ಭಾರತದಲ್ಲಿ ನಡೆದಿದ್ದ ಐಪಿಎಲ್​ ಟೂರ್ನಿಯ ವೇಳೆ ಕೋವಿಡ್ –19 ಕಾರಣದಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಹೇಳಿದ್ದಾರೆ. ‘ಆ ಸಂದರ್ಭದಲ್ಲಿ ಭಾರತದಲ್ಲಿ ಕೋವಿಡ್ ರೋಗಿಗಳು ಆಮ್ಲಜನಕ, ಚಿಕಿತ್ಸೆ ಸಿಗದೆ ಪರದಾಡಿದ ದೃಶ್ಯಗಳನ್ನು ಟಿ.ವಿ.ಗಳಲ್ಲಿ ನೋಡಿದ್ದ ನಮ್ಮ ಕುಟುಂಬದವರು ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದರು. ಜೊತೆಗೆ ನಾವು ಕೂಡ ಬೆದರಿದ್ದೆವು‘ ಎಂದು ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲಿ ಆಟಗಾರ ವಾರ್ನರ್​ ಕಾರ್ಯಕ್ರಮವೊಂದದಲ್ಲಿ ಹೇಳಿದ್ದಾರೆ.

ಜನರು ಕೋವಿಡ್‌ನಿಂದ ಮೃತರಾದ ತಮ್ಮ ಸಂಬಂಧಿಕರ ಅಂತಿಮ ಸಂಸ್ಕಾರಕ್ಕಾಗಿ ಶವಾಗಾರಗಳ ಬಳಿ ಸಾಲುಗಟ್ಟಿದ್ದ ದೃಶ್ಯಗಳನ್ನು ಮೈದಾನದಿಂದ ಹೋಟೆಲ್‌ಗೆ ಹೋಗುವ ಮಾರ್ಗಗಳಲ್ಲಿ ನಾವೇ ನೋಡಿದ್ದೇವೆ. ಆ ದೃಶ್ಯಗಳು ಮನಕಲಕಿದ್ದವು. ಅವೆಲ್ಲವೂ ಭಯಾನಕವಾಗಿದ್ದವು ಎಂದು ವಾರ್ನರ್ ನೆನಪಿಸಿಕೊಂಡಿದ್ದಾರೆ. ಮಾನವೀಯ ದೃಷ್ಟಿಕೋನದಿಂದ ನೋಡಿದಾಗ, ಐಪಿಎಲ್ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಿದ್ದು ಉತ್ತಮ ನಿರ್ಧಾರ.

ಅಲ್ಲಿಂದ ಹೊರಟು ಸ್ವದೇಶಕ್ಕೆ ಸೇರುವುದು ನಮಗೂ ಕಠಿಣ ಸವಾಲಾಗಿತ್ತು. ಭಾರತದಿಂದ ಆಸ್ಟ್ರೇಲಿಯಾಕ್ಕೆ ವಿಮಾನಯಾನ ನಿರ್ಬಂಧಿಸಲಾಗಿತ್ತು. ಆದರೂ ಲಭ್ಯವಿರುವ ಮಾರ್ಗಗಳ ಮೂಲಕ ನಮ್ಮನ್ನು ಸುರಕ್ಷಿತವಾಗಿ ತವರಿಗೆ ಕಳಿಸುವಲ್ಲಿ ಅಲ್ಲಿಯ ಆಡಳಿತ ಮತ್ತು ಆಯೋಜಕರು ತುಂಬ ಶ್ರಮಿಸಿದ್ದಾರೆ. ಚೆನ್ನಾಗಿಯೂ ನಿರ್ವಹಿಸಿದ್ದಾರೆ. ಭಾರತವು ಕ್ರಿಕೆಟ್ ಆಟವನ್ನು ಅಪಾರವಾಗಿ ಪ್ರೀತಿಸುವ ದೇಶ ಎಂದು ವಾರ್ನರ್ ಹೇಳಿದ್ದಾರೆ.

The post ಐಪಿಎಲ್ ಟೂರ್ನಿಯ ವೇಳೆ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು- ವಾರ್ನರ್ appeared first on News First Kannada.

Source: newsfirstlive.com

Source link