ಚಿಕ್ಕಮಗಳೂರು: ಕಾಫಿನಾಡಿನ ಹೆಗ್ಗಳಿಕೆ, ಹಳ್ಳಿಗರ ಜೀವನಾಡಿಯಾಗಿದ್ದ ಜಿಲ್ಲೆಯ ಕೊಪ್ಪ ತಾಲೂಕಿನ ಸಹಕಾರಿ ಸಾರಿಗೆ ಸಂಸ್ಥೆಗೆ ಬೀಗ ಬಿದ್ದಿದೆ. ಆಡಳಿತ ಮಂಡಳಿ ಸಾಲ ಮರುಪಾವತಿ ಮಾಡದ ಹಿನ್ನೆಲೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಕಂಪನಿಯೂ ಸಾರಿಗೆ ಸಂಸ್ಥೆಗೆ ಸೇರಿದ 1 ಎಕೆರೆ 10 ಗುಂಟೆ ಜಾಗವನ್ನ ಮುಟ್ಟುಗೋಲು ಹಾಕಿಕೊಂಡಿದೆ.

ಸಂಸ್ಥೆಯ ಅಧ್ಯಕ್ಷ ಧರ್ಮಪ್ಪ ಹಾಗೂ ಆಡಳಿತ ನಿರ್ದೆಶಕರಾಗಿದ್ದ ಜಯಪ್ರಕಾಶ್ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಕಂಪನಿಗೆ ಸೇರಿದ ಆಸ್ತಿಯನ್ನು ಆಧಾರವಾಗಿ ನೀಡಿ 1.20 ಕೋಟಿ ರೂ. ಸಾಲ ಪಡೆದಿದ್ದರು. 2019ರ ಬಳಿಕ ಸಾಲವನ್ನು ಮರುಪಾವತಿ ಮಾಡಿರಲಿಲ್ಲ. ಶ್ರೀರಾಮ್ ಟ್ರಾನ್ಸ್ ಪೋರ್ಟ್ ಕಂಪನಿ ಅವರಿಗೆ ನೋಟಿಸ್ ಕೂಡ ನೀಡಿದ್ದರು. ಬಡ್ಡಿ ಸಹಿತ 1,31,41,210 ರೂ. ಮೊತ್ತವನ್ನು ನೀಡಲು ನಿರಾಕರಿಸಿದ ಕಾರಣ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಕಂಪನಿ ವಿರುದ್ಧ ಜಿಲ್ಲಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶದ ಅನ್ವಯ ಸೋಮವಾರ ತಾಲೂಕು ದಂಡಧಿಕಾರಿ ಪರಮೇಶ್ ನೇತೃತ್ವದಲ್ಲಿ ಸರ್ವೇ ನಂ 97ರಲ್ಲಿರುವ ಸಹಕಾರಿ ಸಾರಿಗೆ ಸಂಸ್ಥೆಗೆ ಸೇರಿದ 1 ಎಕರೆ 10 ಗುಂಟೆ ಆಸ್ತಿಯನ್ನ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಕಚೇರಿಗೆ ಬಾರದಂತೆ ಬೀಗ ಹಾಕಿದೆ.

ಈ ಸಹಕಾರ ಸಾರಿಗೆ ಬಸ್ಸಿನ ಚಕ್ರಗಳು ಚಿಕ್ಕಮಗಳೂರು ಸೇರಿ ಮಂಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಯ ಬೆಟ್ಟ-ಗುಡ್ಡಗಳ ಬಹುತೇಕ ಗ್ರಾಮವನ್ನ ಕಂಡಿವೆ. ಮಲೆನಾಡ ಕುಗ್ರಾಮಗಳ ಮನೆ-ಮನ ಬೆಸೆದ ಪರಿಗೆ ಏಷ್ಯಾದಲ್ಲೇ ಅತ್ಯುತ್ತಮ ಸಹಕಾರ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಾರ್ಮಿಕರೇ ಕಟ್ಟಿ, ಕಾರ್ಮಿಕರೇ ಮಾಲೀಕರಾಗಿ 6 ಬಸ್‍ನಿಂದ 76 ಬಸ್‍ಗೆ ಸಂಸ್ಥೆಯನ್ನ ತಂದಿದ್ದರು. ರಾಜ್ಯಕ್ಕೆ ಕೆಎಸ್‍ಆರ್‍ಟಿಸಿ ಮಲೆನಾಡಿಗೆ ಸಹಕಾರ ಸಾರಿಗೆ ಎಂಬ ನಾಣ್ಣುಡಿಯನ್ನ ಸ್ಥಳಿಯರೇ ಹುಟ್ಟುಹಾಕಿದ್ದರು. ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು, ವಿಧ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಶೇ.50 ರಿಯಾಯಿತಿ ಕೊಟ್ಟು, ದಟ್ಟಕಾನನದ ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಸಂಸ್ಥೆಗಿದೆ. ಅಂತಹ ಸಂಸ್ಥೆ ಸರ್ಕಾರದ ರೀತಿ-ನೀತಿ-ನಿರ್ಧಾರಗಳಿಂದ ತೀವ್ರ ಸಂಕಷ್ಟಕ್ಕೀಡಾಗಿ ಬಾಗಿಲು ಹಾಕುವ ಹೊಸ್ತಿಲಿಗೆ ಬಂದು ನಿಂತಿತ್ತು. ಇಂದು ಅಧಿಕೃತವಾಗಿ ಬೀಗ ಬಿದ್ದಂತಾಗಿದೆ.

