ಬೆಂಗಳೂರು: ಯಲಹಂಕದಲ್ಲಿ ಮತ್ತೊಮ್ಮೆ ಅಪಾರ್ಟ್ಮೆಂಟ್ಗೆ ಕೆರೆ ನೀರು ನುಗ್ಗಿದೆ. ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಕೋಗಿಲು ಕ್ರಾಸ್ ಬಳಿಯಿರುವ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ಗೆ ನೀರು ನುಗ್ಗಿದ್ದು, ಸುಮಾರು 605 ಮನೆಗಳಿರೋ ಅಪಾರ್ಟ್ಮೆಂಟ್ನಲ್ಲಿ 3 ಅಡಿ ನೀರು ನಿಂತಿದೆ.
ಇದರಿಂದಾಗಿ ಅಪಾರ್ಟ್ಮೆಂಟ್ ನಿವಾಸಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರೀ ಮಳೆಯಾಗುತ್ತಿರೋ ಹಿನ್ನಲೆ ಕೆರೆ ಕೋಡಿ ಒಡೆದು ಯಲಹಂಕ ಕೆರೆ ನೀರು ಅಪಾರ್ಟ್ಮೆಂಟ್ಗೆ ನುಗ್ಗಿದೆ. ಈ ಕುರಿತು ನ್ಯೂಸ್ಫಸ್ಟ್ ಜೊತೆ ನಿವಾಸಿಗಳು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.
ಬೆಳಗ್ಗೆಯಿಂದ ಸತತವಾಗಿ ಟ್ಯಾಕ್ಟರ್ ಮೂಲಕ ಅಪಾರ್ಟ್ಮೆಂಟ್ ನಿವಾಸಿಗಳನ್ನು ತಮ್ಮ ಬ್ಲಾಕ್ನಿಂದ ಮುಖ್ಯ ರಸ್ತೆಗೆ ಕರೆತರಲಾಗುತ್ತಿದೆ. ರಾತ್ರಿ ಇಡೀ ಮಳೆ ಸುರಿದ ಕಾರಣ ಏಕಾಏಕಿ ಅಪಾರ್ಟ್ಮೆಂಟ್ನಲ್ಲಿ ನೀರು ತುಂಬಿಕೊಟ್ಟಿತ್ತು. ಎಲ್ಲಿಯೂ ಹೋಗೋಕೆ ಆಗಲಿಲ್ಲ. ಮನೆಯಲ್ಲಿ ಕುಡಿಯೋಕೆ ಕೂಡ ನೀರು ಇಲ್ಲ. ಭಾರೀ ಪ್ರಮಾಣ ನೀರು ಬಂದಿರೋ ಹಿನ್ನೆಲೆಯಲ್ಲಿ ಕವರ್ ಕಟ್ ಮಾಡಿದ್ದಾರೆ. ಮನೆಯಿಂದ ಹೊರಗೆ ಬರಲು ಆಗುತ್ತಿಲ್ಲ. ಅದರಲ್ಲೂ ಹಿರಿಯರು ಹೆಣ್ಣು ಮಕ್ಕಳು ಬಹಳ ತೊಂದರೆ ಅನುಭವಿಸಿದ್ದಾರೆ ಎಂದು ಸ್ಥಳೀಯರು ನೋವು ತೊಡಿಕೊಂಡಿದ್ದಾರೆ.
ಇನ್ನೂ ಬೆಂಗಳೂರಿನಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದ್ದು ಸಮಸ್ಯೆ ಬಗೆಹರಿಸಲು ಸಿಎಂ ಸೂಚನೆ ನೀಡಿದ್ದಾರೆ. ನಿನ್ನೆ ಸಂಜೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ತುರ್ತು ಸಭೆ ಕರೆದಿದ್ದ ಬೊಮ್ಮಾಯಿ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು ಅವುಗಳನ್ನ ಮುಚ್ಚುವಂತೆ ಆದೇಶಿಸಿದ್ದಾರೆ. ಅಲ್ಲದೇ ಪ್ರತಿ ವಾರ್ಡ್ಮಟ್ಟದಲ್ಲಿ ತಲಾ 25 ಲಕ್ಷ ಬಿಡುಗಡೆ ಮಾಡಲಾಗಿದ್ದು ಹಣವನ್ನ ಗುಂಡಿ ಮುಚ್ಚಲು ಬಳಕೆ ಮಾಡಬೇಕಿದೆ. ಇದರ ಜೊತೆಗೆ ಹ್ಯಾಲೋಜನ್ ಲೈಟ್ ಅಳವಡಿಸಿ ಯಾವುದೇ ಅವಘಡ ಸಂಭವಿಸದಂತೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.