ಬೆಂಗಳೂರು: ಕೋವಿಡ್ ಸೋಂಕಿತರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಒಂದು ಕೋಟಿ ಕೊಲ್ಚಿಸಿನ್ ಟ್ಯಾಬ್ಲೆಟ್‍ಗಳನ್ನು ಕೂಡಲೇ ಪೂರೈಸಬೇಕು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಡಿದ್ದ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.

ರಾಜ್ಯದಲ್ಲಿ 5.17 ಲಕ್ಷದಷ್ಟು ಕೋವಿಡ್ ಸೋಂಕಿತರಿದ್ದು, ಒಂದು ಕೋಟಿಯಷ್ಟು ಕೊಲ್ಚಿಸಿನ್ ಟ್ಯಾಬ್ಲೆಟ್‍ಗಳನ್ನು ರಾಜ್ಯಕ್ಕೆ ಪೂರೈಕೆ ಮಾಡಬೇಕು ಎಂದು ಡಿಸಿಎಂ ಅವರು ಕೇಂದ್ರದ ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಈ ಬಗ್ಗೆ ಕೂಡಲೇ ಕ್ರಮ ವಹಿಸಿರುವ ಕೇಂದ್ರ ಸಚಿವರು, ಕೊಲ್ಚಿಸಿನ್ ಟ್ಯಾಬ್ಲೆಟ್ ತಯಾರಿಸುವ ಜೈದಸ್ ಕ್ಯಾಡಿಲ್ಲಾ ಕಂಪನಿಯ ಅಧ್ಯಕ್ಷ ಪಂಕಜ್ ಪಟೇಲ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ರಾಜ್ಯದ ಬೇಡಿಕೆಯಂತೆ ಅಷ್ಟೂ ಪ್ರಮಾಣದ ಕೊಲ್ಚಿಸಿನ್ ಟ್ಯಾಬ್ಲೆಟ್‍ಗಳನ್ನು ಪೂರೈಸಲು ಕಂಪನಿ ಒಪ್ಪಿಕೊಂಡಿದ್ದು, ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ಖರೀದಿ ಆದೇಶ ಕೊಟ್ಟ ಕೂಡಲೇ ಟ್ಯಾಬ್ಲೆಟ್‍ಗಳು ರಾಜ್ಯಕ್ಕೆ ಪೂರೈಕೆಯಾಗುತ್ತವೆ ಎಂದು ಕೇಂದ್ರ ಸಚಿವರು ತಮ್ಮ ಪತ್ರಕ್ಕೆ ಉತ್ತರ ಬರೆದು ತಿಳಿಸಿರುವುದಾಗಿ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.

The post ಒಂದು ಕೋಟಿ ಕೊಲ್ಚಿಸಿನ್ ಟ್ಯಾಬ್ಲೆಟ್ ಪೂರೈಕೆಗೆ ಕೇಂದ್ರದ ಒಪ್ಪಿಗೆ appeared first on Public TV.

Source: publictv.in

Source link