
ಎಸ್ಪಿಬಿ
SP Balasubrahmanyam Birth Anniversary:1966ರಲ್ಲಿ ಎಸ್ಪಿಬಿ ಮೊದಲ ಹಾಡನ್ನು ಹಾಡಿದ್ದರು. ಅವರ ಮೊದಲ ಗಾಯನ ಮೂಡಿ ಬಂದಿದ್ದು ತೆಲುಗಿನಲ್ಲಿ. ನಂತರ ಕನ್ನಡಕ್ಕೆ ಕಾಲಿಟ್ಟರು.
ಭಾರತ ಚಿತ್ರರಂಗ ಕಂಡ ಮಹಾನ್ ಗಾಯಕರಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಮ್ (S. P. Balasubrahmanyam) ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇಂದು (ಜೂನ್ 4) ಅವರ ಜನ್ಮದಿನ. ಅವರು ಬದುಕಿದ್ದರೆ ಇಂದು 76ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಈಗ ಅವರಿಲ್ಲದೆ ಎರಡನೇ ವರ್ಷದ ಜನ್ಮದಿನವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶುಭಾಶಯಗಳು ಹರಿದುಬಂದಿದೆ. ಸಾಕಷ್ಟು ಸೆಲೆಬ್ರಿಟಿಗಳು ತಮ್ಮಿಷ್ಟದ ಗಾಯಕನನ್ನು ನೆನೆದಿದ್ದಾರೆ.
1946ರಲ್ಲಿ ಜೂನ್ 4ರಂದು ಮದ್ರಾಸ್ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಮ್ ಜನಿಸಿದರು. ಇಂಜಿನಿಯರ್ ಆಗಬೇಕೆಂದುಕೊಂಡಿದ್ದ ಅವರು, ಸಂಗೀತದ ಮೇಲೂ ಅಪಾರ ಆಸಕ್ತಿ ಹೊಂದಿದ್ದರು. 1966ರಲ್ಲಿ ಎಸ್ಪಿಬಿ ಮೊದಲ ಹಾಡನ್ನು ಹಾಡಿದ್ದರು. ಅವರ ಮೊದಲ ಗಾಯನ ಮೂಡಿ ಬಂದಿದ್ದು ತೆಲುಗಿನಲ್ಲಿ. ನಂತರ ಕನ್ನಡಕ್ಕೆ ಕಾಲಿಟ್ಟರು.
ಎಸ್ಪಿಬಿಗೆ ಹಿಟ್ ಸಿಕ್ಕಿದ್ದು 1969ರಲ್ಲಿ. ಹಿರಿಯ ನಟ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ತಮ್ಮ ಅಡಿಮೈಪೆನ್ ಸಿನಿಮಾದಲ್ಲಿ ಎಸ್ಪಿಬಿ ಹಾಡಬೇಕು ಎಂದು ಇಚ್ಛಿಸಿದ್ದರು. ಈ ಚಿತ್ರದ ‘ಆಯಿರಾಮ್ ನಿಲವೆ.. ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ನಂತರ ಎಸ್ಪಿಬಿ ಹಿಂದಿರುಗಿ ನೋಡಲೇ ಇಲ್ಲ. ಎಸ್.ಪಿ. ಬಾಲಸುಬ್ರಹ್ಮಣ್ಯಮ್ ಅವರು ಕನ್ನಡ, ತಮಿಳು ತೆಲುಗು, ಹಿಂದಿ ಸೇರಿ 16 ಭಾಷೆಗಳಲ್ಲಿ 40 ಸಾವಿರ ಹಾಡನ್ನು ಹಾಡಿದ್ದಾರೆ.
ಹಲವು ಭಾಷೆಗಳನ್ನು ಮಾತನಾಡುವುದನ್ನು ಕಷ್ಟಪಟ್ಟಾದರೂ ಕಲಿಯಬಹುದು. ಆದರೆ, ಬೇರೆ ಭಾಷೆಯ ಸೊಗಡನ್ನು ಅರ್ಥ ಮಾಡಿಕೊಂಡು ಹಾಡುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಎಸ್ಪಿಬಿಗೆ ಅದು ನೀರು ಕುಡಿದಷ್ಟೇ ಸುಲಭದ ಮಾತಾಗಿತ್ತು. ಅವರು 16 ಭಾಷೆಗಳಲ್ಲಿ ಹಾಡಿ ಭೇಷ್ ಎನಿಸಿಕೊಂಡರು.