ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳನ್ನು ಹೊಡೆಯಲು ಡಿಕೆ ಶಿವಕುಮಾರ್ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು ಸಚಿವ ಶ್ರೀರಾಮುಲು | DKS’ intention behind Padayatre is to decay Siddaramaiah’s repute and stand sole claimant for CM’s post ARB


ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆ ಶೀಘ್ರ ಜಾರಿ ಆಗ್ರಹಿಸಿ ನಡೆಸುತ್ತಿರುವ ಪಾದಯಾತ್ರೆ ಕೇವಲ ಸ್ವಾರ್ಥ ಸಾಧನೆಗೆ ಮಾತ್ರ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಟೀಕಿಸಿದರು. ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಒಂದೇ ಸಮ ಹೆಚ್ಚುತ್ತಿರುವ ಅತ್ಯಂತ ಸೂಕ್ಷ್ಮ ಸಮಯದಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿರುವುದು ಬೇಜವಾಬ್ದಾರಿತನದ ಪ್ರತೀಕವಾಗಿದೆ ಎಂದು ಸಚಿವರು ಹೇಳಿದರು. ಚಿತ್ರದುರ್ಗದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತಾಡಿದ ಶ್ರೀರಾಮುಲು ಅವರು, ಅಧಿಕಾರದ ಲಾಲಸೆಯ ಸ್ವಾರ್ಥ ಮನೋಭಾವದಿಂದ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಯಶ ಕಾಣದು ಯಾಕೆಂದರೆ ಅವರು ಬಡವರನ್ನು ಕೊರೋನಾ ಸೋಂಕಿನ ಅಪಾಯಕ್ಕೆ ತಳ್ಳುತ್ತಿದ್ದಾರೆ ಎಂದು ಅವರು ಜರಿದರು.

ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿದ ಶ್ರೀರಾಮುಲು ಅವರು, ಕೆಪಿಸಿಸಿ ಅಧ್ಯಕ್ಷ ಒಂದೇ ಕಲ್ಲಿನಿಂದ ಮೂರು ಹಕ್ಕಿಗಳನ್ನು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಪಾದಯಾತ್ರೆಯ ಮೂಲಕ ಸಿದ್ದರಾಮಯ್ಯನವರ ವರ್ಚಸ್ಸು ಕಡಿಮೆ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ತಾನೊಬ್ಬನೇ ದಾವೇದಾರನಾಗಬೇಕು ಅನ್ನೋದು ಅವರ ಮೊದಲ ಗುರಿಯಾದರೆ, ಪಾದಯಾತ್ರೆಯಿಂದ ಜನರ ಪ್ರೀತಿ ಮತ್ತು ಅಭಿಮಾನ ಗಳಿಸಿ ಬಿಜೆಪಿಯನ್ನು ಸೋಲಿಸಬೇಕೆನ್ನುವುದು ಎರಡನೇ ಗುರಿಯಾಗಿದೆ. ಅವರ ಮೂರನೇಯ ಉದ್ದೇಶವೆಂದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಮೂಲೆಗುಂಪು ಮಾಡುವುದು ಎಂದು ಸಚಿವರು ಹೇಳಿದರು.

ಆದರೆ, ಡಿಕೆಶಿ ಚಾಪೆ ಕೆಳಗೆ ನುಸುಳಿದರೆ ಸಿದ್ದರಾಮಯ್ಯ ರಂಗೋಲಿ ಕೆಳಗೆ ನುಸುಳುವ ಆಸಾಮಿ, ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಮಾಜಿ ಮುಖ್ಯಮಂತ್ರಿಗಳು ತಮ್ಮ ವರ್ಚಸ್ಸಿಗೆ ಧಕ್ಕೆಯಾಗದಂತೆ ನೋಡಿಕೊಂಡಿದ್ದಾರೆ ಎಂದು ಶ್ರೀರಾಮುಲು ಹೇಳಿದರು.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಪ್ರಕರಣವೊಂದು ಸರ್ವೋಚ್ಛ ನ್ಯಾಯಾಲಯದಲ್ಲಿರುವುದರಿಂದ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿರುವುದು ಕೇವಲ ಅಧಿಕಾರದ ಆಸೆಗೆ ಅನ್ನೋದು ವಿದಿತವಾಗುತ್ತದೆ ಎಂದು ಸಚಿವರು ಹೇಳಿದರು.

TV9 Kannada


Leave a Reply

Your email address will not be published. Required fields are marked *