ಒಂದು ಗ್ಲಾಸ್ ನಿಂಬೆಪಾನಕ ಮಾರಿದ್ದಕ್ಕೆ ಪಡೆದಿದ್ದು ರೂ. 90,000! | Teen selling lemonade to collect money for soccer camp gets a sweet surprise


Soccer Camp : ಫುಟ್​ಬಾಲ್​ ಕ್ಯಾಂಪ್​ಗೆ ಹೋಗಬೇಕೆಂದರೆ ಅರ್ಧದಷ್ಟು ಹಣ ನೀನೇ ಭರಿಸಬೇಕು ಎಂದಿದ್ದಾರೆ ಈ ಹುಡುಗನ ತಂದೆ. ಈ ಸವಾಲು ಸ್ವೀಕರಿಸಿ ನಿಂಬೆಹಣ್ಣಿನ ಪಾನಕ ಮಾರಲು ಶುರು ಮಾಡಿದ್ದಾನೆ. ಮುಂದೇನಾಯಿತು? ವಿಡಿಯೋ ನೋಡಿ.

ಒಂದು ಗ್ಲಾಸ್ ನಿಂಬೆಪಾನಕ ಮಾರಿದ್ದಕ್ಕೆ ಪಡೆದಿದ್ದು ರೂ. 90,000!

ಇಷ್ಟೊಂದು ಹಣ!

Viral Video : ಅಮೆರಿಕದ ನಾಶ್ವಿಲ್ಲೆಯಲ್ಲಿ ರಣರಣ ಬಿಸಿಲು. ಹದಿಹರೆಯದ ಹುಡುಗನೊಬ್ಬ ಬೀದಿಬದಿ ನಿಂಬೆಪಾನಕ ಮಾರಿಕೊಂಡು ನಿಂತಿದ್ದಾನೆ. ಹೊಟ್ಟೆಪಾಡಿಗಾಗಿ ಅವನು ಹೀಗೆ ಪಾನಕ ಮಾರುತ್ತಿರಬಹುದು ಎಂದು ನೀವು ಊಹಿಸಿದರೆ ತಪ್ಪು. ಆತ ಫುಟ್​ಬಾಲ್​ ಕ್ಯಾಂಪ್​ಗೆ ಸೇರಲು ಹಣ ಹೊಂದಿಸಿಕೊಳ್ಳುತ್ತಿದ್ದಾನೆ. ಈತನ ತಂದೆ ಕ್ಯಾಂಪ್​ಗೆ ಸೇರಲು ಎಲ್ಲ ಹಣವನ್ನೂ ನಾನು ಭರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೇ ಸವಾಲಾಗಿ ಸ್ವೀಕರಿಸಿದ ಹುಡುಗ ಭಯಂಕರ ಬಿಸಿಲಿನಲ್ಲಿ ಈ ನಿಂಬೆಪಾನಕ ಮಾರುವ ಆಲೋಚನೆ ಮಾಡಿದ್ದಾನೆ. ಹೀಗವನು ಬೆವರಿಳಿಸಿಕೊಂಡು ದುಡಿಯುತ್ತ ನಿಂತಾಗ ಟಿಕ್​ಟಾಕರ್ ಲೆಕ್ಸಿ ಮತ್ತು ಆಸ್ಟಿನ್​ ಬರ್ಕ್​ ಎದುರಾಗಿದ್ದಾರೆ. ಈ ಹುಡುಗನಿಂದ ಒಂದು ಗ್ಲಾಸ್​ ಪಾನಕವನ್ನು ಖರೀದಿಸಿ ಸುಮಾರು ರೂ. 90,000 ಕೊಟ್ಟಿದ್ದಾರೆ! ಇಂಥ ಭಾರೀ ಮೊತ್ತವನ್ನು ನಿರೀಕ್ಷಿಸದ ಹುಡುಗನಿಗೆ ಇದೊಂದು ಭಯಂಕರ ಅಚ್ಚರಿ ತಂದಿದೆ.

