BDA ಅಧ್ಯಕ್ಷ S R ವಿಶ್ವನಾಥ್ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಹಾಲಿ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರು ಎಸಿಬಿ ಅಧಿಕಾರಿಗಳು ಬಿಡಿಎ ಕಡತಗಳ ಒಂದೊಂದು ಹಾಳೆಯನ್ನೂ ಜಾಲಾಡುತ್ತಿರುವ ಬಗ್ಗೆ ಮತ್ತು ಬ್ರೋಕರ್ಗಳಿಂದ ತುಂಬಿದ್ದ ಬಿಡಿಎ ಆವರಣದಲ್ಲಿ ಸ್ಮಶಾನ ಮೌನ ಆವರಿಸಿರುವುದರ ಬಗ್ಗೆ ಮಾತನಾಡಿದ್ದಾರೆ. ಬಿಡಿಎ ಒಂದು ಕಾಲದಲ್ಲಿ ಜನಪರ, ಉತ್ತಮ ಸಂಸ್ಥೆ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಭ್ರಷ್ಟಾಚಾರ, ಅವ್ಯವಹಾರದ ಆರೋಪಗಳು ಕೇಳಿ ಬರುತ್ತಿವೆ. ನಾನು ಅಧ್ಯಕ್ಷನಾಗಿ ಒಂದು ವರ್ಷ ಆಗಿದೆ. ಸ್ವಚ್ಛ ಬಿಡಿಎ ಮಾಡುವುದು ನನ್ನ ಗುರಿಯಾಗಿತ್ತು. ನಾನು ಬಂದಾಗ ಭ್ರಷ್ಟಾಚಾರ ಮಾಡಿ ಸಿಕ್ಕಿ ಹಾಕಿಕೊಂಡವರ ವಿರುದ್ಧ ಕ್ರಮ ತೆಗೆದುಕೊಂಡೆವು. ಇದು ಸಾರ್ವಜನಿಕರ ಹಣಕಾಸು ವ್ಯವಹಾರ ನಡೆಸುವ ಸಂಸ್ಥೆ. ನಾನೂ ಸಹ ದೂರುಗಳನ್ನು ಎಸಿಬಿಗೆ ಕೊಟ್ಟಿದ್ದೇನೆ. ನಿನ್ನೆಯ ದಾಳಿಗೆ ಸಾಕಷ್ಟು ದೂರುಗಳು ಕೊಡಲಾಗಿತ್ತು. ನಾನೂ ಸಹ ಎಸಿಬಿ ಅಧಿಕಾರಿಗಳಿಗೆ ಕೆಲವು ದಾಖಲೆ ಕೊಡೋದಾಗಿ ಹೇಳಿದ್ದೇನೆ ಎಂದು ಹೇಳಿದ್ದಾರೆ.
ಬಿಡಿಎನಲ್ಲಿ ದಾಖಲೆಗಳೇ ಮಾಯವಾಗುತ್ತವೆ. ನಕಲಿ ದಾಖಲೆ ಕೊಟ್ಟು ನಿವೇಶನ ಪಡೆದವರಿದ್ದಾರೆ. ಏನೇ ಕ್ರಮ ಮಾಡಿದರೂ ಕೋರ್ಟ್ ನಲ್ಲಿ ಸ್ಟೇ ತೆಗೆದುಕೊಳ್ಳುತ್ತಾರೆ. ಕೆಲವು ಭ್ರಷ್ಟಾಚಾರಗಳನ್ನು ನಾನೂ ಕೂಡಾ ತಡೆಯಲು ಆಗಿಲ್ಲ. ಈಗ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ. ನಿನ್ನೆಯ ದಾಳಿಯಲ್ಲಿ ನಗದು ಹಣ ಸಿಕ್ಕಿಲ್ಲ ಅನ್ನಿಸುತ್ತದೆ. ನಿನ್ನೆ ಜನ ಬಂದಿದ್ದಾಗ ದಾಳಿ ಆಗಿದೆ. ಬ್ರೋಕರ್ ಗಳು ಇದ್ದಾಗ ದಾಳಿ ನಡೆಯಬೇಕಿತ್ತು. ನಾನೂ ಸಹ ಸಿಎಂಗೆ ವಿವರಣೆ ನೀಡಿದ್ದೇನೆ ಎಂದು ವಿಶ್ವನಾಥ್ ಹೇಳಿದ್ದಾರೆ.
ಇದನ್ನು ಓದಿ:
ಬಿಡಿಎ ಕಡತಗಳ ಒಂದೊಂದು ಹಾಳೆಯನ್ನೂ ಜಾಲಾಡುತ್ತಿರುವ ಎಸಿಬಿ, ಬ್ರೋಕರ್ಗಳಿಂದ ತುಂಬಿದ್ದ ಆವರಣದಲ್ಲಿ ಸ್ಮಶಾನ ಮೌನ