ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‍ಸಿ) ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ 7ನೇ ಆರೋಪಿಯನ್ನು ಬೆಂಗಳೂರಿನ ಎನ್‍ಐಎ ಕೋರ್ಟ್ ಬಿಡುಗಡೆ ಮಾಡಿದೆ.

2005ರಲ್ಲಿ ಐಐಎಸ್‍ಸಿಯಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 4 ವರ್ಷದ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ತ್ರಿಪುರ ಮೂಲದ ಮೊಹಮ್ಮದ್ ಹಬೀಬ್‍ನನ್ನು(40) ಬಂಧಿಸಿತ್ತು.

7ನೇ ಆರೋಪಿಯಾಗಿ ಬಂಧನಕ್ಕೆ ಒಳಗಾಗಿದ್ದ ಮೊಹಮ್ಮದ್ ಹಬೀಬ್ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿಲ್ಲವೆಂದು ಅಭಿಪ್ರಾಯಪಟ್ಟು ನ್ಯಾಯಾಧೀಶ ಡಾ. ಕಸನಪ್ಪ ನಾಯಕ್ ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ.

ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮೊದಲನೇ ಆರೋಪಿ ಶಹಾಬುದ್ದೀನ್ ಅಹ್ಮದ್ 2008ರ ಪೊಲೀಸರ ತನಿಖೆಯಲ್ಲಿ ಹಬೀಬ್ ವಿರುದ್ಧ ಜಿಹಾದಿ ಕೃತ್ಯಗಳ ಕುರಿತು ಆರೋಪಿಸಿದ್ದ. ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆ ನಡೆಸಲು ಯೋಜನೆ ಹೊಂದಿದ್ದ ಆರೋಪ ಹಬೀಬ್ ಮೇಲಿತ್ತು. ಆದರೆ ಕೋರ್ಟ್ ಗೆ ಸೂಕ್ತ ಸಾಕ್ಷ್ಯಗಳನ್ನು ಸಲ್ಲಿಸಲು ವಿಫಲವಾದ ಹಿನ್ನೆಲೆ ಹಬೀಬ್ ನ ಬಿಡುಗಡೆಯಾಗಿದೆ.

ಏನಿದು ಪ್ರಕರಣ?
2005ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಶೂಟೌಟ್ ಪ್ರಕರಣ ನಡೆದಿತ್ತು. ಘಟನೆಯಲ್ಲಿ ದೆಹಲಿಯ ಅತಿಥಿ ಪ್ರೊಫೆಸರ್ ಎಂಸಿ ಪುರಿ ಮೃತಪಟ್ಟರೆ ಅನೇಕ ಮಂದಿಗೆ ಗಾಯಗಳಾಗಿತ್ತು. ಪ್ರಕರಣ ಸಂಬಂಧ ಮೊದಲು ಸದಾಶಿವ ನಗರ ಠಾಣೆಯಲ್ಲಿ ಎಫ್‍ಐಆರ್ ಆಗಿತ್ತು. ನಂತರ ಕೇಸ್ ಎನ್‍ಐಎಗೆ ವರ್ಗಾವಣೆಯಾಗಿತ್ತು.

ಈ ಕೇಸ್ ನಲ್ಲಿ 4 ವರ್ಷಗಳ ಹಿಂದೆ ಅರೆಸ್ಟ್ ಆಗಿದ್ದ ಹಬೀಬ್ ಜೈಲು ಸೇರಿದ್ದರೂ ಕೂಡ ಒಮ್ಮೆಯೂ ವಿಚಾರಣೆ ನಡೆಸಿರಲಿಲ್ಲ. ಇತ್ತಿಚೆಗೆ ಪ್ರಕರಣದಿಂದ ಬಿಡುಗಡೆ ಮಾಡುವಂತೆ ಸಿಆರ್ಪಿಸಿ ಸೆಕ್ಷನ್ 227ರ ಅಡಿ ಅರ್ಜಿ ಸಲ್ಲಿಸಿದ್ದ.

The post ಐಐಎಸ್‍ಸಿ ಶೂಟೌಟ್ ಕೇಸ್ – 7ನೇ ಆರೋಪಿ ಬಿಡುಗಡೆ appeared first on Public TV.

Source: publictv.in

Source link