ಒನಕೆ ಓಬವ್ವ ಜಯಂತಿ: ಕನ್ನಡದಲ್ಲೇ ಟ್ವೀಟ್​ ಮಾಡಿ ವೀರವನಿತೆಯ ಶೌರ್ಯ ಸ್ಮರಿಸಿದ ಪ್ರಧಾನಿ ಮೋದಿ | PM Narendra Modi pays tribute to Onake Obavva on her Jayanti today


ಒನಕೆ ಓಬವ್ವ ಜಯಂತಿ: ಕನ್ನಡದಲ್ಲೇ ಟ್ವೀಟ್​ ಮಾಡಿ ವೀರವನಿತೆಯ ಶೌರ್ಯ ಸ್ಮರಿಸಿದ ಪ್ರಧಾನಿ ಮೋದಿ

ಒನಕೆ ಓಬವ್ವನ ಪ್ರತಿಮೆ

ಇಂದು ವೀರವನಿತೆ ಒನಕೆ ಓಬವ್ವ ಜಯಂತಿ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲೇ ಟ್ವೀಟ್​ ಮಾಡಿ ಒನಕೆ ಓಬವ್ವನ ಸ್ಮರಣೆ ಮಾಡಿದ್ದಾರೆ. 18ನೇ ಶತಮಾನದ ಪಾಳೆಗಾರ ವೀರ ಮದಕರಿ ನಾಯಕನ ಆಡಳಿತದಲ್ಲಿ ಚಿತ್ರದುರ್ಗ ಕೋಟೆಯ ಕಾವಲುಗಾರನಾಗಿದ್ದ ಕಹಳೆ ಮದ್ದಹನುಮಪ್ಪನ ಪತ್ನಿ ಒನಕೆ ಓಬವ್ವನ ಸಾಹಸ ಇತಿಹಾಸದಲ್ಲಿ ಸದಾ ಹಸಿರು. ದಾಳಿ ಮಾಡಲು ಕಳ್ಳತನದಲ್ಲಿ ನುಗ್ಗಿದ ಹೈದರಲಿ ಸೈನಿಕರನ್ನು ತನ್ನ ಒನಕೆಯಲ್ಲೇ ಕೊಂದು ಬಿಸಾಕಿ, ಕೊನೆಗೆ ವೀರ ಮರಣವನ್ನಪ್ಪಿದ ಧೀರ ಮಹಿಳೆ ಇವರು. ಒನಕೆ ಓಬವ್ವನ ಜಯಂತಿಯನ್ನು ರಾಜ್ಯಾದ್ಯಂತ ನವೆಂಬರ್​ 11ಕ್ಕೆ ಆಚರಿಸುವಂತೆ ರಾಜ್ಯ ಸರ್ಕಾರ ಅಕ್ಟೋಬರ್​ನಲ್ಲಿಯೇ ಆದೇಶ ಹೊರಡಿಸಿತ್ತು. ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ವತಿಯಿಂದ ಈ ಜಯಂತಿ ಆಚರಣೆ ನಡೆಯಲಿದೆ ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಇಂದು ಒನಕೆ ಓಬವ್ವ ಜಯಂತಿ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿ, ವೀರವನಿತೆ ಒಕನೆ ಓಬವ್ವ ಜಯಂತಿ ವಿಶೇಷ ಸಂದರ್ಭದಲ್ಲಿ ಅವರಿಗೆ ನಮನ ಸಲ್ಲಿಸುತ್ತೇನೆ. ತನ್ನ ಜನರು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಅವರು ತೋರಿದ ಧೈರ್ಯವನ್ನು ಎಂದಿಗೂ, ಯಾರೂ ಮರೆಯಲು ಸಾಧ್ಯವಿಲ್ಲ. ಅವರು ನಾರಿಶಕ್ತಿಯ ಪ್ರತೀಕವಾಗಿ ನಮಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಹಾಗೇ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಕೂಡ ಟ್ವೀಟ್ ಮಾಡಿದ್ದು, ರಾಜ್ಯದ ಪ್ರತಿಯೊಬ್ಬರಿಗೂ ಒನಕೆ ಓಬವ್ವ ಜಯಂತಿಯ ಶುಭಾಶಯಗಳು. ಮಾತೃಭೂಮಿ ಮೇಲಿನ ಅವರ ಭಕ್ತಿ ಅನನ್ಯವಾದದ್ದು ಎಂದು ಹೇಳಿದ್ದಾರೆ. ಹಾಗೇ, ಸಂಸದ ಪ್ರತಾಪ್​ ಸಿಂಹ ಮತ್ತು ಕರ್ನಾಟಕ ಬಿಜೆಪಿ ಕೂಡ ಟ್ವೀಟ್​ ಮೂಲಕ ವೀರ ವನಿತೆ ಒನಕೆ ಓಬವ್ವ ಸ್ಮರಣೆ ಮಾಡಿದೆ.

ಇದನ್ನೂ ಓದಿ: ಡಿಸೆಂಬರ್ 1 ರಿಂದ ಪರಿಷ್ಕೃತ ಆಟೋ ಬಾಡಿಗೆ ಜಾರಿ, ಚಾಲಕರಿಗೆ ಸಂತಸ ಜನಸಾಮಾನ್ಯನಿಗೆ ಇನ್ನಷ್ಟು ಹೊರೆ!

TV9 Kannada


Leave a Reply

Your email address will not be published. Required fields are marked *