ಬೆಂಗಳೂರು: ಭಾರೀ ಮಳೆಯ ನಡುವೆ ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಏರ್ಪೋರ್ಟ್ ರಸ್ತೆಯ ಬೆಟ್ಟಹಲಸೂರು ಕ್ರಾಸ್ ಬಳಿ ಅಪಘಾತ ಸಂಭವಿಸಿದ್ದು, ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿದೆ. ದೇವನಹಳ್ಳಿ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕಾರು ಬೆಟ್ಟಹಲಸೂರು ಬಳಿಯ ಫ್ಲೈ ಓವರ್ ಮೇಲೆ ಡಿವೈಡರ್ಗೆ ಡಿಕ್ಕಿಯಾಗಿದೆ. ಆ ಬಳಿಕ ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿನ ಮೇಲೆ ಹಾರಿ ಬಿದ್ದಿದೆ. ಪರಿಣಾಮ ಸ್ವಿಪ್ಟ್ ಕಾರಿನಲ್ಲಿದ್ದ ಮೂವರು ಕಾರಿನಲ್ಲೇ ಅಪ್ಪಚ್ಚಿಯಾಗಿದ್ದಾರೆ. ಕಾರಿನ ಅವಶೇಷಗಳಡಿ ಮೃತದೇಹಗಳು ಸಿಲುಕಿದ್ದು, ಅವುಗಳನ್ನು ಹೊರ ತೆಗೆಯುತ್ತಿರುವ ಕಾರ್ಯ ನಡೆದಿದೆ.
ಘಟನಾ ಸ್ಥಳಕ್ಕೆ ಚಿಕ್ಕಜಾಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರಿನಲ್ಲಿದ್ದ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಮಳೆ ಹಿನ್ನೆಲೆಯಲ್ಲಿ ರಸ್ತೆ ಕಾಣದೆ ಡಿವೈಡರ್ಗೆ ಕಾರು ಡಿಕ್ಕಿಯಾಗಿದ್ದು, ಬಳಿಕ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಘಟನೆ ಕುರಿತಂತೆ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.