13ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ ಅನ್ನ ಯುಎಇನಲ್ಲಿ ಆಯೋಜಿಸಿದ್ದ ಬಿಸಿಸಿಐ ಯಶಸ್ಸನ್ನ ಕಂಡಿತ್ತು. 60 ಪಂದ್ಯಗಳು ಸುಗಮವಾಗಿ ನಡೆದು ಮುಂಬೈ ಇಂಡಿಯನ್ಸ್​​ ಚಾಂಪಿಯನ್ಸ್​ ಪಟ್ಟಕ್ಕೂ ಏರಿತ್ತು. ಆದ್ರೆ, 14ನೇ ಆವೃತ್ತಿಯ ಐಪಿಎಲ್​ನಲ್ಲಿ ಬಯೋಬಬಲ್​ನಲ್ಲೇ ಕೊರೊನಾ ಕಂಟಕ ಕಾಣಿಸಿಕೊಳ್ತು. ಇದು ಕೊರೊನಾತಂಕದ ಮಧ್ಯೆಯೂ ಯಶಸ್ಸಿನ ಓಟ ನಡೆಸಿದ್ದ ಐಪಿಎಲ್​ಗೆ ಬ್ರೇಕ್​ ಬೀಳುವಂತೆ ಮಾಡ್ತು.

14ನೇ ಆವೃತ್ತಿ ಚುಟುಕು ಲೀಗ್​ಗೆ ಬ್ರೇಕ್​ ಬಿದ್ದು ವಾರಗಳೇ ಉರುಳಿವೆ. ಇದೀಗ ಉಳಿದ 31 ಪಂದ್ಯಗಳ ಆಯೋಜನೆಗೆ ಬಿಸಿಸಿಐ ಕಸರತ್ತನ್ನೂ ಆರಂಭಿಸಿದೆ. ಆದ್ರೆ, ಕಟ್ಟು ನಿಟ್ಟಿನ ಬಯೋಬಬಲ್​ ನಿಯಮಗಳು ಬ್ರೇಕ್​ ಆಗಿದ್ದೇಲ್ಲಿ..? ಅನ್ನೋ ಚರ್ಚೆ ಮಾತ್ರ ಇನ್ನೂ ನಿಂತಿಲ್ಲ. ಇದೀಗ ಸನ್​ರೈಸರ್ಸ್​​ ಹೈದ್ರಾಬಾದ್​​ ವಿಕೆಟ್​ ಕೀಪರ್​​​ ವೃದ್ಧಿಮಾನ್ ಸಹಾ ನೀಡಿರೋ ಹೇಳಿಕೆ ಈ ಚರ್ಚೆಯ ತೀವ್ರತೆಯನ್ನ ಇನ್ನಷ್ಟು ಹೆಚ್ಚಿಸಿದೆ.

ಯುಎಇನಂತೆ ಬಯೋಬಬಲ್ ಇಲ್ಲಿರಲಿಲ್ಲ..!
‘ಬಯೋಬಬಲ್ ಸುರಕ್ಷೆ ಕಡೆ ಗಮನ ಹರಿಸೋದು ಮಧ್ಯಸ್ಥದಾರರ ಜವಾಬ್ದಾರಿ. ನಾನು ಒಂದು ವಿಚಾರ ಹೇಳ್ತೇನೆ ಯುಎಇಯಲ್ಲಿ ಕಳೆದ ವರ್ಷ ಐಪಿಎಲ್ ನಡೆದಿದ್ದಾಗ ಒಬ್ಬನೇ ಒಬ್ಬ ಆಟಗಾರನಿಗೆ, ಸಿಬ್ಬಂದಿಗೆ ಸೋಂಕು ತಗುಲಿರಲಿಲ್ಲ. ಆದ್ರೆ, ಇಲ್ಲಿ ತಗುಲಿದೆ. ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ’
ವೃದ್ಧಿಮಾನ್​ ಸಾಹ, ಕ್ರಿಕೆಟಿಗ

