– ಅಧಿಕ ಸ್ಟಿರಾಯ್ಡ್ ಬಳಕೆ, ಮಧುಮೇಹ ಇದ್ದವರಿಗೆ ಬ್ಲ್ಯಾಕ್ ಫಂಗಸ್

ಬೆಂಗಳೂರು: ಬ್ಲ್ಯಾಕ್ ಫಂಗಸ್ ಕುರಿತು ಈಗಾಗಲೇ ಎಚ್ಚರ ವಹಿಸಿದ್ದು, ನಾಳೆಯಿಂದ ಬೌರಿಂಗ್ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಈ ವಿಶೇಷ ಚಿಕಿತ್ಸೆಯನ್ನು ಪ್ರಾರಂಭ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್‍ಗೆ ಸತತ 7 ವಾರಗಳ ಚಿಕಿತ್ಸೆ ಅವಶ್ಯಕತೆ ಇದೆ. ಒಬ್ಬ ವ್ಯಕ್ತಿಗೆ 2-3 ಲಕ್ಷ ಖರ್ಚು ಆಗುತ್ತೆ. ಉಚಿತವಾಗಿ ಚಿಕಿತ್ಸೆ ಕೊಡಿಸಲು ಸಿಎಂ ಜೊತೆ ಇಂದೇ ಮಾತನಾಡುತ್ತೇನೆ. ಸಮಸ್ಯೆ ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಹೋಗಿ ಚೆಕ್ ಮಾಡಿಸಿಕೊಳ್ಳಿ. ಅಧಿಕ ಸ್ಟಿರಾಯ್ಡ್ ಬಳಕೆ, ರೋಗ ನಿರೋಧಕ ಶಕ್ತಿ ಇರುವವರಿಗೆ ಬ್ಲ್ಯಾಕ್ ಫಂಗಸ್ ಬರುತ್ತದೆ. ಅಲ್ಲದೆ ಮಧುಮೇಹ ಇರುವವರಿಗೆ ಕೊರೊನಾ ಸೋಂಕು ತಗುಲಿದ ಬಳಿಕ ಇದು ಬರುತ್ತದೆ. ಮೂಗಿನ ಮೂಲಕ ಈ ಫಂಗಲ್ ಇನ್‍ಫೆಕ್ಷನ್ ಆಗುತ್ತೆ. ಚಿಕಿತ್ಸೆ ಸರಿಯಾಗಿ ಆಗದಿದ್ದರೆ ಸಾವು ಸಂಭವಿಸುತ್ತದೆ. ಮಹಾರಾಷ್ಟ್ರದಲ್ಲಿ ಕಾಣಿಸಿದ ಕೂಡಲೇ, ನೇತ್ರ ತಜ್ಞರ ಜೊತೆ ಚರ್ಚೆ ಮಾಡಿದ್ದೇವೆ ಈ ಕುರಿತು ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ವೈದ್ಯರ ಸಲಹೆ ಮೇರೆಗೆ ಸ್ಟಿರಾಯ್ಡ್ ಬಳಕೆ ಮಾಡಿ, ವೈದ್ಯರು ಅನಗತ್ಯವಾಗಿ ಸ್ಟಿರಾಯ್ಡ್ ಕೊಡಬಾರದು, ವೈದ್ಯರು ಎಚ್ಚರಿಕೆಯಿಂದ ಚಿಕಿತ್ಸೆ ಕೊಡಬೇಕು. ಇದುವರೆಗೂ ಎಷ್ಟು ಜನರಿಗೆ ಫಂಗಸ್ ಬಂದಿದೆ, ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇಲ್ಲ. ಇದಕ್ಕಾಗಿ ಸಮಿತಿ ರಚನೆ ಮಾಡಲಾಗುತ್ತದೆ. ಈ ಸಮಿತಿ ಸಲಹೆ ಕೊಡುತ್ತೆ ಎಂದು ವಿವರಿಸಿದರು.

ಬ್ಲ್ಯಾಕ್ ಫಂಗಸ್ ಔಷಧಿ ಕೊರತೆ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದಲ್ಲೇ ಈ ಔಷಧಿ ಕೊರತೆ ಇದೆ. ಈಗಾಗಲೇ 20 ಸಾವಿರ ವೈಲ್ಸ್ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ಕೇಂದ್ರ ಸಚಿವ ಸದಾನಂದಗೌಡರ ಜೊತೆ ಸಂಪರ್ಕದಲ್ಲಿದ್ದೇನೆ. ಕೇಂದ್ರ ಆರೋಗ್ಯ ಸಚಿವರ ಜೊತೆಯೂ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಯಾರೂ ಆತಂಕ ಪಡಬಾರದು ಎಂದರು.

