂಕಿನಿಂದ ಚೇತರಿಕೆ ಕಂಡ ಬಳಿಕ ಆಸ್ಟ್ರೇಲಿಯಾಗೆ ತೆರಳಲು ಸೂಕ್ತ ವ್ಯವಸ್ಥೆ ಮಾಡಲು ಚೆನ್ನೈ ಆಡಳಿತ ಮಂಡಳಿ ನಿರ್ಧರಿಸಿದೆ.

ಚೆನ್ನೈ ತಂಡ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ತಾನಾಡಿದ 7 ಪಂದ್ಯಗಳಲ್ಲಿ, 5 ಪಂದ್ಯ ಗೆದ್ದು, 2 ಪಂದ್ಯ ಸೋತು, 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

The post ಎಲ್ಲರನ್ನು ಕಳುಹಿಸಿ ಕೊನೆಗೆ ಮನೆ ತಲುಪಿದ ಧೋನಿ appeared first on Public TV.

Source: publictv.in

Source link