ಯೆಸ್​​..! ಸ್ವತಃ ಬಯೋಬಬಲ್​ನಲ್ಲಿದ್ದ ಸನ್​ರೈಸರ್ಸ್​​ ಹೈದ್ರಾಬಾದ್​ ತಂಡದ ವಿಕೆಟ್​ ಕೀಪರ್​​​ ವೃದ್ಧಿಮಾನ್​ ಸಹಾ ಹೇಳಿದ ಮಾತುಗಳು. ಐಪಿಎಲ್​ ನಡುವೆಯೇ ಕೊರೊನಾ ಸೋಂಕಿಗೆ ತುತ್ತಾಗಿದ್ದ ಸಹಾ, ಗುಣಮುಖರಾದ ಬೆನ್ನಲ್ಲೇ ಬಯೋಬಬಲ್​ ಸುರಕ್ಷತೆಯ ಬಗ್ಗೆ ಮಾತನಾಡಿದ್ದಾರೆ. ಈ ಮಾತುಗಳೇ ಈಗ ಐಪಿಎಲ್​ ಆಡಳಿತ ಮಂಡಳಿಯ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನೆ ಹುಟ್ಟುವಂತೆ ಮಾಡಿದೆ.

14ನೇ ಆವೃತ್ತಿಯಲ್ಲಿ ಬಯೋಬಬಲ್​ ನಿಯಮಗಳೇ ಗಾಳಿಗೆ..?
ಆಡಳಿತ ಮಂಡಳಿಯ ಅಲಕ್ಷವೇ ಬಬಲ್​ ಕಂಟಕಕ್ಕೆ ಕಾರಣ..?
ಕೇವಲ ಸಹಾ ಹೇಳಿದ ಮಾತಿನಿಂದ ಮಾತ್ರವಲ್ಲ..! ಮೂಲಗಳ ಮಾಹಿತಿಯೂ ಕೂಡ ಆಡಳಿತ ಮಂಡಳಿಯ ನಿರ್ಲ್ಯಕ್ಷವೇ ಬಬಲ್​ ಒಳಗೆ ಕೊರೊನಾ ಸೋಂಕು ನುಸುಳಲು ಕಾರಣ ಅನ್ನೋದೇ ಆಗಿದೆ. ಕಳೆದ ಆವೃತ್ತಿಯಲ್ಲಿ ದುಬೈನಲ್ಲಿ ನಡೆದಾಗ ಎಲ್ಲರೂ ಬಯೋ ಸೆಕ್ಯೂರ್​​ ವ್ಯವಸ್ಥೆಯಲ್ಲಿರೊದು ಕಡ್ಡಾಯವಾಗಿತ್ತು. ಆದ್ರೆ, ಇಲ್ಲಿ ಈ ನಿಯಮ ಸಡಿಲಿಕೆಯಾಗಿತ್ತು. ಹೀಗಾಗಿ ದೆಹಲಿ ಮೈದಾನದ ಐವರು ಗ್ರೌಂಡ್​​ ಸ್ಟಾಪ್​ಗಳಿಂದಲೇ ಆಟಗಾರರಿಗೂ ಯಾಕೆ ಸೋಂಕು ತಗುಲಿರಬಾರದು ಎಂಬ ನೇರ ಪ್ರಶ್ನೆ ಟೀಕಾಕಾರಾರದ್ದು.