ಬ್ಲ್ಯಾಕ್ ಫಂಗಸ್ ಬಗ್ಗೆ ಅಂಕಿ ಅಂಶ ಇಲ್ಲವೆಂದ ಸಚಿವರು ನಿರ್ಲಕ್ಷ್ಯದ ಉತ್ತರ ನೀಡಿದ್ದು, ಎಷ್ಟು ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿದೆ ಎಂಬ ಮಾಹಿತಿ ಇಲ್ಲ. ಇದರಿಂದ ಎಷ್ಟು ಸಾವಾಗಿದೆ ಎಂದು ನಿಖರವಾದ ಮಾಹಿತಿ ಇಲ್ಲ. ಖಾಸಗಿಯಾಗಿ ಅನೇಕರು ದಾಖಲಾಗಿದ್ದಾರೆ, ಹೀಗಾಗಿ ಮಾಹಿತಿ ಲಭ್ಯವಿಲ್ಲ. ಇದಕ್ಕಾಗಿ ತಜ್ಞರ ಸಮಿತಿ ರಚನೆ ಮಾಡುತ್ತಿದ್ದೇವೆ. ಅಂಕಿ ಅಂಶಗಳು, ಚಿಕಿತ್ಸೆ ವಿಧಾನದ ಬಗ್ಗೆ ಸಮಿತಿ ನಮಗೆ ಮಾರ್ಗದರ್ಶನ ನೀಡುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ನಿಂದ ಸ್ಟೀರಾಯ್ಡ್ ಇರುವ ಕಿಟ್ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಐಸಿಎಂಆರ್ ಸೂಚನೆ ಮತ್ತು ನಿಯಮದ ಅನ್ವಯ ನಾವು ಕಿಟ್ ಕೊಡುತ್ತಿದ್ದೇವೆ. ಯಾರಾದರೂ ಸಂಘ- ಸಂಸ್ಥೆಗಳು ಮುಂದೆ ಬಂದರೆ ಅವರ ಮೂಲಕ ಸಹ ಕಿಟ್ ವಿತರಣೆ ಮಾಡುತ್ತೇವೆ. ಆದರೆ ಯಾವುದೇ ನಿಯಮ ಪಾಲಿಸದೆ ಕಾಂಗ್ರೆಸ್ ನವರು ಕಿಟ್ ಕೊಡೊವುದು ಸರಿಯಲ್ಲ ಎಂದರು.

ಕೊರೊನಾ ಟೆಸ್ಟ್ ಕಡಿಮೆ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪತ್ರವನ್ನು ನೋಡುತ್ತೇನೆ. ಅವರ ಪತ್ರಕ್ಕೆ ಉತ್ತರ ಬರೆಯುತ್ತೇನೆ. ತಜ್ಞರು, ಟಾಸ್ಕ್ ಫೋರ್ಸ್ ನವರು ತೀರ್ಮಾನ ಮಾಡಲಾಗಿದೆ. ಸಂಖ್ಯೆ ಮುಖ್ಯವಲ್ಲ, ಪಾಸಿಟಿವಿಟಿ ದರ ಇಳೆಯೋದು ನಮಗೆ ಮುಖ್ಯ. ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಕಡಿಮೆ ಆಗುತ್ತಿದೆ. ಆದರೆ ಬೇರೆ ಜಿಲ್ಲೆಯಲ್ಲಿ ಕೇಸ್ ಹೆಚ್ಚಳ ಆಗಿದೆ, ಪಾಸಿಟಿವಿಟಿ ದರ ಸಹ ಹೆಚ್ಚಾಗುತ್ತಿದೆ. ಜನ ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಗೆ ಹೋಗಿರುವುದರಿಂದ ಹೆಚ್ಚಳ ಆಗಿರಬಹುದು. ಜಿಲ್ಲೆಗಳಲ್ಲಿ ನಾವು ಟೆಸ್ಟ್ ಕಡಿಮೆ ಮಾಡಿಲ್ಲ. ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಕಡಿಮೆ ಆಗಿರುವುದಕ್ಕೆ ಟೆಸ್ಟ್ ಕಡಿಮೆ ಮಾಡಿರಬಹುದು. ಇದನ್ನ ವಿಪಕ್ಷಗಳ ನಾಯಕರಿಗೆ ಮನವರಿಕೆ ಮಾಡುತ್ತೇವೆ ಎಂದರು.

ಇಂದು ವಿಶ್ವ ಡೆಂಗ್ಯೂ ದಿನಾಚರಣೆಯಾಗಿದ್ದು, ಡೆಂಗ್ಯೂ ಸೊಳ್ಳೆ ಮೂಲಕ ಹರಡುವ ರೋಗ. ನಮ್ಮಲ್ಲಿ ಪ್ರತಿ ವರ್ಷ 15-20 ಸಾವಿರ ಜನಕ್ಕೆ ಇದು ಬರುತ್ತೆ. ಮಳೆಗಾಲದಲ್ಲಿ ಇದು ಹೆಚ್ಚಳ ಆಗುವ ಸಾಧ್ಯತೆ ಇದೆ. ಶುಚಿತ್ವ ಇಲ್ಲದ ಕಡೆ ಸೊಳ್ಳೆ ಬಂದು ಈ ರೋಗ ಬರುತ್ತೆ, ಜನರು ಎಚ್ಚರಿಕೆಯಿಂದ ಇರಬೇಕು. ಹಗಲಿನಲ್ಲಿ ಈ ಸೊಳ್ಳೆ ಹೆಚ್ಚು ಕಚ್ಚುತ್ತೆ. ಎಲ್ಲರೂ ವಿಶೇಷ ಜಾಗೃತಿವಹಿಸಿ. ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಬಳಸಿ ರಕ್ಷಣೆ ಮಾಡಿಕೊಳ್ಳಿ. ಜ್ವರ, ತಲೆ ನೋವು, ವಾಂತಿ, ಮೈಕೈ ನೋವು, ರಕ್ತಸ್ರಾವ, ಹಲ್ಲಿನಲ್ಲಿ ರಕ್ತಸ್ರಾವ ಆಗೋದು ಈ ರೋಗದ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ ಎಂದು ತಿಳಿಸಿದರು.

The post ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ವಿಶೇಷ ಚಿಕಿತ್ಸೆ: ಸುಧಾಕರ್ appeared first on Public TV.

Source: publictv.in

Source link