
ಕಮಲ್ ಹಾಸನ್
ಕಮಲ್ ಹಾಸನ್ ನಟನೆ ಮತ್ತು ಲೋಕೇಶ್ ಕನಗರಾಜ್ ನಿರ್ದೇಶನಕ್ಕೆ ಪ್ರೇಕ್ಷಕರು ಭೇಷ್ ಎಂದಿದ್ದಾರೆ. ‘ವಿಕ್ರಮ್’ ಚಿತ್ರದ ಒಟಿಟಿ ಪ್ರಸಾರ ಹಕ್ಕುಗಳಿಗೆ ಒಳ್ಳೆಯ ಬೇಡಿಕೆ ಬಂದಿದೆ.
ನಟ ಕಮಲ್ ಹಾಸನ್ (Kamal Haasan) ಅವರ ಸಿನಿಮಾಗಳ ಮೇಲೆ ಜನರಿಗೆ ಇರುವ ಕ್ರೇಜ್ ಅಷ್ಟಿಷ್ಟಲ್ಲ. ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಅವರು ಈಗ ‘ವಿಕ್ರಮ್’ ಚಿತ್ರದ (Vikram Movie) ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಅದ್ದೂರಿಯಾಗಿ ಈ ಸಿನಿಮಾ ಮೂಡಿಬಂದಿದೆ. ಇಂದು (ಜೂನ್ 3) ವಿಶ್ವಾದ್ಯಂತ ಈ ಚಿತ್ರ ರಿಲೀಸ್ ಆಗಿದೆ. ಎಲ್ಲ ಕಡೆಗಳಲ್ಲಿ ಅತ್ಯುತ್ತಮವಾದ ಓಪನಿಂಗ್ ಸಿಕ್ಕಿದೆ. ಇದರಿಂದ ಬಾಕ್ಸ್ ಆಫೀಸ್ನಲ್ಲಿ ‘ವಿಕ್ರಮ್’ ಸಿನಿಮಾ ಭರಪೂರ ಕಮಾಯಿ ಮಾಡಲಿದೆ. ಆದರೆ ಅದಕ್ಕೂ ಮುನ್ನವೇ ಒಟಿಟಿ ಪ್ಲಾಟ್ಫಾರ್ಮ್ (OTT) ಮೂಲಕ ಈ ಚಿತ್ರಕ್ಕೆ 200 ಕೋಟಿ ರೂಪಾಯಿ ಬಿಸ್ನೆಸ್ ಆಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಒಟಿಟಿ ಮತ್ತು ಕಿರುತೆರೆ ಪ್ರಸಾರ ಹಕ್ಕುಗಳಿಂದ ಇಷ್ಟು ದೊಡ್ಡ ಮೊತ್ತ ಹರಿದುಬಂದಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ಕಮಲ್ ಹಾಸನ್ ಅವರ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಸಂಸ್ಥೆ ಬಂಡವಾಳ ಹೂಡಿದೆ.
‘ವಿಕ್ರಮ್’ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಕಮಲ್ ಹಾಸನ್ ಜೊತೆಗೆ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಕೂಡ ಮಿಂಚಿದ್ದಾರೆ. ಸೂರ್ಯ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಕಲಾವಿದರ ಕಾಂಬಿನೇಷನ್ ಕಾರಣದಿಂದ ಚಿತ್ರಕ್ಕೆ ಹೈವೋಲ್ಟೇಜ್ ಬಂದಂತೆ ಆಗಿದೆ. ಇದು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಹಾಗಾಗಿ ಚಿತ್ರದ ಒಟಿಟಿ ಪ್ರಸಾರ ಹಕ್ಕುಗಳಿಗೆ ಒಳ್ಳೆಯ ಬೇಡಿಕೆ ಬಂದಿದೆ.