– 13 ದಿನಗಳಲ್ಲಿ ನಿರ್ಮಾಣವಾದ ಸುಸಜ್ಜಿತ ಆಸ್ಪತ್ರೆ

ಹುಬ್ಬಳ್ಳಿ: ಎಲ್ಲರಿಗೂ ಲಸಿಕೆ ನೀಡುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ವಹಿಸಿಕೊಂಡಿದೆ. ಇನ್ನು ಮುಂದೆ ಲಸಿಕೆ ಸಮಸ್ಯೆಯಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದರು.

ನಗರದ ಕಿಮ್ಸ್ ಆವರಣದಲ್ಲಿ ವೇದಾಂತ ಆಸ್ಪತ್ರೆ ನಿರ್ಮಿಸಿರುವ 100 ಹಾಸಿಗೆಯ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮೊದಲು ಲಸಿಕೆ ಹಾಕಲು ಕೇಂದ್ರ ಸರ್ಕಾರ ಸಿದ್ಧವಿತ್ತು. ಆದರೆ ಕೆಲ ರಾಜ್ಯಗಳು ತಾವೇ ಲಸಿಕೆ ನೀಡುವುದಾಗಿ ಹೇಳಿದ್ದವು. ಹೀಗಾಗಿ ರಾಜ್ಯಗಳಿಗೆ ಜವಾಬ್ದಾರಿ ನೀಡಲಾಗಿತ್ತು. ಇದೀಗ ಮತ್ತೆ ಲಸಿಕೆ ನೀಡಲು ಕೇಂದ್ರಕ್ಕೆ ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಲಸಿಕೆ ನೀಡುವ ಜವಾಬ್ದಾರಿಯನ್ನು ಕೇಂದ್ರವೇ ಹೊತ್ತುಕೊಂಡಿದೆ. ಜೂ.21ರಿಂದ ಲಸಿಕೆ ನೀಡಲು ಶುರುಮಾಡಲಾಗುವುದು. ನವೆಂಬರ್- ಡಿಸೆಂಬರ್ ನೊಳಗೆ ಎಲ್ಲರಿಗೂ ಲಸಿಕೆ ನೀಡುವುದನ್ನು ಪೂರ್ಣಗೊಳಿಸಲಾಗುವುದು ಎಂದರು.

ಕೊರೊನಾ 3ನೇ ಅಲೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಎದುರಿಸಲು ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. 2ನೇ ಅಲೆ ಬರುತ್ತದೆ ಎಂದು ತಜ್ಞರ ತಂಡ ತಿಳಿಸಿತ್ತು. ಆದರೆ ಇಷ್ಟೊಂದು ಗಂಭೀರವಾಗಿರುತ್ತದೆ. ಇಷ್ಟೊಂದು ಸಮಸ್ಯೆಯಾಗುತ್ತದೆ ಎಂದು ಯಾವ ತಜ್ಞರೂ ತಿಳಿಸಿರಲಿಲ್ಲ. ಹೀಗಾಗಿ ಪ್ರಾರಂಭದಲ್ಲಿ ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆಯಾಗಿತ್ತು. ಮೊದಲು ಇದ್ದ ಆಕ್ಸಿಜನ್ ಬೇಡಿಕೆಗೂ ಕೊರೊನಾ ತೀವ್ರವಾದಾಗ ಆಕ್ಸಿಜನ್ ಬೇಡಿಕೆ ಅಜಗಜಾಂತರವಾಗಿತ್ತು. ಬರೀ 8-10 ದಿನಗಳಲ್ಲಿ ಆಕ್ಸಿಜನ್ ಸಮಸ್ಯೆ ನಿರ್ವಹಿಸಿದೆವು. ವಿದೇಶಗಳಿಂದಲೂ ತರಿಸಿಕೊಂಡೆವು. ಇಲ್ಲೂ ಉತ್ಪಾದನೆ ಹೆಚ್ಚಿಸಿದೆವು. ಇದೀಗ ಆಕ್ಸಿಜನ್ ಸೇರಿದಂತೆ ಯಾವ ಸಮಸ್ಯೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಲ್ಲ ವಿಷಯವನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆಗಳಲ್ಲಿ ಗಾಳಿ ಮೂಲಕ ಆಕ್ಸಿಜನ್ ಉತ್ಪಾದನೆ ಮಾಡಲು ಘಟಕಗಳನ್ನು ನಿರ್ಮಿಸಿಕೊಂಡಿದ್ದೇವೆ. 42 ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್‍ಗಳನ್ನು ಮಾಡಲಾಗಿದೆ. ಮುಂದೆ ಯಾವುದೇ ಕಾರಣಕ್ಕೂ ಆಕ್ಸಿಜನ್ ಕೊರತೆಯಾಗದಂತೆ ನಿರ್ವಹಣೆ ಮಾಡುತ್ತೇವೆ. ವಿರೋಧ ಪಕ್ಷಗಳು ವಿನಾಕಾರಣ ಟೀಕಿಸುತ್ತಿವೆ. ಕೋವಿಡ್ ವಿಷಯದಲ್ಲಿ ರಾಜಕಾರಣ ಸಲ್ಲದು ಎಂದರು.