1990ರಲ್ಲಿದ್ದ ಶಂಕರ್ ಟ್ರಾನ್ಸ್‍ಪೋರ್ಟ್ ಮುಚ್ಚಿದ ಬಳಿಕ ಅಲ್ಲಿದ್ದ ಕಾರ್ಮಿಕರು ತಮಗೆ ಬಂದ ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಸಂಸ್ಥೆ ಇದು. ಅಂದಿನಿಂದ ಈ ಬಸ್ ಮಲೆನಾಡ ಮನೆ-ಮನಗಳ ಮಧ್ಯೆ ಭಾಂದವ್ಯ ಬೆಸೆದಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಸಂಸ್ಥೆ ತನ್ನ ಸೇವೆಯನ್ನು ಸಂಪೂರ್ಣ ನಿಲ್ಲಿಸಿತ್ತು. ಪರಿಹಾರ ಹಾಗೂ ಸಹಕಾರಕ್ಕಾಗಿ ಸರ್ಕಾರದ ಕದ ಬಡಿದರೂ ಯಾವುದೇ ಉಪಯೋಗವಿಲ್ಲದಂತಾಗಿತ್ತು. ವರ್ಷಕ್ಕೆ ಒಂದೂವರೆ ಕೋಟಿ ಟ್ಯಾಕ್ಸ್, ಜೊತೆಗೆ, ರಿಯಾಯಿತಿ ಪಾಸ್ ಹೊರೆ. ಆದ್ದರಿಂದ ಡೀಸೆಲ್ ಸಬ್ಸಿಡಿ, ಟ್ಯಾಕ್ಸ್ ಕಡಿತ ಹಾಗೂ ಪಾಸ್‍ಗಳ ಉಳಿಕೆ ಹಣವನ್ನು ನೀಡುವಂತೆ ಸರ್ಕಾರದ ಸಹಕಾರದ ದಾರಿ ನೋಡುತ್ತಿತ್ತು. ಆದರೆ ಈ ಕಾರ್ಮಿಕರ ಸಹಕಾರ ಸಂಸ್ಥೆಗೆ ಸರ್ಕಾರದಿಂದ ಯಾವುದೇ ನೆರವು ಸಿಗಲಿಲ್ಲ. ಆದ್ದರಿಂದ ಸಂಸ್ಥೆ ಮಾಡಿದ ಸಾಲ ತೀರಿಸದ ಕಾರಣ ಇಂದು ಸಂಸ್ಥೆಗೆ ಬೀಗ ಬಿದ್ದಿದ್ದು, ಏಷ್ಯಾ ಖಂಡದಲ್ಲೇ ಮೊದಲ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ಸಂಸ್ಥೆ ತನ್ನ ಸಂಚಾರವನ್ನ ನಿಲ್ಲಿಸಿದೆ. ಸಂಸ್ಥೆಯಲ್ಲಿ ಕಾರ್ಮಿಕರಾಗಿದ್ದ ಸುಮಾರು 200ಕ್ಕೂ ಹೆಚ್ಚು ಜನ ಬೀದಿಗೆ ಬಿದ್ದಂತಾಗಿದೆ.

The post ಏಷ್ಯಾದ ಹೆಗ್ಗಳಿಕೆ, ಕಾಫಿನಾಡ ಕಾರ್ಮಿಕರ ಸಾರಿಗೆ ಸಂಸ್ಥೆಯ ಯುಗಾಂತ್ಯ appeared first on Public TV.

Source: publictv.in

Source link