ಈ ಹುಡುಗನೊಂದಿಗೆ ಮಾತಿಗಿಳಿದ ಟಿಕ್​ಟಾಕರ್ ಲೆಕ್ಸಿ ಆರಂಭದಲ್ಲಿ ಯಾಕೆ ಪಾನಕವನ್ನು ಮಾರುತ್ತಿರುವುದು, ಹಣಕ್ಕಾಗಿಯಾ? ಎಂದೆಲ್ಲ ಕೇಳುತ್ತಾಳೆ. ಆಗ ಆತ, ಫುಟ್​ಬಾಲ್ ಸ್ಪರ್ಧೆಗೆ ಪೋರ್ಚುಗಲ್​ಗೆ ಆಹ್ವಾನಿಸಿದ್ದಾರೆ. ಆದರೆ ಫುಟ್​ಬಾಲ್​ ಕ್ಯಾಂಪ್​ಗೆ ಬಹಳಷ್ಟು ಹಣ ಬೇಕಾಗುತ್ತದೆ. ನನ್ನ ತಂದೆ ಅರ್ಧದಷ್ಟು ಹಣವನ್ನು ನೀನೇ ಭರಿಸಬೇಕು ಎಂದಿದ್ದಾರೆ, ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾನೆ. ಇವನ ಮಾತಿನ ನಿಜಾಂಶವನ್ನು ಗ್ರಹಿಸಿದ ಲೆಕ್ಸಿ ಭಾರೀ ಮೊತ್ತದ ಹಣವನ್ನು ಕೊಟ್ಟು ಆತನನ್ನು ಅಚ್ಚರಿಗೊಳಿಸುತ್ತಾರೆ.

ಈ ವಿಡಿಯೋ ಅನ್ನು ಗ್ಲೋಬಲ್​ಪಾಸಿಟಿವ್​ನ್ಯೂಸ್​ ಇನ್​ಸ್ಟಾಗ್ರಾಮ್​ನಲ್ಲಿ ‘ನಿಮ್ಮ ಕನಸುಗಳನ್ನು ಬೆಂಬತ್ತಿ’ ಎಂಬ ಶೀರ್ಷಿಕೆ ಕೊಟ್ಟು ಪೋಸ್ಟ್ ಮಾಡಿದೆ. ಎರಡು ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಈತನಕ 20,000 ಜನರು ಇಷ್ಟಪಟ್ಟಿದ್ದಾರೆ. ‘ಈ ಹುಡುಗನ ಬದುಕು ಸಂಪೂರ್ಣವಾಗಿ ಹೊಸ ದಿಕ್ಕಿನಲ್ಲಿ ಸಾಗಿದೆ, ಅದ್ಭುತ!’ ಎಂದಿದ್ದಾರೆ ನೆಟ್ಟಿಗರೊಬ್ಬರು. ‘ಈ ವಿಡಿಯೋ ತುಂಬಾ ಖುಷಿ ನೀಡುತ್ತಿದೆ. ಒಳ್ಳೆಯ ಕೆಲಸಗಳನ್ನು ಮಾಡಲಿಚ್ಛಿಸುವವರಿಗೆ ಸಹಾಯ ಮಾಡುವುದನ್ನು ನಾನು ಮೆಚ್ಚಿಕೊಳ್ಳುತ್ತೇನೆ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಇದು ಎಂಥ ಬೆಚ್ಚನೆಯ ಭಾವ’ ಎಂದಿದ್ದಾರೆ ಮಗದೊಬ್ಬರು. ‘ಬಹಳ ಆಪ್ತ ಕ್ಷಣಗಳು, ಪಡೆದ ಬಹುಮಾನವು ನಿಸ್ಸಂಶಯವಾಗಿ ಇವನನ್ನು ಪ್ರೇರೇಪಿಸುತ್ತದೆ’ ಎಂದಿದ್ದಾರೆ ಇನ್ನೂ ಒಬ್ಬರು.

ಈ ವೀಡಿಯೊದ ಬಗ್ಗೆ ನಿಮ್ಮ ಅಭಿಪ್ರಾಯವೇನು?

TV9 Kannada


Leave a Reply

Your email address will not be published.