ವೇದಾಂತ ಆಸ್ಪತ್ರೆ ಕುರಿತು ಮಾತನಾಡಿದ ಪ್ರಹ್ಲಾದ್ ಜೋಶಿ, ಸದ್ಯ 2ನೇ ಅಲೆ ನಿಯಂತ್ರಣದಲ್ಲಿದೆ. ಈ ವೇಳೆ ಆಸ್ಪತ್ರೆ ಅಗತ್ಯವಿತ್ತಾ ಎಂಬ ಪ್ರಶ್ನೆಯನ್ನೂ ಕೆಲವರು ಕೇಳಿದ್ದಾರೆ. ಆದರೆ ವೇದಾಂತ ಕಂಪನಿಯವರು ನಮ್ಮ ಮನವಿ ಮೇರೆಗೆ ಆಸ್ಪತ್ರೆ ನಿರ್ಮಿಸಿಕೊಟ್ಟಿದ್ದಾರೆ. ಮೊದಲೇ ನಿರ್ಮಿಸಿ ಕೊಡಲು ಸಿದ್ಧವಿದ್ದರು. ಆದರೆ ಎಲ್ಲಿ ನಿರ್ಮಿಸಬೇಕೆಂಬ ಗೊಂದಲದಿಂದಾಗಿ ಕೊಂಚ ತಡವಾಯಿತು. 2ನೇ ಅಲೆಯ ಕೋವಿಡ್ ಸೋಂಕಿತರು ಕಡಿಮೆಯಾಗುತ್ತಿದ್ದಾರೆ. ಅವರನ್ನು ಇಲ್ಲಿಗೆ ಸ್ಥಳಾಂತರಿಸಿ ಅನ್ಯ ರೋಗಿಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ಅಲ್ಲದೆ 3ನೇ ಅಲೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಅದಕ್ಕೂ ಈ ಆಸ್ಪತ್ರೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.

ಮೇಕ್ ಶಿಪ್ಟ್ ನಡಿ ಬರೀ 13 ದಿನದಲ್ಲಿ ವೇದಾಂತ ಕಂಪನಿಯೂ ಈ ಆಸ್ಪತ್ರೆಯನ್ನು ನಿರ್ಮಿಸಿದ್ದು. ಇನ್ನೂ 15-20 ವರ್ಷ ಈ ಆಸ್ಪತ್ರೆ ಬಾಳಿಕೆಗೆ ಬರಲಿದೆ. ಅಲ್ಲಿವರೆಗೂ ಕಿಮ್ಸ್ ಆಡಳಿತ ಈ ಆಸ್ಪತ್ರೆಯನ್ನು ಬಳಸಿಕೊಳ್ಳಬೇಕು. ವೈದ್ಯರು ಸೇರಿದಂತೆ ಸಿಬ್ಬಂದಿ, ಔಷಧಿಯನ್ನು ಕಿಮ್ಸ್ ಕೊಡಲಿದೆ. ಉಳಿದ ನಿರ್ವಹಣೆಯನ್ನೂ ವೇದಾಂತ ಕಂಪನಿಯವರೇ ನಿರ್ವಹಿಸಲಿದ್ದಾರೆ ಎಂದು ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ನಮ್ಮ ಮನವಿಗೆ ಸ್ಪಂದಿಸಿ ಆಸ್ಪತ್ರೆ ನಿರ್ಮಿಸಿಕೊಟ್ಟಿದ್ದಕ್ಕೆ ವೇದಾಂತ ಕಂಪನಿಗೆ ಧನ್ಯವಾದ ಅರ್ಪಿಸಿದ್ದಾರೆ.

ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಮೊದಲು ಇದ್ದ ಆಕ್ಸಿಜನ್ ಬೇಡಿಕೆ ಈಗಿಲ್ಲ. ಆಸ್ಪತ್ರೆಗೆ ಅಗತ್ಯವಿರುವಷ್ಟು ಬಳಸಿಕೊಂಡು ಉಳಿದ ಆಕ್ಸಿಜನ್‍ನ್ನು ಕೈಗಾರಿಕೆಗಳಿಗೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೋವಿಡ್ ವಿಷಯದಲ್ಲಿ ಸಾಕಷ್ಟು ನಿಯಂತ್ರಣ ಸಾಧಿಸಿದ್ದೇವೆ. ಪಾಸಿಟಿವಿಟಿ ದರ ಇಳಿಕೆಯಾಗಿದೆ. 14ರಿಂದ ಅನ್‍ಲಾಕ್ ಮಾಡಲಾಗುತ್ತಿದೆ, ಹಾಗಂತ ಜನತೆ ಮೈಮರೆಯಬಾರದು. ಇನ್ನು ಮುಂದೆಯೂ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮುಂದುವರಿಸಬೇಕು ಎಂದರು.