ಡೆಲ್ಲಿ, ಅಹಮದಾಬಾದ್​ನಲ್ಲಿ ನಡೆದ ಅಭ್ಯಾಸವೇ ಸೋಂಕಿಗೆ ದಾರಿ..?
ಈ ಆವೃತ್ತಿಯ ಟೂರ್ನಿಯಲ್ಲಿ ಡೆಲ್ಲಿ ಹಾಗೂ ಅಹಮದಾಬಾದ್​​ನಲ್ಲಿ ನಡೆಸಿದ ಅಭ್ಯಾಸವೇ ಬಬಲ್​ ಒಳಗೆ ಸೋಂಕಿನ ಪ್ರವೇಶಕ್ಕೆ ದಾರಿ ಮಾಡಿಕೊಡ್ತಾ ಎಂಬ ಚರ್ಚೆಯೂ ಈಗ ಹುಟ್ಟಿದೆ. ಈ ಎರಡೂ ನಗರಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ರೂ, ಅಲ್ಲಿ ಪಂದ್ಯ ಆಯೋಜಿಸಿದ್ದು ಮತ್ತು ಆಟಗಾರರ ಅಭ್ಯಾಸಕ್ಕೆ ಕ್ಲಬ್​ ಗ್ರೌಂಡ್​​​ಗಳನ್ನ ನೀಡಿದ್ದು ಮಹಾಮಾರಿ ಹಬ್ಬಲು ದಾರಿ ಮಾಡಿಕೊಡ್ತು ಅನ್ನೋದು ತಜ್ಜರ ಅಭಿಪ್ರಾಯವಾಗಿದೆ.

ಇದರ ಜೊತೆಗೆ ಟೂರ್ನಿಯನ್ನ 6 ನಗರಗಳಲ್ಲಿ ಆಯೋಜಿಸಿದ್ದು ಕೂಡ ಪ್ರಶ್ನೆಗೆ ಗುರಿ ಮಾಡಿದೆ. ಮುಂಬೈನ ವಾಂಖೆಡೆ, ಚೆನ್ನೈನ ಚೆಪಾಕ್​ನಲ್ಲಿ ಮೊದಲ ಹಂತದ ಪಂದ್ಯಗಳು ನಡೆದಾಗ ತಗುಲದ ಸೋಂಕು ಅಹಮದಾಬಾದ್​​, ದೆಹಲಿಗೆ ತೆರಳಿದ್ದಾಗ ತಗಿಲಿತ್ತು. ಜೊತೆಗೆ ಪಂದ್ಯ ವೀಕ್ಷಣೆಗೆ ಕ್ಲಬ್​ ಸದಸ್ಯರಿಗೆ ಅನುವನ್ನೂ ಮಾಡಿಕೊಡಲಾಗಿತ್ತು. ಈ ಅಂಶಗಳೂ ಬಬಲ್​ನಲ್ಲೂ ಕೊರೊನಾ ಕಂಟಕವಾಗಲು ಕಾರಣವಾಯ್ತಾ ಅನ್ನೋ ಅನುಮಾನ ಹುಟ್ಟಿಹಾಕಿದೆ.

ಒಟ್ಟಿನಲ್ಲಿ ಕೊರೊನಾ ಮಹಾಮಾರಿ 14ನೇ ಆವೃತ್ತಿ ಐಪಿಎಲ್​ ಟೂರ್ನಿಯನ್ನಂತೂ ಅರ್ಧಕ್ಕೆ ನಿಲ್ಲುವಂತೆ ಮಾಡಿದೆ. ಇದರ ನಡುವೆಯೂ ಬಿಸಿಸಿಐ ಮೊಟಕುಗೊಂಡ ಟೂರ್ನಿಯನ್ನ ಮುಂದುವರೆಸುವ ಕಸರತ್ತನ್ನೂ ಆರಂಭಿಸಿದೆ. ಹೀಗಾಗಿ 14ನೇ ಆವೃತ್ತಿ ಐಪಿಎಲ್​ ಮುಂದುವರೆಯುತ್ತಾ..? ಇಲ್ವಾ..? ಅನ್ನೋ ಕುತೂಹಲ ಅಭಿಮಾನಿಗಳಲ್ಲಂತೂ ಹುಟ್ಟಿದೆ.

The post ಐಪಿಎಲ್​ನಲ್ಲಿ ಆಟಗಾರರಿಗೆ ಕೊರೊನಾ ಸೋಂಕು ತಗುಲಲು ಬಿಸಿಸಿಐ ಕಾರಣ..! appeared first on News First Kannada.

Source: newsfirstlive.com

Source link