ಎಲ್ಲರೂ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ; ಪ್ರತಾಪ್‌ಸಿಂಹ ಸಮಸ್ಯೆ ಸೃಷ್ಟಿ ಮಾಡುತ್ತಾರೆ: ಯುಟಿ ಖಾದರ್ ಟೀಕೆ | UT Khader on Hijab Row in Karnataka Pratap Simha Congress Politics CM Ibrahim in Mysuru


ಎಲ್ಲರೂ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ; ಪ್ರತಾಪ್‌ಸಿಂಹ ಸಮಸ್ಯೆ ಸೃಷ್ಟಿ ಮಾಡುತ್ತಾರೆ: ಯುಟಿ ಖಾದರ್ ಟೀಕೆ

ಶಾಸಕ ಯು.ಟಿ ಖಾದರ್ (ಸಂಗ್ರಹ ಚಿತ್ರ)

ಮೈಸೂರು: ಹಿಜಾಬ್ ಬಿಟ್ಟು ಕಿತಾಬ್ ಕೇಳಿ ಎಂದಿದ್ದ ಪ್ರತಾಪ್‌ ಸಿಂಹ ಹೇಳಿಕೆ ಬಗ್ಗೆ ಯು.ಟಿ. ಖಾದರ್ ವಾಗ್ದಾಳಿ ನಡೆಸಿದ್ದಾರೆ. ಸಂಸದ ಪ್ರತಾಪ್‌ ಸಿಂಹನಂತಹ ಮೂರ್ಖ ಯಾರೂ ಇಲ್ಲ. ತಂದೆ ಮುಖ್ಯನಾ?, ತಾಯಿ ಮುಖ್ಯನಾ ಅಂತ ಕೇಳಲು ಆಗುತ್ತಾ. ಮೂರ್ಖರ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ? ಊಟ ಬೇಕಾ?, ನೀರು ಬೇಕಾ ಅಂದ್ರೆ ಆಗುತ್ತಾ? ನೀವು ಪಾರಂಪರಿಕ, ಐತಿಹಾಸಿಕ‌ ಮೈಸೂರು ಸಂಸದರು. ಮೈಸೂರಿನ ಘನತೆ ಉಳಿಸಿ, ಅದಕ್ಕೆ ಕಪ್ಪುಚುಕ್ಕೆ ತರಬೇಡಿ. ಸಾಮಾನ್ಯವಾಗಿ ಎಲ್ಲರೂ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ. ಆದರೆ ಸಂಸದ ಪ್ರತಾಪ್‌ಸಿಂಹ ಸಮಸ್ಯೆಗೆ ಪರಿಹಾರ ಸಿಕ್ಕಾಗ ಸಮಸ್ಯೆ ಸೃಷ್ಟಿ ಮಾಡುತ್ತಾರೆ ಎಂದು ಕಾಂಗ್ರೆಸ್ ಮಾಜಿ ಸಚಿವ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಪ್ಪು ಎಕ್ಸ್‌ಪ್ರೆಸ್‌ ರೈಲು ಹೆಸರು ಬದಲಾವಣೆಗೆ ಪ್ರಸ್ತಾಪ ಹಿನ್ನೆಲೆ, ಟಿಪ್ಪು, ಒಡೆಯರ್ ಕೊಡುಗೆ ಮರೆಮಾಚಲು ಸಾಧ್ಯವಿಲ್ಲ. ಟಿಪ್ಪು ಎಕ್ಸ್‌ಪ್ರೆಸ್‌ಗೆ ಯಾವುದೇ ಹೆಸರಿಟ್ರೂ ಮರೆಮಾಚಲಾಗಲ್ಲ. ಪ್ರತಾಪ್‌ ಸಿಂಹ ಸಂಸದನಾದ ಮೇಲೆ ಎಷ್ಟು ರೈಲ್ವೆ ಟ್ರ್ಯಾಕ್ ಆಗಿದೆ? ಎಷ್ಟು ಹೊಸ ರೈಲು‌, ಹೊಸ ಜಂಕ್ಷನ್ ತಂದಿದ್ದಾರೆ? ಆ ಕೆಲಸ ನಿಮ್ಮದು, ಅದನ್ನು ಮೊದಲು ಹೇಳಿ. ಒಡೆಯರ್, ಟಿಪ್ಪು ಮಹನೀಯರು, ಇಬ್ಬರನ್ನೂ ಗೌರವಿಸಬೇಕು ಎಂದು ಮೈಸೂರಿನಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ಖಾದರ್ ಹೇಳಿದ್ದಾರೆ.

ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್‌, ಕೇಸರಿ ಶಾಲು ವಿವಾದದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕೋರ್ಟ್‌ ತೀರ್ಪಿನವರೆಗೂ ಹಿಂದಿನ ಪದ್ಧತಿ ಮುಂದುವರಿಯಲಿ. ಎಲ್ಲವನ್ನೂ ನ್ಯಾಯಾಲಯವೇ ಬಗೆಹರಿಸಲು ಸಾಧ್ಯವಾಗಲ್ಲ. ಕೋರ್ಟ್‌ ಹೊರಗೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು. ರಾಜ್ಯಸರ್ಕಾರವೇ ಮುಂದೆ ನಿಂತು ಸಮಸ್ಯೆ ಬಗೆಹರಿಸಬೇಕು. ಕೂಡಲೇ ಧಾರ್ಮಿಕ ಮುಖಂಡರು, ಸರ್ವ ಪಕ್ಷ ಸಭೆ ನಡೆಸಲಿ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಇಂತಹ ಸಮಸ್ಯೆ ಇರಲಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಸಮಸ್ಯೆ ಉಂಟು ಮಾಡಿದ್ದೇ ಬಿಜೆಪಿಯವರು ಎಂದು ಖಾದರ್ ಆರೋಪಿಸಿದ್ದಾರೆ.

ಸಿ.ಎಂ. ಇಬ್ರಾಹಿಂ ಅಪೇಕ್ಷೆ ಪಟ್ಟಿದ್ದು ಸಿಕ್ಕಿಲ್ಲ ಅಂತ ನೋವಿನಿಂದ ಮಾತನಾಡುತ್ತಿದ್ದಾರೆ

ಸಿ.ಎಂ. ಇಬ್ರಾಹಿಂ ಅಪೇಕ್ಷೆ ಪಟ್ಟಿದ್ದು ಸಿಕ್ಕಿಲ್ಲ ಅಂತ ನೋವಿನಿಂದ ಮಾತನಾಡುತ್ತಿದ್ದಾರೆ. ಪ್ಯಾಂಟ್ ಕೇಳಿದರೆ ಚಡ್ಡಿ ಕೊಟ್ಟಿದ್ದಾರೆ ಎಂಬ ಸಿ.ಎಂ. ಇಬ್ರಾಹಿಂ ಹೇಳಿಕೆ ವಿಚಾರವಾಗಿ, ಇಬ್ರಾಹಿಂಗೆ ಶಾಸಕ ಯು.ಟಿ.ಖಾದರ್ ಟಾಂಗ್ ಕೊಟ್ಟಿದ್ದಾರೆ. ಅವರು ಅಪೇಕ್ಷೆ ಪಟ್ಟಿದ್ದು ಪರಿಷತ್ ವಿಪಕ್ಷ ಸ್ಥಾನ. ನಮ್ಮದು ವಿಧಾನಸಭೆ, ಉಪ ನಾಯಕ ಸ್ಥಾನ ಕೊಟ್ಟಿದ್ದಾರೆ. ನಾನು ಎನ್‌ಎಸ್‌ಯೂಐ ಜಿಲ್ಲಾಧ್ಯಕ್ಷನಾಗಿ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷನಾಗಿ, ಕೆಪಿಸಿಸಿ ಸದಸ್ಯನಾಗಿ, ನಾಲ್ಕು ಬಾರಿ ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ನನ್ನನ್ನು ಪಕ್ಷ ಗುರುತಿಸಿ ಉಪ ನಾಯಕ ಸ್ಥಾನ ಕೊಟ್ಟಿದೆ ಎಂದು ಇಬ್ರಾಹಿಂಗೆ ಯು.ಟಿ. ಖಾದರ್ ಟಾಂಗ್ ಕೊಟ್ಟಿದ್ದಾರೆ.

TV9 Kannada


Leave a Reply

Your email address will not be published.