ಬ್ಲ್ಯಾಕ್ ಫಂಗಸ್ ನಿಯಂತ್ರಣವಾಗುತ್ತಿದೆ. ಬ್ಲ್ಯಾಕ್ ಫಂಗಸ್ ರೋಗಿಗಳು ಗುಣಮುಖರಾಗುತ್ತಿದ್ದಾರೆ. ಅದಕ್ಕೆ ಬೇಕಾದ ವೈಯಲ್ಸ್ ಗಳು ಲಭ್ಯವಾಗುತ್ತಿವೆ. ಕೋವಿಡ್ ವಿಷಯದಲ್ಲಿ ಕಿಮ್ಸ್ ಕಾರ್ಯ ಶ್ಲಾಘನೀಯ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕೋವಿಡ್ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಅದರೊಂದಿಗೆ ಕೈಜೋಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಶಾಸಕರಾದ ಪ್ರದೀಪ್ ಶೆಟ್ಟರ್, ಅಮೃತ್ ದೇಸಾಯಿ, ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೇರಿದಂತೆ ಇತರರು ಇದ್ದರು. ಲಂಡನ್‍ನಲ್ಲಿರುವ ವೇದಾಂತ ಕಂಪನಿಯ ಚೇರಮನ್ ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವೇದಾಂತ ಕಂಪನಿಯ ಚೇರಮನ್ ಅನಿಲ್ ಅಗ್ರವಾಲ್ ಮಾತನಾಡಿ, ಕೋವಿಡ್ ನಿಯಂತ್ರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಉತ್ತಮ ಕೆಲಸ ಮಾಡಿದೆ. ಅದರಲ್ಲೂ ಧಾರವಾಡ ಜಿಲ್ಲೆಯಲ್ಲಿ ಯಾವೊಂದು ಸಮಸ್ಯೆಯಾಗದಂತೆ ಕೋವಿಡ್ ನಿರ್ವಹಿಸಿರುವುದು ಶ್ಲಾಘನೀಯ. ಇದಕ್ಕಾಗಿ ಅಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅಭಿನಂದನೆ ತಿಳಿಸುವುದಾಗಿ ಹೇಳಿದರು.

ರಾಜ್ಯದಲ್ಲಿ ಎರಡು ಆಸ್ಪತ್ರೆಗಳನ್ನು ನಿರ್ಮಿಸಿಕೊಟ್ಟಿದ್ದೇವೆ. ಕೋವಿಡ್ ಆಸ್ಪತ್ರೆ ನಿರ್ಮಿಸಿಕೊಡಲು ತಮ್ಮ ಕಂಪನಿಗೆ ಅವಕಾಶ ಕೊಟ್ಟಿದ್ದು ನಮಗೆ ಸಂತಸವನ್ನುಂಟು ಮಾಡಿದೆ. ಸಾಮಾಜಿಕ ಕಾರ್ಯದ ವಿಷಯದಲ್ಲಿ ಇನ್ನೂ ಏನಾದರೂ ನೆರವು ಬೇಕಾದರೆ ನಿಸ್ಸಂದೇಹವಾಗಿ ಮಾಡಿಕೊಡಲು ಸಿದ್ಧ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಅಮೃತ ದೇಸಾಯಿ, ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಸೇರಿದಂತೆ ಹಲವರಿದ್ದರು.

13 ದಿನದಲ್ಲಿ ನಿರ್ಮಾಣವಾದ ಸುಸಜ್ಜಿತ ಆಸ್ಪತ್ರೆ
ಚಿತ್ರದುರ್ಗದ ವೇದಾಂತ ಕಂಪನಿಯ ಅನಿಲ್ ಅಗರವಾಲ್ ಪೌಂಡೇಷನ್ ಕೋವಿಡ್ ನೆರವು ನೀಡುವುದಕ್ಕಾಗಿ ದೇಶದಲ್ಲಿ ಒಟ್ಟು ಹತ್ತು ಆಸ್ಪತ್ರೆಯನ್ನು ನಿರ್ಮಿಸಿಕೊಟ್ಟಿದೆ. ರಾಜ್ಯದ ಚಿತ್ರದುರ್ಗ ಹಾಗೂ ಹುಬ್ಬಳ್ಳಿ ಕಿಮ್ಸ್ ನಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಿಸಿದೆ. ಕಿಮ್ಸ್ ನಲ್ಲಿನ ಆಸ್ಪತ್ರೆ 100 ಹಾಸಿಗೆಯ ಆಸ್ಪತ್ರೆ. ಇದರಲ್ಲಿ 80 ಆಕ್ಸಿಜನ್ ಬೆಡ್‍ಗಳಿದ್ದರೆ, 20 ಐಸಿಯು ಬೆಡ್‍ಗಳಿವೆ. 20 ಐಸಿಯು ಬೆಡ್‍ಗಳ ಪೈಕಿ 10 ವೆಂಟಿಲೇಟರ್ ಬೆಡ್ ಗಳನ್ನು ನಿರ್ಮಾಣ ಮಾಡಲಾಗಿದೆ.

The post ಎಲ್ಲರಿಗೂ ಲಸಿಕೆ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು: ಜೋಶಿ appeared first on Public TV.

Source: publictv.in

Source link