ಏಕದಿನ ಕ್ರಿಕೆಟ್​ನಲ್ಲಿ ತ್ರಿಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಆಸ್ಟ್ರೇಲಿಯಾ ಆಟಗಾರ..! | Steffan Nero smashed triple century in blind odi Australia vs New Zealand


Steffan Nero: ಎಡಗೈ ದಾಂಡಿಗನಾಗಿರುವ ಸ್ಟೀಫನ್ ನಿರೋ ಪ್ರಸ್ತುತ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲಿ ಅವರು ಸತತವಾಗಿ 3 ಶತಕ ಬಾರಿಸಿದ್ದಾರೆ.

2010 ರಲ್ಲಿ ಸಚಿನ್ ತೆಂಡೂಲ್ಕರ್ ಸೌತ್ ಆಫ್ರಿಕಾ ವಿರುದ್ದ ದ್ವಿಶತಕ ಬಾರಿಸುವ ತನಕ, ಏಕದಿನ ಕ್ರಿಕೆಟ್​ನಲ್ಲಿ ಡಬಲ್ ಸೆಂಚುರಿ ಸಾಧ್ಯನಾ ಎಂಬ ಪ್ರಶ್ನೆಯೊಂದಿತ್ತು. ಆದರೆ ಸಚಿನ್ ಡಬಲ್ ಸೆಂಚುರಿ ಸಿಡಿಸಿದ ಬೆನ್ನಲ್ಲೇ ಸೆಹ್ವಾಗ್, ರೋಹಿತ್ ಶರ್ಮಾ, ಮಾರ್ಟಿನ್ ಗಪ್ಟಿಲ್, ಫಖರ್ ಝಮಾನ್, ಕ್ರಿಸ್ ಗೇಲ್​ ದ್ವಿಶತಕ ಬಾರಿಸಿ ಅಬ್ಬರಿಸಿದ್ದರು. ಇದಾಗ್ಯೂ ಏಕದಿನ ಕ್ರಿಕೆಟ್​ನಲ್ಲಿ ಯಾರು ಕೂಡ ತ್ರಿಶತಕವನ್ನು ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ. ಆದರೀಗ ಏಕದಿನ ಕ್ರಿಕೆಟ್​ನಲ್ಲಿ ತ್ರಿಪಲ್ ಸೆಂಚುರಿ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ ಆಸ್ಟ್ರೇಲಿಯಾ ಆಟಗಾರ ಸ್ಟೀಫನ್ ನೀರೋ (Steffan Nero). ಅದು ಕೂಡ ಅಂಧರ ಕ್ರಿಕೆಟ್​ನಲ್ಲಿ ಎಂಬುದು ವಿಶೇಷ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸ್ಟೀಫನ್ ನೀರೋ ತ್ರಿಶತಕ ಬಾರಿಸಿ ಐತಿಹಾಸಿಕ ದಾಖಲೆ ಬರೆದಿದ್ದಾರೆ.

140 ಎಸೆತಗಳನ್ನು ಎದುರಿಸಿದ್ದ ನೀರೋ 49 ಫೋರ್​ ಹಾಗೂ 1 ಸಿಕ್ಸರ್​ ನೆರವಿನಿಂದ 309 ರನ್ ಗಳಿಸಿ ಅಜೇಯರಾಗಿ ಉಳಿದರು. ವಿಶೇಷ ಎಂದರೆ ನೀರೋ ಅಬ್ಬರದ ನೆರವಿನಿಂದ ಆಸ್ಟ್ರೇಲಿಯಾ ತಂಡವು ನಿಗದಿತ 40 ಓವರ್​ಗಳಲ್ಲಿ 541 ರನ್​ ಕಲೆಹಾಕಿತು. ಇದು ಅಂಧರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಯಾಗಿದೆ. ಇನ್ನು ಬೃಹತ್ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು ಕೇವಲ 272 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಆಸ್ಟ್ರೇಲಿಯಾ ತಂಡ 269 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಸ್ಟೀಫನ್ ನೀರೋ ಆಡಿದ ಈ ಇನ್ನಿಂಗ್ಸ್ ಅಂಧರ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿಶ್ವ ದಾಖಲೆಯಾಗಿದೆ. 1998 ರಲ್ಲಿ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನದ ಮಸೂದ್ ಜಾನ್ 262 ರನ್ ಗಳಿಸಿದ್ದು, ಇದುವರೆಗಿನ ವಿಶ್ವ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಮುರಿದು 309 ರನ್​ ಬಾರಿಸುವ ಮೂಲಕ ಸ್ಟೀಫನ್ ನೀರೋ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಎಡಗೈ ದಾಂಡಿಗನಾಗಿರುವ ಸ್ಟೀಫನ್ ನಿರೋ ಪ್ರಸ್ತುತ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲಿ ಅವರು ಸತತವಾಗಿ 3 ಶತಕ ಬಾರಿಸಿದ್ದಾರೆ. ಇದಕ್ಕೂ ಮುನ್ನ 113 ಮತ್ತು 101 ರನ್‌ಗಳ ಅಜೇಯ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಇದೀಗ ತ್ರಿಶತಕ ಸಿಡಿಸುವ ಮೂಲಕ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published.