ಟಾಷ್ಕೆಂಟ್‌ (ಉಜ್ಬೆಕಿಸ್ಥಾನ್‌) : ಭಾರತದ ಜೂನಿಯರ್‌ ವಿಶ್ವ ಚಾಂಪಿಯನ್‌ ಕಂಚಿನ ಪದಕ ವಿಜೇತೆ ಝಿಲ್ಲಿ ದಾಲಾ ಬೆಹರಾ ಏಶ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಸ್ವರ್ಣ ಪದಕ ಗೆದ್ದು ಸಂಭ್ರಮಿಸಿದ್ದಾರೆ. ವನಿತೆಯರ 45 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಅವರು ಈ ಸಾಧನೆಗೈದರು.

ಇದು ಈ ಕೂಟದಲ್ಲಿ ಭಾರತಕ್ಕೆ ಒಲಿದ ಎರಡನೇ ಪದಕ. ಇದಕ್ಕೂ ಮೊದಲು ಮೀರಾಬಾಯಿ ಚಾನು 49 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.ಸ್ನ್ಯಾಚ್‌ನಲ್ಲಿ 69 ಕೆ.ಜಿ., ಕ್ಲೀನ್‌ ಆ್ಯಂಡ್‌ ಜರ್ಕ್‌ ನಲ್ಲಿ 88 ಕೆ.ಜಿ. ಸೇರಿದಂತೆ ಒಟ್ಟು 157 ಕೆ.ಜಿ. ಭಾರವನ್ನೆತ್ತುವ ಮೂಲಕ ಝಿಲ್ಲಿ ಬಂಗಾರಕ್ಕೆ ಕೊರಳೊಡ್ಡಿದರು. ಆದರೆ ಒಲಿಂಪಿಕ್ಸ್‌ನಲ್ಲಿ 45 ಕೆ.ಜಿ. ವಿಭಾಗದ ಸ್ಪರ್ಧೆ ಇಲ್ಲದಿರುವುದರಿಂದ ಝಿಲ್ಲಿ ಸಂಭ್ರಮ ಈ ಕೂಟಕ್ಕಷ್ಟೇ ಮೀಸಲಾಯಿತು. ಬೆಳ್ಳಿ ಪದಕ ಫಿಲಿಪ್ಪೀನ್ಸ್‌ನ ಮೇರಿ ಫ್ಲೋರ್‌ ಡಯಾಜ್‌ ಪಾಲಾಯಿತು. ಅವರು ಒಟ್ಟು 135 ಕೆ.ಜಿ. ಭಾರ ಎತ್ತಿದರು (60 ಕೆ.ಜಿ. ಹಾಗೂ 75 ಕೆ.ಜಿ.). ಇದು ಕೇವಲ ಇಬ್ಬರು ಸ್ಪರ್ಧಿಗಳ ನಡುವಿನ ಫೈನಲ್‌ ಆಗಿತ್ತು.

ಇದನ್ನೂ ಓದಿ :ಅಂತಾರಾಷ್ಟ್ರೀಯ ವನಿತಾ ಹಾಕಿ ರೆಫ್ರಿ ಕೊಡಗಿನ ಅನುಪಮಾ ಕೋವಿಡ್‌ಗೆ ಬಲಿ

ಇದು ಝಿಲ್ಲಿ ಗೆದ್ದ ಮೊದಲ ಏಶ್ಯನ್‌ ಚಾಂಪಿಯನ್‌ಶಿಪ್‌ ಬಂಗಾರ. ಕಳೆದ ಋತುವಿನಲ್ಲಿ ಅವರು 162 ಕೆ.ಜಿ. ಭಾರ ವನ್ನೆತ್ತಿಯೂ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದರು.

ಮೀರಾಬಾಯಿಗೆ ಕಂಚು
49 ಕೆ.ಜಿ. ವಿಭಾಗದಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಮೀರಾಬಾಯಿ ಚಾನು ಕ್ಲೀನ್‌ ಆ್ಯಂಡ್‌ ಜರ್ಕ್‌ ನಲ್ಲಿ ವಿಶ್ವದಾಖಲೆ ಸ್ಥಾಪಿಸಿಯೂ ಕಂಚಿನ ಪದಕಕ್ಕೆ ಸಮಾಧಾನಪಡಬೇಕಾಯಿತು. ಅವರು ಒಟ್ಟು 205 ಕೆ.ಜಿ. ಭಾರವೆತ್ತಿದರು (86 ಕೆ.ಜಿ. ಪ್ಲಸ್‌ 119 ಕೆ.ಜಿ.). ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲಿ 119 ಕೆ.ಜಿ. ಎತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದರು. ಹಿಂದಿನ ದಾಖಲೆ 118 ಕೆ.ಜಿ. ಆಗಿತ್ತು. ಚೀನದ ಹೌ ಝಿಹುಯಿ ಸ್ನಾಚ್‌ನಲ್ಲಿ ನೂತನ ವಿಶ್ವದಾಖಲೆ ಸ್ಥಾಪಿಸಿ ಚಿನ್ನ ಗೆದ್ದರೆ (96 ಕೆ.ಜಿ. ಪ್ಲಸ್‌ 117 ಕೆ.ಜಿ.), ಚೀನದವರೇ ಆದ ಜಿಯಾಂಗ್‌ ಹ್ಯುವಾ ಬೆಳ್ಳಿಯನ್ನು ತಮ್ಮದಾಗಿಸಿಕೊಂಡರು.

ಕ್ರೀಡೆ – Udayavani – ಉದಯವಾಣಿ
Read More