ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಮತ್ತೊಂದು ಮೆಗಾ ಪ್ಲಾನ್ ರೂಪಿಸಿದ್ದಾರೆ. ಇದು ಅಂತಿಂಥಾ ಪ್ಲಾನ್ ಅಲ್ಲ.. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯೋದನ್ನ ನಿವೆಲ್ಲ ನೋಡಿರ್ತೀರಾ. ಆದ್ರೆ. ಸದ್ಯ ರಮೇಶ್ ಜಾರಕಿಹೊಳಿ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯೋ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ರಮೇಶ್ ಜಾರಕಿಹೊಳಿ ಮತ್ತೆ ತಮ್ಮ ಹಳೇ ವರ್ಚಸ್ಸು ವೃದ್ಧಿಗೆ ರಣತಂತ್ರ ರೂಪಿಸಿದ್ದಾರೆ. ಒಂದೇ ಒಂದು ಪ್ಲಾನ್ನಿಂದ ತಮಗೆ ಎದುರಾದ ಎಲ್ಲ ಸಮಸ್ಯೆಗಳಿಗೂ ಇತಿಶ್ರೀ ಹಾಡೋಕೆ ಮುಂದಾಗಿದ್ದಾರಂತೆ.
ಹೌದು, ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂದೆ ರಮೇಶ್ ಜಾರಕಿಹೊಳಿ ಹೊಸ ಪ್ಲಾನ್ ಬಿಚ್ಚಿಟ್ಟಿದ್ದಾರೆ. ಸಹೋದರ ಲಖನ್ ಜಾರಕಿಹೊಳಿಯನ್ನ ಮುಂದಿಟ್ಟುಕೊಂಡು ರಮೇಶ್ ತಂತ್ರ ರೂಪಿಸಿದ್ದಾರೆ. ತಮ್ಮ ಪ್ಲಾನ್ನಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಲಖನ್ ಜಾರಕಿಹೊಳಿಯನ್ನ ಕಣಕ್ಕಿಳಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಮೂಲಕ ತಮ್ಮ ವಿರೋಧಿಯಾಗಿರೋ ಲಕ್ಷ್ಮೀ ಹೆಬ್ಬಾಳ್ಕರ್ ಹಣಿಯಲು ಸಾಹುಕಾರ್ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
2023ರ ಸಾರ್ವತ್ರಿಕ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಲಖನ್ ಜಾರಕಿಹೊಳಿಯನ್ನ ಕಣಕ್ಕಿಳಿಸೋದು. ಅಲ್ಲಿ ಲಖನ್ ಗೆದ್ದು ಶಾಸಕನಾದರೆ, ಅದರಿಂದ ತೆರವಾಗೋ ಪರಿಷತ್ ಸ್ಥಾನಕ್ಕೆ ಕವಟಗಿಮಠರನ್ನ ಸ್ಪರ್ಧೆಗಿಳಿಸಿ ಗೆಲ್ಲಿಸಿಕೊಂಡು ಬರೋದು. ಇದರಿಂದ ಒಂದೇ ಕಲ್ಲಿಗೆ 3 ಹಕ್ಕಿ ಹೊಡೆಯಬಹುದು ಎಂಬುದು ಸಾಹುಕಾರ್ ರಮೇಶ್ ಜಾರಕಿಹೊಳಿಯ ನಯಾ ಪ್ಲಾನ್.
ಒಂದೇ ಕಲ್ಲಿಗೆ 3 ಹಕ್ಕಿ!
ಮುಂಬರುವ 2023ರ ಸಾರ್ವತ್ರಿಕ ಚುನಾವಣೆಗೆ ಜಾರಕಿಹೊಳಿ ಬ್ರದರ್ಸ್ ಹೊಸ ಪ್ಲಾನ್ ರೂಪಿಸಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಓಟಕ್ಕೆ ಬ್ರೇಕ್ ಹಾಕಲು ತಂತ್ರ ರೂಪಿಸಿದ್ದಾರೆ. ಈಗಾಗ್ಲೆ ಈ ಬಗ್ಗೆ ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಮುಂದೆ ಪ್ರಸ್ತಾಪಿಸಲಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಬೇಕು. ಈ ಕ್ಷೇತ್ರದಲ್ಲಿ ಗೆಲ್ಲಬೇಕಾದ್ರೆ ಲಖನ್ ಜಾರಕಿಹೊಳಿಗೆ ಬಿಜೆಪಿ ಟಿಕೆಟ್ ನೀಡಬೇಕು. ಲಕ್ಷ್ಮೀ ಹೆಬ್ಬಾಳ್ಕರ್ ಮಣಿಸಲು ನಾನು ಮತ್ತು ಬಾಲಚಂದ್ರ ಇಬ್ಬರೂ ಶ್ರಮಿಸುತ್ತೇವೆ. ಲಕ್ಷ್ಮೀ ಹೆಬ್ಬಾಳ್ಕರ್ ಪರಾಭವಗೊಂಡರೆ, ಲಖನ್ ವಿಧಾನಸಭೆ ಪ್ರವೇಶಿಸುತ್ತಾರೆ. ಇದರಿಂದ ತೆರವಾಗುವ ಪರಿಷತ್ ಸ್ಥಾನಕ್ಕೆ ಮಹಾಂತೇಶ್ ಕವಟಗಿಮಠ ಆಯ್ಕೆ ಮಾಡಬಹುದು. ಈ ಮೂಲಕ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯಲು ಸಾಹುಕಾರ್ ರಣತಂತ್ರ ರೂಪಿಸಿದ್ದಾರೆ.
ಸಾಹುಕಾರ್ ಪ್ಲಾನ್ಗೆ ಕೇಸರಿ ನಾಯಕರು ಅಸ್ತು ಎನ್ನುತ್ತಾರಾ? ಅನ್ನೋದು ಈಗಿರೋ ಪ್ರಶ್ನೆ. ಅಸ್ತು ಎಂದಿದ್ದೇ ಆದಲ್ಲಿ ರಮೇಶ್ ಜಾರಕಿಹೊಳಿ ಅಂದುಕೊಂಡ ಪ್ಲಾನ್ ಸಕ್ಸಸ್ ಆಗುತ್ತಾ? ಅನ್ನೋ ಪ್ರಶ್ನೆಗಳು ಇದ್ದೇ ಇದೆ. ಒಂದ್ವೇಳೆ ಹೀಗಾಗಿದ್ದೆ ಆದಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತೆ ರಮೇಶ್ ಜಾರಕಿಹೊಳಿ ಪಾರುಪತ್ಯ ಆರಂಭವಾಗೋದ್ರಲ್ಲಿ ಎರಡು ಮಾತಿಲ್ಲ.