ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಮತ್ತು ಮೃತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಮೊದಲ ಬಾರಿಗೆ ಮೂರು ಸಾವಿರಕ್ಕೂ ಅಧಿಕ ಜನರು ಮಹಾಮಾರಿಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರತದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಮರಣ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೊನಾ ಎರಡನೇ ಅಲೆಯ ಆತಂಕ ಹೆಚ್ಚಾಗಿದೆ.

ಕಳೆದ 24 ಗಂಟೆಯಲ್ಲಿ 3,62,902 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 3,285 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 29,72,106 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರ ಸಂಖ್ಯೆ 1,79,88,637ಕ್ಕೆ ಏರಿಕೆಯಾಗಿದೆ. ಇದುವರೆಗೂ ಕೊರೊನಾದಿಂದ ಮೃತರಾದವರ ಸಂಖ್ಯೆ (2,01,165) ಎರಡು ಲಕ್ಷದ ಗಡಿ ದಾಟಿ ಮುನ್ನುಗುತ್ತಿದೆ. ಕೊರೊನಾದಿಂದ ಮೃತರ ಸಂಖ್ಯೆಯಲ್ಲಿ ಬಾರತ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ, ಬ್ರೆಜಿಲ್ ಮತ್ತು ಮೆಕ್ಸಿಕೋ ಮೊದಲ ಮೂರು ಸ್ಥಾನಗಳಲ್ಲಿವೆ.

ಮಹಾರಾಷ್ಟ್ರ, ದೆಹಲಿ, ಕರ್ನಾಟಕದಲ್ಲಿ ಭಯದ ವಾತಾವರಣ:
ಕೊರೊನಾ ಪೀಡಿತ ರಾಜ್ಯಗಳ ಪೈಕಿ ಮಹಾರಾಷ್ಟ್ರ, ಕರ್ನಾಟಕ ಮತ್ತು ರಾಜಧಾನಿ ದೆಹಲಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಹಾರಾಷ್ಟ್ರದಲ್ಲಿ ಪ್ರತಿ ದಿನ 60 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದು, 24 ಗಂಟೆಯಲ್ಲಿ 900 ಜನ ಸಾವನ್ನಪ್ಪುತ್ತಿದ್ದಾರೆ. ದೆಹಲಿಯಲ್ಲಿ 25 ಸಾವಿರ ಆಸುಪಾಸಿನಲ್ಲಿ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ.

ರಾಜ್ಯದಲ್ಲಿ ಕೊರೊನಾ ಮಹಾ ಸುನಾಮಿ ಆರ್ಭಟ ಮುಂದುವರಿದಿದ್ದು, ಮಂಗಳವಾರ ಸಹ ಬರೋಬ್ಬರಿ 31,830 ಪ್ರಕರಣಗಳು ಪತ್ತೆಯಾಗಿದ್ದು, 180 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3 ಲಕ್ಷ ಮೀರಿದ್ದು, ಈ ಮೂಲಕ ಮತ್ತಷ್ಟು ಆತಂಕವನ್ನುಂಟು ಮಾಡಿದೆ.

The post ಒಂದೇ ದಿನ 3 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿ- ಮೃತರ ಸಂಖ್ಯೆ 2 ಲಕ್ಷಕ್ಕೇರಿಕೆ appeared first on Public TV.

Source: publictv.in

Source link